ಹೊಸಪೇಟೆ: ನಗರ ಸಹಿತ ಜಿಲ್ಲೆಯಾದ್ಯಂತ ಗಣೇಶ ಚೌತಿ ಮಳೆಯ ನಡುವೆಯೂ ಭಕ್ತಿಭಾವದಿಂದ ನಡೆಯುತ್ತಿದ್ದು, ಮೂರನೇ ದಿನವಾದ ಶುಕ್ರವಾರ ನಗರದಲ್ಲಿ 220 ಸಾರ್ವಜನಿಕ ಗಣಪತಿ ಸಹಿತ ಜಿಲ್ಲೆಯಲ್ಲಿ 1,462 ವಿನಾಯಕ ವಿಗ್ರಹಗಳ ವಿಸರ್ಜನೆ ನಡೆಯಲಿದೆ.
ಮೂರನೇ ಮತ್ತು ಐದನೇ ದಿನಗಳಲ್ಲಿ ಭಾರಿ ಸಂಖ್ಯೆಯಲ್ಲಿ ವಿಘ್ನ ವಿನಾಶಕನ ವಿಸರ್ಜನೆ ನಡೆಯುತ್ತದೆ, ಹೀಗಾಗಿ ಪೊಲೀಸ್ ಬಂದೋಬಸ್ತ್ ಸಹ ಹೆಚ್ಚಿಸಲಾಗಿದೆ. 800 ಪೊಲೀಸ್/ಗೃಹರಕ್ಷಕ ದಳ ಸಿಬ್ಬಂದಿ ಸಹಿತ ಮೂರು ಕೆಎಸ್‌ಆರ್‌ಪಿ ತುಕಡಿಗಳಿಂದ ನಿಗಾ ವಹಿಸಲಾಗಿದೆ. 13 ಮಂದಿ ಇನ್‌ಸ್ಪೆಕ್ಟರ್‌ಗಳು, ಮೂವರು ಡಿವೈಎಸ್‌ಪಿಗಳು ಬಂದೋಬಸ್ತ್‌ನ ಮೇಲ್ವಿಚಾರಣೆ ವಹಿಸಲಿದ್ದಾರೆ ಎಂದು ಎಸ್‌ಪಿ ಅರುಣಾಂಗ್ಷುಗಿರಿ ತಿಳಿಸಿದ್ದಾರೆ.
ಜಿಲ್ಲೆಯಲ್ಲಿ 2,030 ಸಾರ್ವಜನಿಕ ಗಣಪತಿಯ ಮೂರ್ತಿಗಳನ್ನು ಸ್ಥಾಪಿಸಲಾಗಿದ್ದು, ಹೊಸಪೇಟೆ ನಗರದಲ್ಲಿ 310, ಕಮಲಾಪುರದಲ್ಲಿ 69, ಮರಿಯಮ್ಮನಹಳ್ಳಿಯಲ್ಲಿ 109, ಹಂಪಿಯಲ್ಲಿ 15, ಕೂಡ್ಲಿಗಿಯಲ್ಲಿ 109, ಕೊಟ್ಟೂರಿನಲ್ಲಿ 115, ಕಾನಾಹೊಸಳ್ಳಿಯಲ್ಲಿ 117, ಹಗರಿಬೊಮ್ಮನಹಳ್ಳಿಯಲ್ಲಿ 135, ಹರಪನಹಳ್ಳಿಯಲ್ಲಿ 138, ಹಡಗಲಿಯಲ್ಲಿ 104, ಹಿರೇಹಡಗಲಿಯಲ್ಲಿ 145, ಇಟಿಗಿಯಲ್ಲಿ 100 ಸಾರ್ವಜನಿಕ ಗಣೇಶೋತ್ಸವಗಳು ಸೇರಿವೆ.
ಭವ್ಯ ಮೆರವಣಿಗೆ: ಗಣೇಶ ಚೌತಿಯ ಮೊದಲ ದಿನ ಬುಧವಾರ ಸಂಜೆ ನಗರ ಸಹಿತ ಜಿಲ್ಲೆಯ ವಿವಿಧೆಡೆ ಮಳೆ ಸುರಿದಿತ್ತು. ಹೀಗಿದ್ದರೂ ಒಂದು ದಿನದ ಪೂಜೆ ಸಲ್ಲಿಸಿ ವಿಸರ್ಜನೆ ಮಾಡುವಂತಹ ಗಣಪತಿ ವಿಗ್ರಹಗಳನ್ನು ಅದ್ಧೂರಿಯಾಗಿಯೇ ಬೀಳ್ಕೊಡಲಾಯಿತು. ದ್ವಿಚಕ್ರ ವಾಹನ, ಕಾರು, ಆಟೊ ರಿಕ್ಷಾ ಹಾಗೂ ಬೃಹತ್ ವಾಹನಗಳಲ್ಲಿ ವಿನಾಯಕ ಮೂರ್ತಿಗಳನ್ನು ಭಜನೆ, ಡೊಳ್ಳು ಹಾಗೂ ಸಕಲ ಮಂಗಳವಾದ್ಯಗಳೊಂದಿಗೆ ಮೆರವಣಿಗೆಯೊಂದಿಗೆ ಕೊಂಡೊಯ್ಯಲಾಯಿತು.
ನಗರದಲ್ಲಿ ಗಣಪತಿಯರ ವಿಶ್ವರೂಪ ದರ್ಶನವೇ ಆದಂತಿದ್ದು, ಮೇನ್ ಬಜಾರ್‌ನ ಹಿಂದೂ ಮಹಾಗಣಪ ಬೃಹತ್ ಆಕಾರದಲ್ಲಿ ಕಂಗೊಳಿಸುತ್ತಿದ್ದಾನೆ. ಪಟೇಲ್ ರಸ್ತೆ, ಬಳ್ಳಾರಿ ರಸ್ತೆ, ಚಿತ್ರಕೇರಿ, ಎಂ.ಪಿ.ಪ್ರಕಾಶನಗರ, ಆಕಾಶವಾಣಿ, ಸಂಡೂರ್ ರಸ್ತೆ, ಹಂಪಿ ರೋಡ್, ಟಿ.ಬಿ.ಡ್ಯಾಂ, ಸ್ಟೇಷನ್ ಏರಿಯಾ, ಚಾಪಲಗಟ್ಟ ಭಾಗದಲ್ಲಿ ಹತ್ತಾರು ಗಣೇಶ ಮೂರ್ತಿಗಳು ಪೂಜಿಸಲ್ಪಡುತ್ತಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.