ಹೂವಿನಹಡಗಲಿ: ‘ದೇವರು, ದೈವದ ಹೆಸರಲ್ಲಿ ಕುರಿಗಳನ್ನು ಬಲಿ ಕೊಡುವುದು ಹಾಲುಮತದ ಸಂಸ್ಕೃತಿಯಲ್ಲ. ಇಂತಹ ಮೌಢ್ಯ ಆಚರಣೆ ಮಾಡುವ ಮನೆತನಗಳಿಗೆ ದಾರಿದ್ರ್ಯ ಆವರಿಸುತ್ತದೆ’ ಎಂದು ಕಾಗಿನೆಲೆ ಪೀಠದ ತಿಂಥಿಣಿ ಬ್ರಿಜ್ ಶಾಖಾ ಮಠದ ಸಿದ್ದರಮಾನಂದಪುರಿ ಸ್ವಾಮೀಜಿ ಎಚ್ಚರಿಸಿದರು.
ಪಟ್ಟಣದ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಹಾಲುಮತ ಧರ್ಮ ಮತ್ತು ಪರಿಸರ ಜಾಗೃತಿಗಾಗಿ ಶ್ರಾವಣ ಮಾಸದ ಯಾತ್ರೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಹಾಲುಮತವು ಜೀವ ಪ್ರಿಯ ಧರ್ಮವಾಗಿದೆ. ದೇವರ ಹೆಸರಲ್ಲಿ ಕುರಿ ಕಡಿಯುವುದು ಹಾಲುಮತ ಸಂಸ್ಕೃತಿಯಲ್ಲ. ಮಾಂಸಹಾರಕ್ಕೆ ನಮ್ಮ ಅಭ್ಯಂತರವಿಲ್ಲ, ದೈವದ ಹೆಸರಲ್ಲಿ ಬಲಿ ಕೊಡಬಾರದು. ಸಮುದಾಯದವರು ಹಾಲುಮತ ಸಂಸ್ಕೃತಿ, ಸಂಪ್ರದಾಯ ಪಾಲಿಸುವುದರಿಂದ ಮಕ್ಕಳೂ ಅದನ್ನು ಅನುಕರಿಸುತ್ತಾರೆ. ಮುಂದಿನ ಪೀಳಿಗೆಗೆ ಆಸ್ತಿ ವರ್ಗಾವಣೆಯ ಜತೆಗೆ ನಮ್ಮ ಸಂಸ್ಕೃತಿಯನ್ನೂ ವರ್ಗಾಯಿಸಬೇಕು’ ಎಂದು ತಿಳಿಸಿದರು.
‘ಹಾಲುಮತದವರು ಮೂಲತಃ ಪ್ರಕೃತಿ ಆರಾಧಕರು. ಮಕ್ಕಳು, ತಂದೆ ತಾಯಿ ಹೆಸರಲ್ಲಿ ಗಿಡಮರಗಳನ್ನು ಗಿಡಗಳನ್ನು ನೆಟ್ಟು ಸಂರಕ್ಷಿಸುವುದರಿಂದ ಜೀವಸಂಕುಲಕ್ಕೆ ಅನ್ನ ಹಾಕಿದ ಪುಣ್ಯ ಬರುತ್ತದೆ. ಈ ಸಮುದಾಯದವರು ಶ್ರೀರಾಮ, ಕೃಷ್ಣನ ಚರಿತ್ರೆಗಿಂತ ಬೀರಪ್ಪ, ಮೈಲಾರಲಿಂಗ, ರೇವಣಸಿದ್ದೇಶ್ವರನ ಚರಿತ್ರೆಗಳನ್ನು ಅರಿಯಬೇಕು’ ಎಂದು ಹೇಳಿದರು.
ಶ್ರೀರಾಮ ದೇವಸ್ಥಾನ ಧರ್ಮದರ್ಶಿ ಡಾ.ರಾಕೇಶಯ್ಯ ಸಾನ್ನಿಧ್ಯ ವಹಿಸಿದ್ದರು. ಮುಖಂಡ ಎಚ್.ಬಿ.ಪರಶುರಾಮಪ್ಪ ಉದ್ಘಾಟಿಸಿದರು. ರಾಜ್ಯ ಕುರುಬರ ಸಂಘದ ನಿರ್ದೇಶಕ ಬಿ.ಹನುಮಂತಪ್ಪ ಮಾತನಾಡಿದರು. ತಾಲ್ಲೂಕು ಕುರುಬರ ಸಂಘದ ಅಧ್ಯಕ್ಷ ಹೊಸ್ಕೇರಿ ಬೀರಪ್ಪ ಅಧ್ಯಕ್ಷತೆ ವಹಿಸಿದ್ದರು. ಮುಖಂಡರಾದ ಈಟಿ ಲಿಂಗರಾಜ, ಡಿ.ವಿರುಪಣ್ಣ, ಕೆ.ಪ್ರಕಾಶ್, ಈಟಿ ಮಾಲತೇಶ, ಎಚ್.ಡಿ.ಜಗ್ಗಿನ, ಗುರುವಿನ ರವೀಂದ್ರ, ಎಸ್.ಮಲ್ಲಿಕಾರ್ಜುನ ಇತರರು ಇದ್ದರು.
ಕುರಿಗಳು ತಲೆ ತಗ್ಗಿಸಿ ನಡೆಯಬಹುದು. ಆದರೆ ಕಾಗಿನೆಲೆ ಪೀಠ ಕುರುಬರನ್ನು ತಲೆಯೆತ್ತಿ ನಡೆಯುವಂತೆ ಮಾಡಿದೆ. ಸಮುದಾಯದವರಿಗೆ ಧಾರ್ಮಿಕ ಜಾಗೃತಿ ಬೆಳೆಸಿಕೊಳ್ಳಬೇಕುಎಂ.ಪರಮೇಶ್ವರಪ್ಪ ಹಡಗಲಿ ಹಿರಿಯ ಮುಖಂಡರು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.