
ಬಳ್ಳಾರಿ :‘ಸಾಂಸ್ಕೃತಿಕ ರಾಕ್ಷಸತ್ವದಿಂದ ಯುವ ಜನತೆಯನ್ನು ರಕ್ಷಿಸಬೇಕಾದರೆ ಪುಸ್ತಕ ಸಂಸ್ಕೃತಿಯನ್ನು ಬೆಳೆಸಬೇಕಾದ ಅನಿವಾರ್ಯತೆ ಇದೆ’ ಎಂದು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕನ್ನಡ ಸಾಹಿತ್ಯ ವಿಭಾಗದ ಮುಖ್ಯಸ್ಥ ವೆಂಕಟಗಿರಿ ದಳವಾಯಿ ಹೇಳಿದರು.
ಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ, ಬೆಂಗಳೂರಿನ ಕರ್ನಾಟಕ ಪ್ರಕಾಶಕರ ಸಂಘ ಜಂಟಿಯಾಗಿ ವಿಶ್ವವಿದ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ಎರಡು ದಿನಗಳ ‘ಪುಸ್ತಕ ಪ್ರಕಾಶನ ಕಮ್ಮಟ’ದ 5ನೇ ಗೋಷ್ಠಿಯಲ್ಲಿ ಅವರು ‘ಪುಸ್ತಕ ಸಂಸ್ಕೃತಿ ಪ್ರಸಾರ ಮತ್ತು ಪ್ರಸಾರಾಂಗ’ ಕುರಿತು ವಿಷಯ ಮಂಡಿಸಿದರು.
‘ಪುಸ್ತಕ ಸಂಸ್ಕೃತಿಯೇ ಒಂದು ಧರ್ಮ ಎಂದು ಪರಿಭಾವಿಸುವ ಕಾಲ ಇತ್ತು. ಭಾರತದಲ್ಲಿ ಪುಸ್ತಕಗಳೆಂದರೆ ಜ್ಞಾನ, ಸಹಿಷ್ಟುತೆಯ ಪ್ರತೀಕ. ಭಾರತದಲ್ಲಿ ಸಾಮ್ರಾಜ್ಯಗಳ ಮೇಲೆ ಮಾತ್ರ ದಾಳಿಗಳು ನಡೆಯಲಿಲ್ಲ, ಬದಲಿಗೆ ಪುಸ್ತಕಗಳ ಮೇಲೂ ದಾಳಿಗಳು ನಡೆದಿವೆ. ಇದು ಚರಿತ್ರೆಯಲ್ಲಿ ದಾಖಲಾಗಿದೆ. ನಳಂದ ವಿಶ್ವವಿದ್ಯಾಲಯ ದಾಳಿಗೊಳಗಾದಾಗ ಅಲ್ಲಿನ ಗ್ರಂಥಾಲಯದ ಪುಸ್ತಕಗಳು ನಾಲ್ಕು ದಿನ ನಿರಂತರವಾಗಿ ಬೆಂಕಿಯಲ್ಲಿ ಉರಿದವು. ಅಂದರೆ, ಇಲ್ಲಿನ ಜ್ಞಾನದ ಹರವು ಎಂತಹದು ಎಂದು ಅರಿಯಬಹುದು’ ಎಂದು ವಿವರಿಸಿದರು.
‘ಜನರಿಗೆ ವಿದ್ಯಾವಂತಿಕೆ ಸಿಕ್ಕರೆ ಮಾತ್ರ ಸಾಲದು. ಒಳ್ಳೆಯ ಸಾಹಿತ್ಯ ಅವರ ಕೈಗೆ ಸೇರದೇ ಹೋದರೆ, ಸಾಂಸ್ಕೃತಿಕ ಹರಾಜಕತೆ ಉಂಟಾಗುತ್ತದೆ. ಸಾಂಸ್ಕೃತಿಕ ರಾಕ್ಷಸತ್ವ ವಿಜೃಂಬಿಸಲಿದೆ. ವಿದ್ಯಾವಂತರಿಗೆ ಒಳ್ಳೆಯ ಪುಸ್ತಕಗಳು ಸಿಕ್ಕರೆ ಮಾತ್ರ ಇದನ್ನು ತಪ್ಪಿಸಲು ಸಾಧ್ಯ. ಈ ಕೆಲಸವನ್ನು ಪ್ರಸಾರಂಗಗಳು, ಪ್ರಕಾಶನಗಳು ಮಾಡಬೇಕು’ ಎಂದು ಅವರು ಪ್ರತಿಪಾದಿಸಿದರು.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಾರಾಂಗ ವಿಭಾಗದ ನಿರ್ದೇಶಕ ಡಾ.ಪಿ.ಮಹಾದೇವಯ್ಯ ಮಾತನಾಡಿ, ‘ಪ್ರಸಾರಾಂಗಗಳ ಪ್ರಗತಿಯಲ್ಲಿ ಕೊರತೆ ಕಾಣುತ್ತಿದೆ. ಇವು ಸಿಬ್ಬಂದಿಗೆ ಸೀಮಿತ ಎಂಬಂತಾಗಿದ್ದು, ಜನತೆಗಾಗಿ ಕೆಲಸ ಮಾಡುವಂತಾಗಬೇಕು’ ಎಂದು ಆಶಿಸಿದರು.
ಪತ್ರಿಕಾ ವಿಮರ್ಶೆ ಮತ್ತು ಪ್ರಸಾರ ಕುರಿತು ಕನ್ನಡ ಸಾಹಿತ್ಯ ಅಕಾಡೆಮಿ ಸದಸ್ಯೆ, ಬೆಳಗಾವಿಯ ಮೈತ್ರೇಯಿಣಿ ಗದಿಗೆಪ್ಪಗೌಡರ್ ವಿಷಯ ಮಂಡಿಸಿದರು.
ಕಲಾ ನಿಕಾಯದ ಡೀನ್ ಪ್ರೊ. ರಾಬರ್ಟ್ ಜೋಸ್, ವ್ಯವಹಾರ ಅಧ್ಯಯನ ನಿಕಾಯದ ಡೀನ್ ಸದ್ಯೋಜಾತಪ್ಪ ಎಸ್. ಉಪಸ್ಥಿತರಿದ್ದರು.
ಪುಸ್ತಕ ಪರಿಚಯಿಸುವ ‘ಪ್ರಜಾವಾಣಿ’
ಎರಡನೇ ದಿನದ 5ನೇ ಗೋಷ್ಠಿಯಲ್ಲಿ ‘ಪುಸ್ತಕ ಪ್ರಕಾಶನ ಮತ್ತು ಮಾರಾಟ ಜಾಲ’ ಕುರಿತು ಮಾತನಾಡಿದ ಸಿರಿವರ ಪ್ರಕಾಶನದ ರವೀಂದ್ರನಾಥ ಎಸ್. ಪುಸ್ತಕಗಳನ್ನು ಓದುಗರಿಗೆ ಪರಿಚಯಿಸುವ ‘ಪ್ರಜಾವಾಣಿ’ಯ ಪರಂಪರೆ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು. ‘ಇಂದು ಪುಸ್ತಕ ವಿಮರ್ಶೆ ಮತ್ತು ಪರಿಚಯಗಳನ್ನು ‘ಪ್ರಜಾವಾಣಿ’ ಸೇರಿದಂತೆ ಕೆಲವೇ ಕೆಲವು ಪತ್ರಿಗಳು ಮಾತ್ರವೇ ನಿರಂತರವಾಗಿ ಮಾಡಿಕೊಂಡು ಬಂದಿವೆ. ಪುಸ್ತಕಗಳು ಓದುಗರಿಗೆ ತಲುಪಲು ಈ ಕೆಲಸ ಅತ್ಯಗತ್ಯ. ಬೇರೆ ಪತ್ರಿಕೆಗಳು ಇದನ್ನು ನಿಲ್ಲಿಸಿವೆ.’ ಎಂದರು.
ಮುದ್ರಣ ಲೋಕಕ್ಕೆ ಸಿಎಸ್‌ಆರ್ ನಿಧಿ ಬಳಸಿ: ಅರವಿಂದ ಪಟೇಲ್
ಸರ್ಕಾರವು ‘ಕಾರ್ಪೋರೇಟ್ ಸಮಾಜಿಕ ಜವಾಬ್ದಾರಿ’ ನಿಧಿಯಿಂದ ಮುದ್ರಣ ಮಾಧ್ಯಮಕ್ಕೆ ಸಹಾಯ ಮಾಡಿದಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಜವಾಬ್ದಾರಿ ನಿರ್ವಹಿಸಿದಂತಾಗುತ್ತದೆ ಎಂದು ಸಾಹಿತಿ ಹಾಗೂ ಬಳ್ಳಾರಿ ವೀರಶೈವ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಅರವಿಂದ ಪಟೇಲ್ ಹೇಳಿದರು. ‘ಪುಸ್ತಕ ಪ್ರಕಾಶನ ಕಮ್ಮಟ’ದ ಬೆಳಗಿನ ಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದ ಅವರು ಈ ವಿಷಯ ಪ್ರತಿಪಾದಿಸಿದರು. ‘ಪುಸ್ತಕ ವಿನ್ಯಾಸ ಮತ್ತು ಮುಖಪುಟ ವಿನ್ಯಾಸ’ ಕುರಿತು ವಿಷಯ ಮಂಡಿಸಿದ ಬೆಂಗಳೂರಿನ ಕಲಾವಿದ ಎಸ್.ಜಿ.ನಾಗನಾಥ್ ‘ಅಳತೆ ಅಕ್ಷರಶೈಲಿ ಬಳಸುವ ಸಾಫ್ಟ್ ವೇರ್ ರಕ್ಷಾಪುಟ ಹಾಗೂ ಪುಸ್ತಕದ ವಿನ್ಯಾಸ ಇವು ಪ್ರಕಾಶನದಲ್ಲಿ ಪ್ರಭಾವ ಬೀರುತ್ತವೆ’ ಎಂದು ಹೇಳಿದರು. 'ಕೇಂದ್ರ ಮತ್ತು ರಾಜ್ಯ ಸರ್ಕಾರ ಮುದ್ರಣ ಕ್ಷೇತ್ರಕ್ಕೆ ಸಾಲ ಸಬ್ಸಿಡಿ ಚೊಚ್ಚಲ ಕೃತಿಗೆ ಸಹಾಯಧದಂತಹ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು ಇದರ ಪ್ರಯೋಜನ ಪಡೆಯಬೇಕು’ ಎಂದು ತಿಳಿಸಿದರು. ಬೆಂಗಳೂರು ಕರ್ನಾಟಕ ಇತಿಹಾಸ ಅಕಾಡೆಮಿಯ ಪ್ರಧಾನ ಕಾರ್ಯದರ್ಶಿ ಕೆ.ಎಲ್. ರಾಜಶೇಖರ್ ‘ಮುದ್ರಣ ಶಾಲೆಯ ವಿವಿಧ ಹಂತಗಳು’ ಕುರಿತು ವಿಷಯ ಮಂಡಿಸಿದರು. ‘ಮುದ್ರಣ ಪ್ರಕಾಶನ ಕ್ಷೇತ್ರಕ್ಕೆ ಬಹು ಬೇಡಿಕೆಯಿದ್ದು ಶ್ರಮ ಮತ್ತು ಸೃಜನ ಶೀಲತೆಯೇ ಇದರ ಬಂಡವಾಳ’ ಎಂದರು. ಪ್ರಕಾಶನದ ಕುರಿತು ‘ಪವರ್ ಪಾಯಿಂಟ್ ಪ್ರೆಸೆಂಟೇಷನ್ (ಪಿಪಿಟಿ)’ ಮೂಲಕ ವಿಷಯ ಮಂಡಿಸಿದರು. ಪುಸ್ತಕ ಪ್ರಕಟಣೆಯ ವಿವಿಧ ಹಂತಗಳನ್ನು ವಿವರಿಸಿದರು. ಆನ್ವಯಿಕ ವಿಜ್ಞಾನಗಳ ನಿಕಾಯದ ಡೀನ ಡಾ.ಹನುಮೇಶ್ ವೈದ್ಯ ಉಪಸ್ಥಿತರಿದ್ದರು.