ಬಳ್ಳಾರಿ: ‘ಸರ್ಕಾರದ ಐದು ಗ್ಯಾರಂಟಿಗಳು ಜನರ ಜೀವನಮಟ್ಟವನ್ನು ಸುಧಾರಿಸಿವೆ. ಸರ್ಕಾರವೂ ನುಡಿದಂತೆ ನಡೆದುಕೊಂಡಿದೆ’ ಎಂದು ಬಳ್ಳಾರಿ ಮಹಾನಗರ ಪಾಲಿಕೆಯ ಮಹಾಪೌರ ಮುಲ್ಲಂಗಿ ನಂದೀಶ್ ಹೇಳಿದರು.
ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ, ಬಳ್ಳಾರಿ ವಿಭಾಗ ಇವರ ಸಂಯುಕ್ತಾಶ್ರಯದಲ್ಲಿ ನಗರದ ಟ್ಯಾಂಕ್ ಬಂಡ್ ರಸ್ತೆಯ ಕೇಂದ್ರ ಬಸ್ ನಿಲ್ದಾಣದಲ್ಲಿ ಶುಕ್ರವಾರ ಆಯೋಜಿಸಿದ್ದ ಸರ್ಕಾರದ ಸಾಧನೆ ಬಿಂಬಿಸುವ ವಸ್ತು ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಗ್ಯಾರಂಟಿಗಳ ಮೂಲಕ ಸರ್ಕಾರವು ದೇಶದಲ್ಲಿಯೇ ಮಾದರಿ ಎನಿಸಿದೆ. ಬಳ್ಳಾರಿ ಜಿಲ್ಲೆಯು ಅಭಿವೃದ್ಧಿಯತ್ತ ಸಾಗುತ್ತಿದೆ. ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತಿವೆ’ ಎಂದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾ ಅಧ್ಯಕ್ಷ ಕೆ.ಇ.ಚಿದಾನಂದಪ್ಪ ಮಾತನಾಡಿ, ‘ಗ್ಯಾರಂಟಿ ಯೋಜನೆಗಳ ಅನುಷ್ಠಾನದಲ್ಲಿ ಬಳ್ಳಾರಿ ಜಿಲ್ಲೆಯಲ್ಲಿ ಶೇ.97.05 ರಷ್ಟು ಪ್ರಗತಿಯಾಗಿದೆ. ಈವರೆಗೂ ಗ್ಯಾರಂಟಿ ಯೋಜನೆ ಪಡೆಯದವರು ಪ್ರಾಧಿಕಾರದ ಕಚೇರಿಗೆ ಭೇಟಿ ನೀಡಬಹುದು’ ಎಂದರು.
ಅಪರ ಜಿಲ್ಲಾಧಿಕಾರಿ ಮಹಮ್ಮದ್ ಝಬೇರ್.ಎನ್ ಅವರು ಮಾತನಾಡಿ, ‘ವಸ್ತು ಪ್ರದರ್ಶನವು ಸರ್ಕಾರದ ಯೋಜನೆಯನ್ನು ವಿವರಿಸಲು ನೆರವಾಗುತ್ತದೆ’ ಎಂದರು.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಭಾಗವಾನ್, ವಿಭಾಗೀಯ ಸಂಚಾರಾಧಿಕಾರಿ ಚಾಮರಾಜ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವಾರ್ತಾ ಸಹಾಯಕರಾದ ವಿ.ಸಿ ಗುರುರಾಜ, ಸಿಬ್ಬಂದಿಗಳಾದ ವಿಜಯ್ ಕುಮಾರ್, ಹನುಮಂತಪ್ಪ, ಮಲ್ಲೇಶಪ್ಪ, ಹನುಮೇಶ್.ಎಚ್, ತೇಜ, ದಿವಾಕರ, ಶ್ರೀಧರ್ ಕಾವಲಿ, ರುದ್ರಮುನಿ ಸ್ವಾಮಿ ಸೇರಿದಂತೆ ಇತರರು ಇದ್ದರು.
ಜೂ.26ರ ವರೆಗೆ ವಸ್ತು ಪ್ರದರ್ಶನ ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿರಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.