ADVERTISEMENT

ಐದು ತಿಂಗಳಿಂದ ಅತಿಥಿ ಶಿಕ್ಷಕರಿಗಿಲ್ಲ ಗೌರವ ಧನ

‘ಸೇವಾ ಭದ್ರತೆ ಕೊಡಿ ಇಲ್ಲವೇ ವಿಷ ಕೊಡಿ’ ಚಳವಳಿಗೆ ತೀರ್ಮಾನ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 7 ಡಿಸೆಂಬರ್ 2018, 9:12 IST
Last Updated 7 ಡಿಸೆಂಬರ್ 2018, 9:12 IST
–ಮಲ್ಲಪ್ಪ ಯರಗುಂಟೆ, ಜಿಲ್ಲಾ ಅಧ್ಯಕ್ಷ, ಅತಿಥಿ ಶಿಕ್ಷಕರ ಸಂಘ
–ಮಲ್ಲಪ್ಪ ಯರಗುಂಟೆ, ಜಿಲ್ಲಾ ಅಧ್ಯಕ್ಷ, ಅತಿಥಿ ಶಿಕ್ಷಕರ ಸಂಘ   

ಹೊಸಪೇಟೆ: ಜಿಲ್ಲೆಯ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರಿಗೆ ಐದು ತಿಂಗಳಿಂದ ಸರ್ಕಾರ ಗೌರವ ಧನ ಕೊಟ್ಟಿಲ್ಲ. ಇದರಿಂದ ಬೇಸತ್ತಿರುವ ಶಿಕ್ಷಕರು ‘ಸೇವಾ ಭದ್ರತೆ ಕೊಡಿ ಇಲ್ಲವೇ ವಿಷ ಕೊಡಿ’ ಚಳವಳಿ ಆರಂಭಿಸಲು ತೀರ್ಮಾನಿಸಿದ್ದಾರೆ.

ಸಕಾಲಕ್ಕೆ ಗೌರವ ಧನ ಕೊಡುವುದು, ದೆಹಲಿ, ಹರಿಯಾಣದ ಮಾದರಿಯಲ್ಲಿ ಸೇವಾ ಭದ್ರತೆ ಕೊಡಬೇಕೆಂದು ರೈತರು ಹಲವು ವರ್ಷಗಳಿಂದ ಹೋರಾಟ ನಡೆಸುತ್ತಿದ್ದಾರೆ. ಸರ್ಕಾರ ಬದಲಾದರೂ ಈ ನಿಟ್ಟಿನಲ್ಲಿ ಯಾವುದೇ ಬೇಡಿಕೆಗಳು ಈಡೇರಿಲ್ಲ. ಸರ್ಕಾರದ ಈ ನಿರ್ಲಕ್ಷ್ಯ ಧೋರಣೆಯಿಂದ ಬೇಸತ್ತಿರುವ ಶಿಕ್ಷಕರು ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಇದೇ 10ರಿಂದ ನಡೆಯಲಿರುವ ಅಧಿವೇಶನದ ವೇಳೆ ದೊಡ್ಡ ಮಟ್ಟದ ಚಳವಳಿಗೆ ಮುಂದಾಗಿದ್ದಾರೆ.

‘ಶಿಕ್ಷಣ ಇಲಾಖೆಯ ಬೆನ್ನೆಲುಬಾಗಿ ಕೆಲಸ ನಿರ್ವಹಿಸುತ್ತಿರುವ ಅತಿಥಿ ಶಿಕ್ಷಕರನ್ನು ಸರ್ಕಾರ ಕಾಲ ಕಸದಂತೆ ನಡೆಸಿಕೊಳ್ಳುತ್ತಿದೆ. ಪ್ರಾಥಮಿಕ ಶಿಕ್ಷಕರಿಗೆ ತಿಂಗಳಿಗೆ ₨7,500, ಪ್ರೌಢಶಾಲಾ ಶಿಕ್ಷಕರಿಗೆ ₨8,000 ಗೌರವ ಧನ ನಿಗದಿಪಡಿಸಲಾಗಿದೆ. ಆದರೆ, ಅದು ಕೂಡ ಸಮಯಕ್ಕೆ ಸರಿಯಾಗಿ ಕೊಡುತ್ತಿಲ್ಲ. ಗೌರವ ಧನ ಬಿಡುಗಡೆ ಮಾಡದ ಕಾರಣ ಶಿಕ್ಷಕರು ಹಾಗೂ ಅವರ ಅವಲಂಬಿತರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಬಳ್ಳಾರಿ ಜಿಲ್ಲೆಯೊಂದೇ ಅಲ್ಲ. ಇಡೀ ರಾಜ್ಯದಲ್ಲಿ ಇದೇ ಪರಿಸ್ಥಿತಿ ಇದೆ’ ಎಂದು ಅತಿಥಿ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಮಲ್ಲಪ್ಪ ಯರಗುಂಟೆ ‘ಪ್ರಜಾವಾಣಿ’ ಜತೆಗೆ ಶಿಕ್ಷಕರು ಅನುಭವಿಸುತ್ತಿರುವ ನೋವು ಹಂಚಿಕೊಂಡರು.

ADVERTISEMENT

‘ಬಹುತೇಕ ಅತಿಥಿ ಶಿಕ್ಷಕರು, ರೈತರು ಹಾಗೂ ಕೂಲಿ ಕಾರ್ಮಿಕರ ಮಕ್ಕಳಾಗಿದ್ದಾರೆ. ಜಿಲ್ಲೆಯಲ್ಲಿ ಭೀಕರ ಬರಗಾಲದಿಂದ ಸಂಕಷ್ಟದ ಸ್ಥಿತಿ ನಿರ್ಮಾಣವಾಗಿದೆ. ಗೌರವ ಧನ ಬಿಡುಗಡೆ ಮಾಡದ ಕಾರಣ ಶಿಕ್ಷಕರ ಬದುಕು ಅತಂತ್ರವಾಗಿದೆ. ರೈತರ ನಂತರ ಶಿಕ್ಷಕರು ಸರಣಿಯಾಗಿ ಆತ್ಮಹತ್ಯೆ ಮಾಡಿಕೊಂಡರೆ ಆಶ್ಚರ್ಯ ಪಡಬೇಕಿಲ್ಲ’ ಎಂದು ಆತಂಕ ವ್ಯಕ್ತಪಡಿಸಿದರು.

‘ಜಿಲ್ಲೆಯಲ್ಲಿ 1,582, ಇಡೀ ರಾಜ್ಯದಲ್ಲಿ 22,200ಕ್ಕೂ ಅಧಿಕ ಅತಿಥಿ ಶಿಕ್ಷಕರು ಇದ್ದಾರೆ. ಗೌರವ ಧನ ಬಿಡುಗಡೆ ಮಾಡುವಂತೆ ಕೇಳಿದರೆ ಅನೇಕ ಕುಂಟು ನೆಪಗಳನ್ನು ಹೇಳುತ್ತಿದ್ದಾರೆ. ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಆಯಾಗಳಿಗೆ ₨17 ಸಾವಿರ ಸಂಬಳ ಸರ್ಕಾರ ಕೊಡುತ್ತಿದೆ. ಆದರೆ, ಅತಿಥಿ ಶಿಕ್ಷಕರನ್ನು ನಿಕೃಷ್ಟವಾಗಿ ಕಾಣುತ್ತಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಜೂನ್‌, ಜುಲೈನಲ್ಲಿ ಸೇವೆಗೆ ಕರೆದುಕೊಳ್ಳುತ್ತಾರೆ. ಮಾರ್ಚ್‌ನಲ್ಲಿ ಪರೀಕ್ಷೆ ಮುಗಿದ ನಂತರ ಸೇವೆಯಿಂದ ಬಿಡುಗಡೆ ಮಾಡುತ್ತಾರೆ. ಹೊಸ ಶೈಕ್ಷಣಿಕ ವರ್ಷದಲ್ಲಿ ಹಾಲಿ ಅತಿಥಿ ಶಿಕ್ಷಕರನ್ನೇ ಮುಂದುವರೆಸುವುದರ ಬದಲಾಗಿ ಹೊಸದಾಗಿ ಅರ್ಜಿ ಕರೆದು, ಹೊಸಬರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆ. ಈ ಪದ್ಧತಿ ಕೈಬಿಟ್ಟು ಅನುಭವ ಆಧರಿಸಿ ನೇಮಕ ಪ್ರಕ್ರಿಯೆ ನಡೆಸಬೇಕು’ ಎಂದು ಒತ್ತಾಯಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.