ADVERTISEMENT

ಬಳ್ಳಾರಿ: ಗುರುವಿಗೆ ನಮಿಸಿ ಭಕ್ತಿ ಭಾವ ಮೆರೆದ ಜನ

ಜಿಲ್ಲೆಯಲ್ಲಿ ಭಕ್ತಿ ಭಾವದ ಗುರುಪೂರ್ಣಿಮ, ಗುರುವಂದನೆ

​ಪ್ರಜಾವಾಣಿ ವಾರ್ತೆ
Published 11 ಜುಲೈ 2025, 5:57 IST
Last Updated 11 ಜುಲೈ 2025, 5:57 IST
ಗುರುಪೂರ್ಣಿಮೆಯ ಪ್ರಯುಕ್ತ ಬಳ್ಳಾರಿ ನಗರದ ವಿಶಾಲನಗರದಲ್ಲಿರುವ ಸಾಯಿಬಾಬ ಮಂದಿರದಲ್ಲಿ ಗುರುವಾರ ದೇವರ ದರ್ಶನ ಪಡೆಯಲು ಅಪಾರ ಭಕ್ತರು ಜಮಾಯಿಸಿದ್ದರು
ಗುರುಪೂರ್ಣಿಮೆಯ ಪ್ರಯುಕ್ತ ಬಳ್ಳಾರಿ ನಗರದ ವಿಶಾಲನಗರದಲ್ಲಿರುವ ಸಾಯಿಬಾಬ ಮಂದಿರದಲ್ಲಿ ಗುರುವಾರ ದೇವರ ದರ್ಶನ ಪಡೆಯಲು ಅಪಾರ ಭಕ್ತರು ಜಮಾಯಿಸಿದ್ದರು   

ಬಳ್ಳಾರಿ: ಗುರು ಪೂರ್ಣಿಮೆಯನ್ನು ಜಿಲ್ಲೆಯಲ್ಲಿ ಗುರುವಾರ ಶ್ರದ್ಧಾ, ಭಕ್ತಿಯಿಂದ ಆಚರಿಸಲಾಯಿತು.

ಮನೆಗಳ ಎದುರು ಬಣ್ಣ ಬಣ್ಣದ ರಂಗೋಲಿ ಹಾಕಿ, ವಿಶೇಷ ಪೂಜೆ ನೆರವೇರಿಸಿದ ನಾಗರಿಕರು, ಬಳಿಕ ಸಮೀಪದ ಗುರುರಾಘವೇಂದ್ರರ ಮಠ, ಸಾಯಿಬಾಬ ದೇಗುಲಗಳಿಗೆ ತೆರಳಿ ಪೂಜೆ ಸಲ್ಲಿಸಿದರು. 

ಬಳ್ಳಾರಿ ನಗರದ ವಿಶಾಲ್ ನಗರ ಬಡಾವಣೆಯಲ್ಲಿರುವ ಸಾಯಿಬಾಬ ದೇಗುಲದಲ್ಲಿ ಗುರುವಾರ ವಿಶೇಷ ಪೂಜೆ ನೆರವೇರಿತು. ಸಾಯಿಬಾಬ ಮೂರ್ತಿಯನ್ನು ಗುಲಾಬಿ ಹೂಗಳಿಂದ ವಿಶೇಷವಾಗಿ ಅಲಂಕರಿಸಲಾಗಿತ್ತು. ಸಾಯಿ ಭಜನೆ, ನಾಮಾವಳಿ ಜರುಗಿದವು. ದೇವರ ದರ್ಶನಕ್ಕಾಗಿ ಬೆಳಿಗ್ಗೆಯಿಂದಲೇ ಭಕ್ತರು ತಂಡೋಪತಂಡವಾಗಿ ಬರುತ್ತಿದ್ದದ್ದು ಕಂಡು ಬಂತು. ಹೀಗಾಗಿ ಸುತ್ತಮುತ್ತಲ ಪ್ರದೇಶದಲ್ಲಿ ಜನಜಂಗುಳಿಯೇ ನೆರೆದಿತ್ತು. ಟ್ರಾಫಿಕ್‌ ಸಮಸ್ಯೆಯು ಕಾಣಿಸಿಕೊಂಡಿತು.  

ADVERTISEMENT

ಗುರುಪೂರ್ಣಿಮೆಯ ಹಿಂದಿನ ದಿನವೇ ವಿಶೇಷವಾಗಿ ದೇವಾಲಯಗಳ ಒಳಾಂಗಣ ಮತ್ತು ಹೊರಾಂಗಣಗಳನ್ನು ತೋರಣ, ಹೂವು, ಹಣ್ಣು ಹಾಗೂ ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿತ್ತು.

ಅಭಿಷೇಕ, ಅಲಂಕಾರ, ಸಾಯಿ ಮಂತ್ರ ಹೋಮ, ಸುದರ್ಶನ ಹೋಮ, ದತ್ತಾತ್ರೇಯ ಹೋಮ ಸೇರಿದಂತೆ ಇನ್ನಿತರ ಪೂಜೆಗಳು ಇತರ ದೇಗುಲಗಳಲ್ಲಿ ಜರುಗಿದವು. ಸಾವಿರಾರು ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಪ್ರಸಾದ ಸ್ವೀಕರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.