ADVERTISEMENT

ವಿಜಯನಗರ ಸಂಸ್ಥಾಪನಾ ದಿನಕ್ಕೆ ಅನುಮತಿ ನೀಡಲು ಆಗ್ರಹಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 9 ಏಪ್ರಿಲ್ 2021, 7:40 IST
Last Updated 9 ಏಪ್ರಿಲ್ 2021, 7:40 IST
ವಿಜಯನಗರ ಸಂಸ್ಥಾಪನಾ ದಿನ ಆಚರಣೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಹಾಲುಮತ ಸಮಾಜದವರು ಶುಕ್ರವಾರ ಹೊಸಪೇಟೆಯ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು
ವಿಜಯನಗರ ಸಂಸ್ಥಾಪನಾ ದಿನ ಆಚರಣೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಹಾಲುಮತ ಸಮಾಜದವರು ಶುಕ್ರವಾರ ಹೊಸಪೇಟೆಯ ಉಪವಿಭಾಗಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ, ಕಚೇರಿಯ ಅಧಿಕಾರಿಗೆ ಮನವಿ ಪತ್ರ ಸಲ್ಲಿಸಿದರು   

ಹೊಸಪೇಟೆ (ವಿಜಯನಗರ): ವಿಜಯನಗರ ಸಾಮ್ರಾಜ್ಯದ ಸಂಸ್ಥಾಪಕರಾದ ಹಕ್ಕ–ಬುಕ್ಕರ ಸವಿನೆನಪಿನಲ್ಲಿ ವಿಜಯನಗರ ಸಂಸ್ಥಾಪನಾ ದಿನ ಆಚರಣೆಗೆ ಅನುಮತಿ ನೀಡಬೇಕೆಂದು ಆಗ್ರಹಿಸಿ ಹಾಲುಮತ ಸಮಾಜದವರು ಶುಕ್ರವಾರ ನಗರದಲ್ಲಿ ಪ್ರತಿಭಟನೆ ನಡೆಸಿದರು.

ನಂತರ ಮೂಲಸೌಕರ್ಯ ಅಭಿವೃದ್ಧಿ, ಹಜ್‌ ಮತ್ತು ವಕ್ಫ್‌ ಖಾತೆ ಸಚಿವ ಆನಂದ್‌ ಸಿಂಗ್‌ ಅವರ ಆಪ್ತ ಸಹಾಯಕ ಸಂದೀಪ್‌ ಸಿಂಗ್‌, ಉಪವಿಭಾಗಾಧಿಕಾರಿ ಸಿದ್ದರಾಮೇಶ್ವರ ಹಾಗೂ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌ ಅವರಿಗೆ ಪ್ರತ್ಯೇಕವಾಗಿ ಮನವಿ ಪತ್ರ ಸಲ್ಲಿಸಿದರು.

ಕಾಗಿನೆಲೆ ಕನಕ ಗುರು ಪೀಠದ ಕಲಬುರ್ಗಿ ವಿಭಾಗದ ಶಾಖಾ ಮಠದ ಪೀಠಾಧಿ‍ಪತಿ ಸಿದ್ದರಾಮಾನಂದಪುರಿ ಸ್ವಾಮೀಜಿ ನೇತೃತ್ವದಲ್ಲಿ ಏ.18ರಂದು ಹಂಪಿಯಲ್ಲಿ ವಿಜಯನಗರ ಸಂಸ್ಥಾಪನಾ ದಿನ ಆಚರಿಸಲು ನಿರ್ಧರಿಸಲಾಗಿದೆ. ಕರ್ನಾಟಕ ಪ್ರದೇಶ ಕುರುಬರ ಸಂಘ, ಬಳ್ಳಾರಿ ಜಿಲ್ಲಾ ಕುರುಬರ ಸಂಘ ಹಾಗೂ ತಾಲ್ಲೂಕು ಕುರುಬರ ಸಂಘದ ಸಹಭಾಗಿತ್ವದಲ್ಲಿ ಹಮ್ಮಿಕೊಂಡಿರುವ ಸಂಭ್ರಮದ ಕಾರ್ಯಕ್ರಮಕ್ಕೆ ಅವಕಾಶ ಮಾಡಿಕೊಡಬೇಕು. ಕೋವಿಡ್‌ ನಿಯಮಾವಳಿ ಪ್ರಕಾರ ಕಾರ್ಯಕ್ರಮ ನಡೆಸಲಾಗುವುದು ಎಂದು ಮನವಿ ಪತ್ರದಲ್ಲಿ ಕೋರಿದ್ದಾರೆ.

ADVERTISEMENT

ಹಾಲುಮತ ಸಮಾಜದ ಮುಖಂಡರಾದ ಎಲ್‌. ಸಿದ್ದನಗೌಡ, ಆರ್‌. ಕೊಟ್ರೇಶ್‌, ಅಯ್ಯಾಳಿ ತಿಮ್ಮಪ್ಪ, ರಾಮಚಂದ್ರಗೌಡ, ಡಿ. ಚೆನ್ನಪ್ಪ, ಬಿ. ನಾರಾಯಣ, ಜೊಂಡಿ ನಿಂಗಪ್ಪ, ಬಂದಿ ಚಿಂತಾಮಣಿ, ಕಡ್ಡಿರಾಂಪುರ ಪ್ರಶಾಂತ್‌, ಸೋಮಶೇಖರ್‌ ಘಂಟೆ, ಪಲ್ಲೇದ ಸಿದ್ದಪ್ಪ, ಜಿ. ಶಂಕರ್‌, ಬಂದಿ ಪಂಪಾಪತಿ, ಎಚ್‌. ಮಹೇಶ್‌, ಬಿಸಾಟಿ ತಾಯಪ್ಪ, ಮೃತ್ಯುಂಜಯ, ಎಂ. ಯಮನೂರು ಸ್ವಾಮಿ, ಮಲ್ಲಿಕಾರ್ಜುನ ಇದ್ದರು.

‘ಹಕ್ಕ–ಬುಕ್ಕರು ವಾಲ್ಮೀಕಿ ಸಮಾಜಕ್ಕೆ ಸೇರಿದವರು. ಆದರೆ, ಹಾಲುಮತ ಸಮಾಜದವರು ಅನಗತ್ಯವಾಗಿ ಗೊಂದಲ ಸೃಷ್ಟಿಸುತ್ತಿದ್ದಾರೆ. ಯಾವುದೇ ಕಾರಣಕ್ಕೂ ವಿಜಯನಗರ ಸಂಸ್ಥಾಪನಾ ದಿನಾಚರಣೆಗೆ ಅವಕಾಶ ಕಲ್ಪಿಸಬಾರದು’ ಎಂದು ಆಗ್ರಹಿಸಿ ವಾಲ್ಮೀಕಿ ನಾಯಕ ಸಮಾಜದವರು ಇತ್ತೀಚೆಗೆ ನಗರದಲ್ಲಿ ಪ್ರತಿಭಟನೆ ನಡೆಸಿ, ಜಿಲ್ಲಾಡಳಿತಕ್ಕೆ ಮನವಿ ಪತ್ರ ಸಲ್ಲಿಸಿದ್ದರು. ಅದರ ಬೆನ್ನಲ್ಲೇ ಈಗ ಹಾಲುಮತದವರು ಪ್ರತಿಭಟನೆ ನಡೆಸಿ, ಅನುಮತಿಗೆ ಅವಕಾಶ ಕೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.