ADVERTISEMENT

ಹಗರಿಬೊಮ್ಮನಹಳ್ಳಿ: ಈಜಲು ತೆರಳಿದ್ದ ಬಾಲಕ ಸಾವು- ಇನ್ನೊಬ್ಬ ಪಾರು

ಕುರಿಗಾಹಿಯ ಸಮಯ ಪ್ರಜ್ಞೆ ‘ಬಾಲಕನೊಬ್ಬನ ಜೀವ ಉಳಿಸಿತು’

​ಪ್ರಜಾವಾಣಿ ವಾರ್ತೆ
Published 2 ಡಿಸೆಂಬರ್ 2025, 6:10 IST
Last Updated 2 ಡಿಸೆಂಬರ್ 2025, 6:10 IST
ಮುಳುಗಿದ್ದ ಬಾಲಕ ಆಕಾಶ್‍ನನ್ನು ರಕ್ಷಿಸಿದ ಕುರಿಗಾಹಿ ಕುರುಬರ ದೇವರಾಜ ಅವಘಡ ನಡೆದ ಸ್ಥಳದ ಮುಂದೆ
ಮುಳುಗಿದ್ದ ಬಾಲಕ ಆಕಾಶ್‍ನನ್ನು ರಕ್ಷಿಸಿದ ಕುರಿಗಾಹಿ ಕುರುಬರ ದೇವರಾಜ ಅವಘಡ ನಡೆದ ಸ್ಥಳದ ಮುಂದೆ   

ಹಗರಿಬೊಮ್ಮನಹಳ್ಳಿ: ತಾಲ್ಲೂಕಿನ ಬಂಡಿಹಳ್ಳಿ ಗ್ರಾಮದ ಬಳಿಯ ಕೆರೆಯಲ್ಲಿ ಈಜಲು ಹೋಗಿ ಮುಳುಗಿದ್ದ ಬಾಲಕನೊಬ್ಬನನ್ನು ಗ್ರಾಮದ ಕುರಿಗಾಹಿಯೊಬ್ಬರ ಸಮಯ ಪ್ರಜ್ಞೆಯಿಂದ ಜೀವ ಉಳಿದಿದೆ.

ಪಟ್ಟಣದ ಶಿಕ್ಷಕ ಚನ್ನೇಶ್‍ಸ್ವಾಮಿ ಎನ್ನುವವರ ಪುತ್ರ ಆಕಾಶ್ 4ನೇ ತರಗತಿ ವಿದ್ಯಾರ್ಥಿ, ತನ್ನ ನಾಲ್ವರು ಸ್ನೇಹಿತರೊಂದಿಗೆ ಈಜಲು ತೆರಳಿದ್ದನು. ಕೆರೆಯಲ್ಲಿ ತುಂಬಾ ಆಳ ಇದ್ದುದರಿಂದ ಆಕಾಶ್ ಮುಳುಗಿ ಒದ್ದಾಡುತ್ತಿದ್ದನ್ನು ಗಮನಿಸಿದ. ಆಗ ಅಲ್ಲಿದ್ದ ಕುರಿಗಾಹಿ ಮಹಾಂತೇಶ್ ಎನ್ನುವವರು ಈಜು ಬರದ ಕಾರಣ ಮತ್ತೊಬ್ಬ ಕುರಿಗಾಹಿ ಕುರುಬರ ದೇವರಾಜ ಎನ್ನುವವರನ್ನು ಸ್ಥಳಕ್ಕೆ ಕರೆತಂದಿದ್ದಾರೆ.

ಆಗ ಮುಳುಗುತ್ತಿದ್ದ ಆಕಾಶ್ ನನ್ನು ದೇವರಾಜ ನೀರಿಗೆ ಇಳಿದು ದಡಕ್ಕೆ ಎಳೆದು ತಂದು ಪ್ರಾಣಾಪಾಯದಿಂದ ಪಾರು ಮಾಡಿದ್ದಾರೆ, ಈ ಕುರಿತಂತೆ ಕುರಿಗಾಹಿಯೊಬ್ಬರ ಕಾರ್ಯದ ಬಗ್ಗೆ ಶ್ಲಾಘನೆ ವ್ಯಕ್ತವಾಗಿದೆ.

ADVERTISEMENT

‘ಪ್ರಜಾವಾಣಿ’ಯೊಂದಿಗೆ ಮಾತನಾಡಿದ ದೇವರಾಜ ‘ಕೆರೆಯ ಅಲ್ಲಲ್ಲಿ ದೊಡ್ಡದಾದ ಗುಂಡಿಗಳಿವೆ, ಸಣ್ಣ ಮಕ್ಕಳು ಮತ್ತು ಈಜು ಬರದವರು ಇಳಿಯಬಾರದು, ಈ ಸ್ಥಳದಲ್ಲಿ ಮೊದಲ ಬಾರಿಗೆ ಇಂಥಹ ಅವಘಡ ಸಂಭವಿಸಿದೆ. ಪಾಲಕರು ಮತ್ತು ಪೋಷಕರು ತಮ್ಮ ಮಕ್ಕಳ ಬಗ್ಗೆ ಕಾಳಜಿ ವಹಿಸಬೇಕು, ಶಾಲೆಗಳ ರಜೆ ದಿನಗಳಲ್ಲಿ ಗಮನ ಹರಿಸಬೇಕು’ ಎಂದು ಮನವಿ ಮಾಡಿದರು.

ಆದರೆ ಕುರಿಗಾಹಿಗಳು ಕೆರೆಯ ಗುಂಡಿಯ ಸ್ಥಳಕ್ಕೆ ಬರುವ ಮುನ್ನ ಗೆಳೆಯ ಆಕಾಶ್‍ನನ್ನು ರಕ್ಷಿಸಲು ಮುಂದಾಗಿದ್ದ ಯು.ಪೃಥ್ವಿ (10) ಕೆರೆಯಲ್ಲಿ ಮುಳುಗಿ ಜೀವ ತೆತ್ತಿದ್ದಾನೆ. ಈ ಬಾಲಕ ಮುಳುಗಿದ ಒಂದು ಗಂಟೆಯ ಬಳಿಕ ತಿಳಿದಿದೆ.

ಇವರೊಂದಿಗೆ ಬಂದಿದ್ದ ಮೂವರು ಗೆಳೆಯರು ಭಯದಿಂದಾಗಿ ಅಲ್ಲಿಂದ ಓಡಿ ಹೋಗಿದ್ದರು. ಪೃಥ್ವಿ ಬಿದ್ದಿರುವುದು ಗೊತ್ತಾಗಿದ್ದರೆ ಅವನನ್ನೂ ರಕ್ಷಿಸುತ್ತಿದ್ದೆವು, ಪಾಪ ಅವನನ್ನು ಹೊರ ತೆಗೆದಾಗ ಜೀವ ಇರಲಿಲ್ಲ ಎಂದು ದೇವರಾಜ ನೋವಿನಿಂದ ನುಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.