
ಹಗರಿಬೊಮ್ಮನಹಳ್ಳಿ: ಇಲ್ಲಿನ ಉಪನೋಂದಣಿ ಕಚೇರಿ ಮುಂದೆ ದಸ್ತಾವೇಜು(ಪತ್ರ) ಬರಹಗಾರರ ಸಂಘದಿಂದ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದ ನಡೆಸುತ್ತಿರುವ ಧರಣಿ ಶುಕ್ರವಾರ 2ನೇ ದಿನಕ್ಕೆ ಕಾಲಿರಿಸಿದೆ.
ಸಂಘದ ಅಧ್ಯಕ್ಷ ಎಸ್.ವೀರಭದ್ರಪ್ಪ ಮಾತನಾಡಿ, ಸರ್ಕಾರ ಈಗ ಆನ್‍ಲೈನ್ ನೋಂದಣಿ ನಿಯಮ ಜಾರಿ ಮಾಡಿದೆ, ಆದರೆ ಇದರಲ್ಲಿ ಹಲವು ನೂನ್ಯತೆಗಳಿವೆ, ಸರಿಯಾಗಿ ಸರ್ವರ್ ಕಾರ್ಯ ನಿರ್ವಹಿಸದೇ ಸಾರ್ವಜನಿಕರು ಮತ್ತು ಬರಹಗಾರರಿಗೆ ತೀವ್ರ ತೊಂದರೆಯಾಗುತ್ತದೆ.
ಈ ಮೊದಲು ಕಾವೇರಿ 2.0 ಜಾರಿಯಲ್ಲಿತ್ತು, 3.0 ತಂದಿದ್ದಾರೆ, ಇದರಿಂದ ಹಲವಾರು ಸಮಸ್ಯೆಗಳು ಉಂಟಾಗುತ್ತಿವೆ ಮತ್ತು ಸುಳ್ಳು ದಾಖಲೆಗಳು ಸೃಷ್ಟಿ ಆಗುತ್ತವೆ. ಇದರಿಂದಾಗಿ ಪತ್ರ ಬರಹಗಾರರಿಗೆ ಹಾಗೂ ವಕೀಲರಿಗೆ ಪ್ರತ್ಯೇಕವಾಗಿ ಲಾಗಿನ್ ಒದಗಿಸಬೇಕು ಎಂದು ಒತ್ತಾಯಿಸಿದರು.
ಹಿರಿಯ ಪತ್ರ ಬರಹಗಾರ ಕೆ.ಪಿ.ಮಠದ್ ಮಾತನಾಡಿ, ಗಣಕೀಕೃತ ಇ-ಸ್ವತ್ತು, ಇ-ಆಸ್ತಿ ದಾಖಲೆಗಳಿಂದಾಗುತ್ತಿರುವ ಲೋಪ ಸರಿಪಡಿಸಬೇಕು. ಅನಧಿಕೃತ ಬರಹಗಾರರ ಹಾವಳಿ ತಪ್ಪಿಸಲು ಪತ್ರ ಬರಹಗಾರರಿಗೆ ಏಕ ಮಾದರಿಯ ಗುರುತಿನ ಚೀಟಿ ನೀಡಬೇಕು, ಸೇವಾ ಭದ್ರತೆ ಒದಗಿಸಬೇಕು ಎಂದು ಆಗ್ರಹಿಸಿದರು.
ಸಂಘದ ಗೌರವ ಅಧ್ಯಕ್ಷ ಹಾಲೇಶ್, ಎ.ಎಂ.ಕೊಟ್ರೇಶ್, ಎಸ್.ಎಂ.ಸಂಗಮೇಶ್, ಎಚ್.ಎಂ. ಎಂ.ಶ್ರೀಧರ್, ವೆಂಕಟೇಶ್, ಇಮಾಮ್ ಅಲಿ, ಲೋಕೇಶ್, ವಕೀಲರಾದ ಡಿ. ಕರಿಬಸಪ್ಪ, ಚಂದ್ರಶೇಖರ, ಪ್ರಕಾಶ್, ಸುನೀತಾ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.