
ಹಗರಿಬೊಮ್ಮನಹಳ್ಳಿ: ಸರ್ಕಾರ ಘೋಷಿಸಿರುವ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಪ್ರಕ್ರಿಯೆ ಪಾರದರ್ಶಕವಾಗಿ ನಡೆಯಬೇಕು. ರೈತರಿಗೆ ತೊಂದರೆ ಮಾಡಬೇಡಿ ಎಂದು ಶಾಸಕ ಕೆ.ನೇಮರಾಜನಾಯ್ಕ ಅಧಿಕಾರಿಗಳಿಗೆ ತಾಕೀತು ಮಾಡಿದರು.
ಪಟ್ಟಣದ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ (ಎಪಿಎಂಸಿ) ಆವರಣದಲ್ಲಿ ನಡೆದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿ ಕೇಂದ್ರಕ್ಕೆ ಶನಿವಾರ ಚಾಲನೆ ನೀಡಿ ಅವರು ಮಾತನಾಡಿದರು.
ಇಲ್ಲದ ನೆಪ ಹೇಳಿ ರೈತರು ಬೆಳೆದ ಬೆಳೆಗಳನ್ನು ಖರೀದಿಸಲು ಹಿಂದೇಟು ಹಾಕಬೇಡಿ. ಸುಖಾಸುಮ್ಮನೆ ರೈತರನ್ನು ಕಾಯಿಸಬೇಡಿ. ಅವರಿಗೆ ದೂರವಾಣಿ ಮೂಲಕ ಕರೆ ಮಾಡಿ ಖರೀದಿಸಲು ನಿಗದಿಯಾದ ಸಮಯವನ್ನು ತಿಳಿಸಬೇಕು. ಸರ್ಕಾರ ಪ್ರತಿ ಕ್ವಿಂಟಲ್‍ಗೆ ₹4,886 ದರ ನಿಗದಿ ಮಾಡಿದೆ. ಪ್ರತಿ ರೈತರಿಂದ ಎಕರೆಗೆ 10ಕ್ವಿಂಟಲ್‍ನಂತೆ ಗರಿಷ್ಠ 50ಕ್ವಿಂಟಲ್ ಖರೀದಿ ಮಾಡಬೇಕು ಎಂದು ಅಧಿಕಾರಿಗಳಿಗೆ ಹೇಳಿದರು.
ಹಿಂಗಾರು ಹಂಗಾಮಿನಲ್ಲಿ ಬೆಳೆದ ರಾಗಿಯನ್ನೂ ಬೆಂಬಲ ಬೆಲೆ ಯೋಜನೆಯಡಿ ಖರೀದಿಸಬೇಕು ಎಂದು ಸರ್ಕಾರದ ಗಮನ ಸೆಳೆಯಲಾಗುವುದು. ಖರೀದಿಯ ಬಳಿಕ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಪಾವತಿಸಬೇಕು. ವಿಳಂಬ ಮಾಡಬಾರದು ಎಂದು ಸೂಚನೆ ನೀಡಿದರು.
ವರಲಹಳ್ಳಿ ವಿವಿದೋದ್ಧೇಶ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರ ಸಂಘದ ಅಧ್ಯಕ್ಷ ಜೆ.ಎಂ.ವಿನಾಯಕ ಮಾತನಾಡಿ, ಖರೀದಿ ಹೊಣೆಯನ್ನು ಸಂಘಕ್ಕೆ ನೀಡಲಾಗಿದೆ. ರೈತರನ್ನು ಕಾಯಿಸದೇ ಸಮರ್ಪಕವಾಗಿ ಸರದಿಯಲ್ಲಿ ಖರೀದಿಗೆ ಕ್ರಮ ಕೈಗೊಳ್ಳಲಾಗುವುದು ಎಂದರು. ತಾಲ್ಲೂಕಿನ 1200 ಜನ ರೈತರಿಂದ 34ಸಾವಿರ ಕ್ವಿಂಟಲ್ ರಾಗಿ ಖರೀದಿಸಲಾಗುವುದು ಎಂದು ತಿಳಿಸಿದರು.
ಎಪಿಎಂಸಿ ಕಾರ್ಯದರ್ಶಿ ಎನ್.ಶೈಲಾ, ಸಹ ಕಾರ್ಯದರ್ಶಿ ಎಸ್.ಮಂಜುನಾಥ, ವರಲಹಳ್ಳಿ ಕೃಷಿ ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಎಂ.ಬಸವರಾಜ, ಆಹಾರ ನಿರೀಕ್ಷಕಿ ಮಮತಾ ಜಿ.ಹಿರೇಮಠ, ಜೆಡಿಎಸ್ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ ಬಾದಾಮಿ ಮೃತ್ಯುಂಜಯ, ತಾಲ್ಲೂಕು ಘಟಕದ ಅಧ್ಯಕ್ಷ ವೈ.ಮಲ್ಲಿಕಾರ್ಜುನ, ಮುಖಂಡರಾದ ಮೈನಹಳ್ಳಿ ಕೊಟ್ರೇಶಪ್ಪ, ಕಿನ್ನಾಳ್ ಸುಭಾಷ್, ಐ.ಟಿ.ಕೊಟ್ರೇಶ್, ವಟ್ಟಮ್ಮನಹಳ್ಳಿ ಕೊಟ್ರೇಶ್ ಇದ್ದರು.
ಕತ್ತರಿ ಹಾಕಲ್ಲ
ಎಪಿಎಂಸಿ ಆವರಣದಲ್ಲಿ ಅಧಿಕಾರಿಗಳು ರಾಗಿ ಖರೀದಿ ಕೇಂದ್ರ ಚಾಲನೆಗೆ ರಾಗಿ ರಾಶಿ ಪೂಜೆ ಮತ್ತು ಜರಡಿಗೆ ಟೇಪ್ ಕಟ್ಟಿದ್ದರು. ಚಾಲನೆ ನೀಡಲು ಕತ್ತರಿ ನೀಡಿದಾಗ ರೈತರ ಕಾರ್ಯಕ್ರಮವಾಗಿದ್ದರಿಂದ ನಾನು ಕತ್ತರಿಹಾಕಲ್ಲ ಎಂದು ನಯವಾಗಿ ತಿರಸ್ಕರಿಸಿ ಅಳವಡಿಸಿದ್ದ ಟೇಪ್‍ನ್ನು ಕೈಯಿಂದ ಕೀಳುವ ಮೂಲಕ ಶಾಸಕ ಕೆ.ನೇಮರಾಜನಾಯ್ಕ ಚಾಲನೆ ನೀಡಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.