ಹರಪನಹಳ್ಳಿ: ‘ಗುತ್ತಿಗೆದಾರರು ಬಾಡಿಗೆ ಹಣ ಪಾವತಿಸುತ್ತಿಲ್ಲ. ನಮ್ಮ ಜಮೀನುಗಳಲ್ಲಿ ಇರಿಸಿರುವ ಸಾಮಗ್ರಿ ತೆರವುಗೊಳಿಸುತ್ತಿಲ್ಲ, ಬಿತ್ತನೆಗೂ ಅವಕಾಶ ಸಿಗುತ್ತಿಲ್ಲ, ಈಗ ನಾವ್ಯಾರ ಬಳಿ ಬಾಡಿಗೆ ಹಣ ಕೇಳಬೇಕು ಹೇಳಿ’
ಇದು ತಾಲ್ಲೂಕಿನ ಮಹತ್ವಾಕಾಂಕ್ಷಿ ಯೋಜನೆ ಗರ್ಭಗುಡಿ ಬ್ರಿಡ್ಜ್ ಕಂ ಬ್ಯಾರೇಜ್ ನಿರ್ಮಾಣ ಕಾಮಗಾರಿಗೆ ಜಮೀನು ಬಾಡಿಗೆ ಕೊಟ್ಟಿರುವ ಗರ್ಭಗುಡಿ ಗ್ರಾಮ ರೈತರ ಅಳಲು. ಗರ್ಭಗುಡಿ ಗ್ರಾಮದ ಬಳಿ ನಿರ್ಮಿಸುತ್ತಿರುವ ಸೇತುವೆ ಸಹಿತ ಬಾಂದಾರ ಕಾಮಗಾರಿಗಾಗಿ ರಸ್ತೆ ಹೊರತುಪಡಿಸಿ, ಸಾಮಗ್ರಿ ಇಟ್ಟುಕೊಳ್ಳುವುದಕ್ಕಾಗಿ ಹಲವು ರೈತರಿಂದ ಒಟ್ಟು 4 ಎಕರೆ ಜಮೀನನ್ನು ಖಾಸಗಿ ಗುತ್ತಿಗೆದಾರರು ಬಾಡಿಗೆಗೆ ಪಡೆದಿದ್ದಾರೆ.
‘ಗ್ರಾಮ ಮತ್ತು ತಾಲ್ಲೂಕಿಗೆ ಒಳಿತಾಗಲಿ ಎನ್ನುವ ಉದ್ದೇಶದಿಂದ ಕಂಪನಿ ನಿಗದಿಪಡಿಸಿದ್ದ ಹಣಕ್ಕೆ ಒಪ್ಪಿಕೊಂಡು ವಾಲ್ಮೀಕಿ ಭರಮವ್ವ 40 ಸೆಂಟ್ಸ್, ವಾಲ್ಮೀಕಿ ಸಣ್ಣತಾಯವ್ವ 39 ಸೆಂಟ್ಸ್, ಮಾಳಮ್ಮ 40 ಸೆಂಟ್ಸ್, ಸೌಭಾಗ್ಯಮ್ಮ 40 ಸೆಂಟ್ಸ್, ಪುಟ್ಟಮ್ಮ 40 ಸೆಂಟ್ಸ್ ಸೇರಿ ಒಟ್ಟು 2.03 ಎಕರೆ ಜಮೀನನ್ನು ಬಾಡಿಗೆಗೆ ಕೊಟ್ಟಿದ್ದರು. ತಿಮ್ಮಪ್ಪ 2 ಎಕರೆ, ಭಂಡಾರಿ ನಿಂಗಪ್ಪ 1 ಎಕರೆ ಅವರು ಭೂಮಿ ಬಾಡಿಗೆಗೆ ಕೊಟ್ಟಿದ್ದರು. ಕರಾರಿನ ಪ್ರಕಾರ 40 ಸೆಂಟ್ಸ್‌ಗೆ ₹ 1.28 ಲಕ್ಷ ನಿಗದಿಪಡಿಸಲಾಗಿತ್ತು. ಎಲ್ಲ ರೈತರಿಗೆ ಅಂದಾಜು ಒಟ್ಟು ₹ 17 ಲಕ್ಷ ಬಾಡಿಗೆ ಹಣ ಬರಬೇಕಿದೆ’ ಎಂದು ರೈತರಾದ ಜನಾರ್ದನ ಮತ್ತು ಮಲ್ಲಿಕಾರ್ಜುನ್ ಮಾಹಿತಿ ನೀಡಿದರು.
2015ರಲ್ಲಿ ಅಮೃತ ನಿರ್ಮಾಣ ಗ್ರುಪ್ ಗುತ್ತಿಗೆ ಪಡೆದಿತ್ತು. ಆಗ ಸೇತುವೆ ನಿರ್ಮಾಣ ಜಾಗದ ಬಳಿಯಿದ್ದ ವಿವಿಧ ಅಂದಾಜು 4 ಎಕರೆ ಜಮೀನು ಬಾಡಿಗೆ ಪಡೆಯಲು ರೈತರೊಂದಿಗೆ ಪರಸ್ಪರ ಒಪ್ಪಂದ ಮಾಡಿಕೊಂಡು, ಆ ಪ್ರಕಾರ ಬಾಡಿಗೆ ಹಣ ಪಾವತಿಸಿತ್ತು. ನಷ್ಟದ ನೆಪ ಹೇಳಿ ಅವರು ಗುತ್ತಿಗೆ ಕೈಬಿಟ್ಟಿದ್ದರಿಂದ, ಅದೇ ಕರಾರನ್ನು ಆದಿತ್ಯ ನಿರ್ಮಾಣ ಕಂಪನಿಯು ಮುಂದುವರಿಸಿದೆ. ಆದರೆ ಬಾಡಿಗೆ ಹಣ ಪಾವತಿಸಿಲ್ಲ. ದೂರವಾಣಿ ಸಂಪರ್ಕಕ್ಕೂ ಸಿಗದ ಪರಿಣಾಮವಾಗಿ ರೈತರು ಪರದಾಡುತ್ತಿದ್ದಾರೆ.
ರೈತರ ಅಳಲು ಕೇಳಿಸಿಕೊಂಡಿರುವ ಶಾಸಕಿ ಎಂ.ಪಿ. ಲತಾ ಮಲ್ಲಿಕಾರ್ಜುನ್ ಅವರು, ‘ಕಂದಾಯ ಇಲಾಖೆಯವರು ಸಮೀಕ್ಷೆ ಕೈಗೊಂಡು ಅಗತ್ಯವಿರುವ 450 ಮೀಟರ್ ಮಾತ್ರ ಓಡಾಡುವ ರಸ್ತೆಗೆ ಬಳಸಿಕೊಳ್ಳುತ್ತಾರೆ. ಇದಕ್ಕೆ ನಿಯಮಾನುಸಾರ ಪರಿಹಾರ ಹಣ ರೈತರ ಖಾತೆಗೆ ಪಾವತಿಸಲು ಕ್ರಮ ವಹಿಸುತ್ತೇವೆ’ ಎಂದು ರೈತರಿಗೆ ಭರವಸೆ ನೀಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.