
ಹರಪನಹಳ್ಳಿ: ವೈಚಾರಿಕತೆ ಸಂದೇಶ ಸಾರುವ ವಾಲ್ಮೀಕಿ ಜಾತ್ರೆಗೆ ತಾಲ್ಲೂಕಿನಿಂದ ಹೆಚ್ಚಿನ ಜನರನ್ನು ಕರೆದೊಯ್ಯಲು ಎಲ್ಲ ಹಳ್ಳಿಗಳಲ್ಲಿ ಜಾಗೃತಿ ಮೂಡಿಸಲಾಗಿದೆ ಎಂದು ವಾಲ್ಮೀಕಿ ಸಮಾಜದ ಗೌರವ ಅಧ್ಯಕ್ಷ ಎಚ್.ಕೆ.ಹಾಲೇಶ್ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ವಾಲ್ಮೀಕಿ ಸಮಾಜ ಮಂಗಳವಾರ ಕರೆದಿದ್ದ ಸಭೆಯಲ್ಲಿ ಅವರು ಮಾತನಾಡಿದರು. ಎಸ್ಟಿಗೆ ಕೊಟ್ಟಿರುವ ಮೀಸಲಾತಿ 7ರ ಅಂಶವನ್ನು 9ನೇ ಪರಿಚ್ಚೇದದಲ್ಲಿ ಸೇರಿಸಲು ಕೇಂದ್ರ ಸರ್ಕಾರಕ್ಕೆ ಒತ್ತಾಯಿಸಲಾಗುವುದು. ಬೆಂಗಳೂರಿನಲ್ಲಿ ಕೊಟ್ಟಿರುವ 8 ಎಕರೆ ಜಮೀನಿನಲ್ಲಿ ಶ್ರೀಮಠವು ಎಸ್ಟಿ ಸಚಿವಾಲಯ, ಕೌಶಲ್ಯಾಭಿವೃದ್ದಿ, ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ಕೇಂದ್ರ ಸೇರಿ ಹಲವು ಯೋಜನೆ ಅನುಷ್ಠಾನಗೊಳಿಸಲು ರೂ.300 ಕೋಟಿ ಕ್ರಿಯಾಯೋಜನೆ ತಯಾರಿಸಿದೆ. ಅದನ್ನು ಅನುಮೋದಿಸಲು ರಾಜ್ಯದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು.
ವಾಲ್ಮೀಕಿ ಜಾತ್ರಾ ಸಮಿತಿ ತಾಲ್ಲೂಕು ಅಧ್ಯಕ್ಷ ಆರ್.ಲೋಕೇಶ ಮಾತನಾಡಿ, ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರ ನೇತೃತ್ವದಲ್ಲಿ ಸಮಾಜದ ಏಳ್ಗೆಗೆ ಹೋರಾಟಕ್ಕೆ ಸದಾ ಸಿದ್ದ ರಾಗಿದ್ದೇವೆ ಎಂದರು. ವಾಲ್ಮೀಕಿ ಸಮಾಜದ ಮಾಜಿ ಅಧ್ಯಕ್ಷ ಕೆ.ಉಚ್ಚೆಂಗೆಪ್ಪ ಮಾತನಾಡಿ, ರಾಜನಹಳ್ಳಿ ವಾಲ್ಮೀಕಿ ಗುರುಪಿಠದ ಪ್ರಸನ್ನಾನಂದ ಪುರಿ ಸ್ವಾಮೀಜಿ ಅವರು ಜನಾಂಗದ ಒಳಿತಿಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಜಾತ್ರೆಯಲ್ಲಿ ಸಂಪೂರ್ಣ ರಾಮಾಯಣ ನಾಟಕ, ಧರ್ಮ ಸಭೆ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿವೆ ಎಂದು ಮಾಹಿತಿ ನೀಡಿದರು.
ವಾಲ್ಮೀಕಿ ಸಮಾಜದ ಮಹಿಳಾ ಘಟಕದ ಅಧ್ಯಕ್ಷೆ ಟಿ.ವನಜಾಕ್ಷಮ್ಮ ಮಾತನಾಡಿ, 'ಜಾತ್ರೆ ಎಂದರೆ ಸಂಪ್ರದಾಯವಲ್ಲ, ಅದೊಂದು ಜಾಗೃತಿಯ ಕೇಂದ್ರವಾಗಿದೆ' ಎಂದು ತಿಳಿಸಿದರು. ಕಾರ್ಯದರ್ಶಿ ಎಚ್.ಕೆ.ಮಂಜುನಾಥ, ವನಜಾಕ್ಷಮ್ಮ, ಲಕ್ಷ್ಮೀ, ಮುಖಂಡರಾದ ಗಿಡ್ನಳ್ಳಿ ನಾಗರಾಜ್, ಗುಂಡಿ ಮಂಜಪ್ಪ, ತೆಲಿಗಿ ಅಂಜಿನಪ್ಪ, ನಾಗರಾಜಪ್ಪ, ಪ್ರಕಾಶ್, ಪೂಜಾರ ರಾಜು, ಆಲೂರು ಶ್ರೀನಿವಾಸ, ತೆಲಿಗಿ ನಾಗರಾಜ್ , ಚಿಕ್ಕೇರಿ ಯಂಕಪ್ಪ, ಕೆಂಗಳ್ಳಿ ಪ್ರಕಾಶ್, ಶಿವಣ್ಣ, ರಾಜಪ್ಪ, ಕಣಿವಿಹಳ್ಳಿ ಮಾರುತಿ, ಲಕ್ಷ್ಮಮ್ಮ, ರಾಯದುರ್ಗ ವಾಗೀಶ, ಪರಸಪ್ಪ ಇತರರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.