ಸಂಡೂರು: ತಾಲ್ಲೂಕಿನ ವಡೆರಾಹಳ್ಳಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸಹ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಶಿಕ್ಷಕ ಸಣ್ಣಹನುಮಂತಪ್ಪ(55) ಅವರು ಬುಧವಾರ ಹೃದಯಘಾತದಿಂದ ನಿಧನರಾಗಿದ್ದರು. ಅವರ ಪತ್ನಿ ಸುಜಾತಾ (50) ಕೂಡಾ ಮರುದಿನ ಗುರುವಾರ ಹೃದಯಘಾತದಿಂದ ಮೃತಪಟ್ಟರು. ಪತಿ - ಪತ್ನಿ ಇಬ್ಬರು ಸಾವಿನಲ್ಲೂ ಒಂದಾಗಿರುವುದಕ್ಕೆ ಜನರು ಮರುಕ ವ್ಯಕ್ತಪಡಿಸಿದರು.
ಹೊಸಪೇಟೆ ತಾಲ್ಲೂಕಿನ ಸಣ್ಣಹನುಂತಪ್ಪ ಅವರು ಸಂಡೂರು ತಾಲ್ಲೂಕಿನ ತೊಕೆನಹಳ್ಳಿ ತಾಂಡಾದ ಸರ್ಕಾರಿ ಶಾಲೆಯಲ್ಲಿ 20 ವರ್ಷಗಳಿಂದ ಸೇವೆ ಸಲ್ಲಿಸಿ ಪ್ರಸ್ತುತ ವಡೇರಹಳ್ಳಿ ಶಾಲೆಗೆ ವರ್ಗಾವಣೆಯಾಗಿ ಸೇವೆ ಸಲ್ಲಿಸುತ್ತಿದ್ದರು. ಕೂಡ್ಲಿಗಿ ತಾಲ್ಲೂಕಿನ ರಾಮದುರ್ಗ ಪತ್ನಿ ತವರಿನಲ್ಲೇ ಮನೆ ಮಾಡಿಕೊಂಡು ಜೊತೆ ವಾಸವಿದ್ದರು.
ಬುಧವಾರ ಬೆಳಿಗ್ಗೆ ವಾಯು ವಿಹಾರಕ್ಕೆ ತೆರಳಿದ್ದಾಗ ಹೃದಯಘಾತದಿಂದ ಮೃತಪಟ್ಟಿದ್ದರು. ಅವರ ಕಾರಿಗನೂರು ಗ್ರಾಮದಲ್ಲಿ ಪತಿಯ ಅಂತ್ಯಕ್ರಿಯೆ ಮುಗಿಸಿ ರಾಮದುರ್ಗಕ್ಕೆ ಸುಜಾತಾ ಮರಳಿದ್ದರು. ಗುರುವಾರ ಬೆಳಗಿನ ಜಾವ ಸುಜಾತಾ ಅವರೂ ಹೃದಯಘಾತದಿಂದ ನಿಧನರಾಗಿದ್ದಾರೆ.
ಮೃತ ದಂಪತಿಗೆ ಪುತ್ರ, ಪುತ್ರಿ ಇದ್ದಾರೆ. ಪುತ್ರಿಗೆ ವಿವಾಹವಾಗಿದೆ. ಪತಿಯ ಅಂತ್ಯ ಸಂಸ್ಕಾರ ಮಾಡಿದ ಕಾರಿಗನೂರು ಗ್ರಾಮದಲ್ಲೇ ಪತ್ನಿಯ ಅಂತ್ಯಕ್ರಿಯೆ ನಡೆಸಲಾಗಿದ್ದು, ಸಾವಿನಲ್ಲೂ ಒಂದಾದ ದಂಪತಿಯನ್ನು ಬಂಧು ಮಿತ್ರರು ಸಂಬಂಧಿಗಳು ನೆನೆದು ಕಂಬನಿ ಮಿಡಿದಿದ್ದಾರೆ.
‘ಶಿಕ್ಷಕ ಸಣ್ಣಹನುಮಂತಪ್ಪ ಅವರು ಹೃದಯಘಾತದಿಂದ ನಿಧನರಾಗಿದ್ದರು. ಅದೇ ನೆನೆಪಿನಲ್ಲಿಯೂ ಅವರ ಪತ್ನಿಯು ಸಹ ಹೃದಯಘಾತದಿಂದ ನಿಧನರಾಗಿರುವುದು ಅತಿ ದು:ಖಕರ ಸಂಗತಿ. ಮೃತ ಶಿಕ್ಷಕರಿಗೆ ಸರ್ಕಾರದಿಂದ ಸಿಗುವ ಎಲ್ಲ ಸೌಲಭ್ಯಗಳನ್ನು ಅವರ ಮಕ್ಕಳಿಗೆ ದೊರಕಿಸಲಾಗುವುದು’ ಎಂದು ಸಂಡೂರು ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಆರ್.ಅಕ್ಕಿ ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.