ADVERTISEMENT

ಭಾರಿ ಪ್ರಮಾಣದಲ್ಲಿ ತುಂಗಭದ್ರೆಗೆ ಹರಿದು ಬರುತ್ತಿದೆ ನೀರು: ರೈತರ ಚಿಂತೆ ದೂರ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 8 ಆಗಸ್ಟ್ 2019, 19:45 IST
Last Updated 8 ಆಗಸ್ಟ್ 2019, 19:45 IST
ಮೈದುಂಬಿಕೊಂಡಿರುವ ತುಂಗಭದ್ರಾ ಜಲಾಶಯ
ಮೈದುಂಬಿಕೊಂಡಿರುವ ತುಂಗಭದ್ರಾ ಜಲಾಶಯ   

ಹೊಸಪೇಟೆ: ಸಮರ್ಪಕವಾಗಿಮಳೆಯಾಗದೇ ಇರುವುದು, ತುಂಗಭದ್ರಾ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗದ ಕಾರಣ ಚಿಂತಕ್ರಾಂತರಾಗಿದ್ದ ರೈತರ ಮೊಗದಲ್ಲಿ ಈಗ ಮಂದಹಾಸ ಮೂಡಿದೆ.

ಕಳೆದ ಕೆಲವು ದಿನಗಳಿಂದ ಅಣೆಕಟ್ಟೆಗೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿದ್ದು, ದಿನೇ ದಿನೇ ಜಲಾಶಯದಲ್ಲಿ ನೀರಿನ ಸಂಗ್ರಹ ಹೆಚ್ಚಾಗುತ್ತಿದೆ. ಅಷ್ಟೇ ಅಲ್ಲ, ಬುಧವಾರದಿಂದ ಕೃಷಿ ಉದ್ದೇಶಕ್ಕಾಗಿ ಕಾಲುವೆಗಳಿಗೆ ನೀರು ಹರಿಸುತ್ತಿರುವುದೇ ರೈತರ ಸಂತಸಕ್ಕೆ ಪ್ರಮುಖ ಕಾರಣ.

ಮಳೆಗಾಲ ಆರಂಭವಾಗಿ ಎರಡು ತಿಂಗಳಾಗುತ್ತ ಬಂದರೂ ಇದುವರೆಗೆ ಜಿಲ್ಲೆಯಲ್ಲಿ ಒಮ್ಮೆಯೂ ಹೇಳಿಕೊಳ್ಳುವಂತಹ ಮಳೆಯಾಗಿಲ್ಲ. ಆಗಾಗ ತುಂತುರು, ಜಿಟಿಜಿಟಿ ಮಳೆಯಷ್ಟೇ ಆಗುತ್ತಿದೆ. ಜಲಾಶಯಕ್ಕೂ ನೀರು ಹರಿದು ಬರುತ್ತಿರಲಿಲ್ಲ. ಇದರಿಂದಾಗಿ ರೈತರು ತೀವ್ರ ಆತಂಕಕ್ಕೆ ಒಳಗಾಗಿದ್ದರು.

ADVERTISEMENT

ಆದರೆ, ಮಳೆಯಾಗದಿದ್ದರೂ ಜಲಾಶಯಕ್ಕೆ ಅಪಾರ ಪ್ರಮಾಣದಲ್ಲಿ ನೀರು ಹರಿದು ಬರುತ್ತಿರುವುದರಿಂದ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ. ಅದರಲ್ಲೂ ಕಾಲುವೆಯ ನೀರನ್ನೇ ನೆಚ್ಚಿಕೊಂಡು ಕೃಷಿ ಮಾಡುವ ರೈತರ ಆತಂಕ ದೂರವಾಗಿದೆ. ಒಳಹರಿವು ಹೆಚ್ಚಾಗುತ್ತಿದ್ದಂತೆ ಕೃಷಿ ಉದ್ದೇಶಕ್ಕಾಗಿ ನೀರು ಹರಿಸಲಾಗುತ್ತಿದೆ. ಇಷ್ಟು ದಿನ ಕೆಲಸವಿಲ್ಲದೆ ಸುಮ್ಮನೆ ಕುಳಿತಿದ್ದ ರೈತರು ಕೃಷಿ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.

ಜಿಲ್ಲೆಯ ಭತ್ತದ ಗದ್ದೆಗಳಲ್ಲಿ ಈಗ ಬಿರುಸಿನ ಚಟುವಟಿಕೆ ಆರಂಭಗೊಂಡಿದೆ. ಎಲ್ಲೆಡೆ ಭತ್ತ ನಾಟಿ ಮಾಡಲು ರೈತರು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಕಾಲುವೆ ಆರಂಭದ ಗದ್ದೆಗಳಲ್ಲಿ ಎರಡು ದಿನಗಳಿಂದ ರೈತರು ನಾಟಿ ಮಾಡುತ್ತಿದ್ದಾರೆ.

‘ಎರಡು ತಿಂಗಳಾದರೂ ಮಳೆ ಬಂದಿಲ್ಲ. ಜಲಾಶಯದಲ್ಲಿ ನೀರು ಇರಲಿಲ್ಲ. ಈಗ ಅಣೆಕಟ್ಟೆ ತುಂಬುತ್ತಿರುವುದು ಎಲ್ಲ ರೈತರಿಗೂ ಖುಷಿ ತಂದಿದೆ. ತುಂಗಭದ್ರಾ ನೀರಾವರಿ ಸಲಹಾ ಸಮಿತಿ ಸಭೆಗೆ (ಐ.ಸಿ.ಸಿ.) ಕಾಯದೇ ಕಾಲುವೆಗಳಿಗೆ ನೀರು ಬಿಡಲು ಸರ್ಕಾರ ತೀರ್ಮಾನಿಸಿರುವುದು ಒಳ್ಳೆಯ ಸಂಗತಿ. ಸಸಿಗಳನ್ನು ತಂದಿದ್ದು, ಶುಕ್ರವಾರದಿಂದ ನಾಟಿ ಕೆಲಸ ಶುರು ಮಾಡುತ್ತೇನೆ’ ಎಂದು ಹೊಸೂರಿನ ರೈತ ಉಜ್ಜಿನಪ್ಪ ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬಹುತೇಕ ರೈತರು ಕಾಲುವೆಯ ನೀರು, ಮಳೆಯನ್ನೇ ಆಶ್ರಯಿಸಿಕೊಂಡು ಕೃಷಿ ಮಾಡುತ್ತಾರೆ. ಅವುಗಳೆರಡೂ ಇಲ್ಲದಿದ್ದರೆ ಕೃಷಿ ಮಾಡುವುದು ಹೇಗೆ. ಎರಡು ತಿಂಗಳಿಂದ ಜನ ಕಾಲುವೆ ತುಂಬಲಿ, ಮಳೆಯಾಗಲಿ ಎಂದು ಪೂಜೆ ಪುನಸ್ಕಾರ ಮಾಡುತ್ತಿದ್ದರು. ಎರಡು ಹರಕೆಗಳಲ್ಲಿ ಒಂದು ಈಡೇರಿದೆ. ಕೊನೆಗೂ ದೇವರು ಕಣ್ಣು ಬಿಟ್ಟಿರುವುದು ಖುಷಿ ತಂದಿದೆ. ಆದಷ್ಟು ಶೀಘ್ರ ಎಚ್‌.ಎಲ್‌.ಸಿ. ಕಾಲುವೆಗೂ ನೀರು ಬಿಡಬೇಕು’ ಎಂದು ಕಮಲಾಪುರದ ರೈತ ಹುಲುಗಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.