ಹೂವಿನಹಡಗಲಿ: ತಾಲ್ಲೂಕಿನ ಬ್ಯಾಲಹುಣ್ಸಿ ಗ್ರಾಮದ ತಗ್ಗು ಪ್ರದೇಶದ ಜಮೀನುಗಳಿಗೆ ಅಪಾರ ಪ್ರಮಾಣದ ಮಳೆಯ ನೀರು ನುಗ್ಗಿ ಭತ್ತದ ಗದ್ದೆಗಳು ಮುಳುಗಡೆಯಾಗಿವೆ.
ಕೆಲ ದಿನಗಳಿಂದ ನಿರಂತರ ಮಳೆ ಸುರಿಯುತ್ತಿದೆ. ಕತ್ತೆಬೆನ್ನೂರು, ಹಿರೇಬನ್ನಿಮಟ್ಟಿ, ನಂದಿಗಾವಿ, ಮಕರಬ್ಬಿ ಗ್ರಾಮಗಳ ಜಮೀನುಗಳಿಂದ ಹರಿದು ಬರುವ ಅಪಾರ ಮಳೆಯ ನೀರು ನದಿ ಸೇರುವ ಮಾರ್ಗ ಇಲ್ಲದಿರುವುದರಿಂದ ಹೊಲಗಳಿಗೆ ನುಗ್ಗುತ್ತಿದೆ.
‘ಪ್ರತಿ ಮಳೆಗಾಲದಲ್ಲೂ ಬ್ಯಾಲಹುಣ್ಸಿ, ನಂದಿಗಾವಿ ಗ್ರಾಮಗಳ 100 ಎಕರೆ ಕೃಷಿ ಭೂಮಿ ಮುಳುಗಡೆಯಾಗಿ ಬೆಳೆ ಹಾನಿ ಸಂಭವಿಸುತ್ತದೆ’ ಎಂದು ರೈತರು ದೂರಿದ್ದಾರೆ.
’20-30 ವರ್ಷಗಳಿಂದ ಈ ಭಾಗದ ರೈತರು ಸಮಸ್ಯೆ ಎದುರಿಸುತ್ತಿದ್ದಾರೆ. 15-20 ದಿನಗಳ ಕಾಲ ಜಮೀನುಗಳು ಮುಳುಗಡೆಯಾಗುವುದರಿಂದ ಬೆಳೆಗಳು ಕೊಳೆತು ಹೋಗುತ್ತವೆ. ಬೆಳೆಹಾನಿಯಿಂದ ಪ್ರತಿವರ್ಷ ನಷ್ಟ ಉಂಟಾಗುತ್ತಿದೆ’ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.
‘ಹೊಲಗದ್ದೆಗಳಿಗೆ ನುಗ್ಗುವ ಮಳೆಯ ನೀರನ್ನು ಕಾಲುವೆ ತೋಡಿ, ಸುಲಭವಾಗಿ ತುಂಗಭದ್ರಾ ನದಿಯ ಕಡೆ ತಿರುಗಿಸುವ ಸಾಧ್ಯತೆ ಇದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಇತ್ತ ಗಮನಹರಿಸುತ್ತಿಲ್ಲ. ರಾಜಕಾರಣಿಗಳು ಚುನಾವಣೆಗಳಲ್ಲಿ ಭರವಸೆ ನೀಡಿ ನಂತರ ಮರೆತು ಬಿಡುತ್ತಾರೆ’ ಎಂದು ರೈತರಾದ ಬಾರಿಕರ ಪ್ರಕಾಶ, ಅಂಗಡಿ ಗೌರೀಶ, ಹರವಿ ಪ್ರಶಾಂತ, ಬಡ್ಡಿ ಗುಡ್ಡಪ್ಪ ಅಸಮಾಧಾನ ವ್ಯಕ್ತಪಡಿಸಿದರು.
ಬ್ಯಾಲಹುಣ್ಸಿಯ ಹರಿಜನ ಕಾಲೊನಿಯಲ್ಲಿ ನರೇಗಾ ಯೋಜನೆಯ ಚರಂಡಿ ಕಾಮಗಾರಿ ಅಪೂರ್ಣವಾಗಿದೆ. ಜಮೀನುಗಳಿಗೆ ಮಳೆಯ ನೀರು ನುಗ್ಗುವ ಸಮಸ್ಯೆ ಪರಿಹರಿಸಲು ಶಾಶ್ವತ ಕಾಮಗಾರಿ ಕೈಗೊಳ್ಳಬೇಕಿದ್ದು, ನಂದಿಗಾವಿ-ಬ್ಯಾಲಹುಣ್ಸಿ ರಸ್ತೆಯಲ್ಲಿ ಕಿರು ಸೇತುವೆ ನಿರ್ಮಿಸಿ ಕಾಲುವೆ ಮೂಲಕ ನೀರನ್ನು ನದಿಗೆ ಕಳಿಸಬೇಕು ಎಂದು ಗ್ರಾಮದ ಯುವ ಮುಖಂಡ ಬಾರಿಕರ ಲಕ್ಷ್ಮಣ ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.