ADVERTISEMENT

ಭಾರಿ ಮಳೆಗೆ ಜನಜೀವನ ಅಸ್ತವ್ಯಸ್ತ

ಉಪವಿಭಾಗಾಧಿಕಾರಿ ಕಚೇರಿಗೆ ನುಗ್ಗಿದ ನೀರು; ಪ್ರಮುಖ ರಸ್ತೆಗಳು ಜಲಾವೃತ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2019, 14:35 IST
Last Updated 16 ಆಗಸ್ಟ್ 2019, 14:35 IST
ಸುರಿಯುತ್ತಿರುವ ಬಿರುಸಿನ ಮಳೆಯ ನಡುವೆಯೇ ದ್ವಿಚಕ್ರ ವಾಹನ ಸವಾರರು ಶುಕ್ರವಾರ ಸಂಜೆ ಹೊಸಪೇಟೆಯ ಮೇನ್‌ ಬಜಾರ್‌ ರಸ್ತೆ ಮೂಲಕ ನಿರ್ಗಮಿಸಿದರು
ಸುರಿಯುತ್ತಿರುವ ಬಿರುಸಿನ ಮಳೆಯ ನಡುವೆಯೇ ದ್ವಿಚಕ್ರ ವಾಹನ ಸವಾರರು ಶುಕ್ರವಾರ ಸಂಜೆ ಹೊಸಪೇಟೆಯ ಮೇನ್‌ ಬಜಾರ್‌ ರಸ್ತೆ ಮೂಲಕ ನಿರ್ಗಮಿಸಿದರು   

ಹೊಸಪೇಟೆ: ಶುಕ್ರವಾರ ಸಂಜೆ ನಗರದಲ್ಲಿ ಸುರಿದ ಬಿರುಸಿನ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿತು.

ಸಂಜೆ ನಾಲ್ಕು ಗಂಟೆಗೆ ಆರಂಭವಾದ ಮಳೆ ರಾತ್ರಿ ಎಂಟು ಗಂಟೆಯ ವರೆಗೆ ಎಡೆಬಿಡದೆ ಸುರಿಯಿತು. ಭಾರಿ ವರ್ಷಧಾರೆಯಿಂದಾಗಿ ನಗರದ ಪ್ರಮುಖ ರಸ್ತೆಗಳು ಜಲಾವೃತಗೊಂಡಿದ್ದವು.

ನಗರಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖವಾದ ಕಾಲೇಜು ರಸ್ತೆಯಲ್ಲಿ ಮೊಳಕಾಲುದ್ದ ವರೆಗೆ ನೀರು ಸಂಗ್ರಹಗೊಂಡಿತು. ಚರಂಡಿಗಳು ತುಂಬಿ ಹರಿದ ಪರಿಣಾಮ ಅದರ ಹೊಲಸು ರಸ್ತೆ ಮೇಲೆ ಹರಿದಾಡಿತ್ತು. ಇದರಿಂದಾಗಿ ಇಡೀ ಪರಿಸರದಲ್ಲಿ ದುರ್ಗಂಧ ಹರಡಿತ್ತು. ರಸ್ತೆಯ ಎರಡೂ ಬದಿಯಲ್ಲಿ ನಿಲ್ಲಿಸಿದ್ದ ದ್ವಿಚಕ್ರ ವಾಹನಗಳ ಅರ್ಧಭಾಗ ನೀರಿನಲ್ಲಿ ಮುಳುಗಡೆಯಾಗಿತ್ತು. ಭಾರಿ ನೀರು ರಸ್ತೆ ಮೇಲೆ ನಿಂತಿದ್ದರಿಂದ ಬೈಕ್‌ ಸವಾರರು ಸಂಚರಿಸುವ ಸಾಹಸಕ್ಕೆ ಕೈಹಾಕದೆ ಸಮೀಪದ ಮಳಿಗೆಗಳ ಅಡಿಯಲ್ಲಿ ಮಳೆ ನಿಲ್ಲುವವರೆಗೆ ಆಶ್ರಯ ಪಡೆದುಕೊಂಡು ನಿಂತಿದ್ದರು.

ADVERTISEMENT

ಚಪ್ಪರದಹಳ್ಳಿ, ಬಸವೇಶ್ವರ ಬಡಾವಣೆ, ಚಿತ್ತವಾಡ್ಗಿ, ಪಟೇಲ್‌ ನಗರ, ಶಿರಸಿನಕಲ್ಲು ಬಡಾವಣೆ, ಬಳ್ಳಾರಿ ರಸ್ತೆ, ಹಂಪಿ ರಸ್ತೆಯಲ್ಲೂ ಭಾರಿ ನೀರು ನಿಂತಿತ್ತು. ಇದರ ಪರಿಣಾಮ ಸಾರಿಗೆ ಸಂಸ್ಥೆಗೆ ಸೇರಿದ ಬಸ್ಸುಗಳನ್ನು ಹೊರತುಪಡಿಸಿದರೆ ಇತರೆ ವಾಹನಗಳು ಸಂಚರಿಸಲಿಲ್ಲ.

ಸಂಡೂರು ರಸ್ತೆಯಲ್ಲಿರುವ ಉಪವಿಭಾಗಾಧಿಕಾರಿ ಕಚೇರಿಯೊಳಗೆ ಅಪಾರ ಪ್ರಮಾಣದ ನೀರು ನುಗ್ಗಿತ್ತು. ಅಲ್ಲಿನ ಸಿಬ್ಬಂದಿ ಹರಸಾಹಸ ಮಾಡಿ, ನೀರು ಹೊರಕ್ಕೆ ದಬ್ಬಿದರು. ಕಡತಗಳು ನೀರಿನಲ್ಲಿ ನೆನಯದಂತೆ ಎಚ್ಚರಿಕೆ ವಹಿಸಿ, ಎತ್ತರದ ಜಾಗಕ್ಕೆ ಸ್ಥಳಾಂತರಿಸಿದರು. ಕಚೇರಿಯ ಆವರಣ ಸಣ್ಣ ಕೆರೆಯ ಸ್ವರೂಪ ಪಡೆದುಕೊಂಡಿತ್ತು. ಮಳೆ ನಿಂತ ನಂತರ ಒಟ್ಟಿಗೆ ವಾಹನಗಳು ರಸ್ತೆಗೆ ಇಳಿದಿದ್ದರಿಂದ ಮೇನ್‌ ಬಜಾರ್‌, ಹಂಪಿ ರಸ್ತೆ, ಕಾಲೇಜು ರಸ್ತೆಯಲ್ಲಿ ಸಂಚಾರ ಸಂಪೂರ್ಣ ಅಸ್ತವ್ಯಸ್ತಗೊಂಡಿತ್ತು.

ತಾಲ್ಲೂಕಿನ ಹಂಪಿ, ಕಮಲಾಪುರ, ಸೀತಾರಾಮ ತಾಂಡಾ, ನಲ್ಲಾಪುರ, ಚಿನ್ನಾಪುರ, ಬೈಲುವದ್ದಿಗೇರಿ, ರಾಮಸಾಗರ, ಧರ್ಮಸಾಗರ, ವಡ್ಡರಹಳ್ಳಿ, ಹೊಸೂರು, ಮಲಪನಗುಡಿ, ಹೊಸಮಲಪನಗುಡಿ, ನಾಗೇನಹಳ್ಳಿ, ಬಸವನದುರ್ಗ, ಪಾಪಿನಾಯಕನಹಳ್ಳಿ, ಕಡ್ಡಿರಾಂಪುರ ಸೇರಿದಂತೆ ಹಲವೆಡೆ ಉತ್ತಮ ಮಳೆಯಾಗಿರುವುದು ವರದಿಯಾಗಿದೆ.

ತುಂಗಭದ್ರಾ ನದಿಯಲ್ಲಿ ಇತ್ತೀಚೆಗೆ ಬಂದ ಪ್ರವಾಹದಿಂದ ತಾಲ್ಲೂಕಿನ ಹೊಸೂರು, ಹಂಪಿ, ಬುಕ್ಕಸಾಗರ, ವೆಂಕಟಾಪುರ, ಇಪ್ಪಿತ್ತೇರಿ ಮಾಗಾಣಿಯ ಜನ ಈಗಷ್ಟೇ ಚೇತರಿಸಿಕೊಳ್ಳುತ್ತಿದ್ದರು. ಭಾರಿ ಮಳೆಗೆ ಎಲ್ಲವೂ ಅಸ್ತವ್ಯಸ್ತಗೊಂಡಿದೆ. ಕೆಲವೆಡೆ ಗದ್ದೆಗಳಿಗೆ ನೀರು ನುಗ್ಗಿದೆ.

ಮಳೆಗಾಲ ಆರಂಭವಾಗಿ ಎರಡು ತಿಂಗಳಾದರೂ ಒಮ್ಮೆಯೂ ಉತ್ತಮ ಮಳೆಯಾಗಿರಲಿಲ್ಲ. ಸತತ ಅರ್ಧಗಂಟೆಗೂ ಹೆಚ್ಚು ಕಾಲ ವರ್ಷಧಾರೆಯಾಗಿರಲಿಲ್ಲ. ಆದರೆ, ಶುಕ್ರವಾರ ಸತತ ನಾಲ್ಕು ಗಂಟೆ ಮಳೆ ಸುರಿದಿದ್ದರಿಂದ ಸ್ಥಳೀಯರಿಗೆ ಮಳೆಗಾಲದ ಅನುಭವವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.