ಬಳ್ಳಾರಿ: ‘ಬಿಸಿಲು ಜಾಸ್ತಿ ಇರುವುದರಿಂದ ಬಳ್ಳಾರಿಯಲ್ಲಿ ಹೆಲ್ಮೆಟ್ ಧರಿಸುವ ಅಗತ್ಯವಿಲ್ಲ ಎಂಬ ಭಾವನೆ ಜನರಲ್ಲಿದೆ. ಆದರೆ, ಹೆಲ್ಮೆಟ್ ಧರಿಸುವುದರಿಂದ ಯಾವುದೇ ವಿನಾಯಿತಿ ಇಲ್ಲ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಶೋಭಾರಾಣಿ ವಿ.ಜೆ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಓವರ್‌ಸ್ಪೀಡ್, ಡ್ರಂಕ್ ಆ್ಯಂಡ್ ಡ್ರೈವ್ ಕಾರಣಗಳಿಂದ ಜಿಲ್ಲೆಯಲ್ಲಿ ಅಪಘಾತಗಳಾಗುತ್ತಿವೆ. ಆದ್ದರಿಂದ ಹೆಲ್ಮೆಟ್ ವಿತರಿಸುವ, ಅದರ ಮಹತ್ವದ ಕುರಿತು ಜಾಗೃತಿ ಮೂಡಿಸಲಾಗುತ್ತಿದೆ. ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು ಎಂದು ನಾಗರಿಕರು, ಪೊಲೀಸರು, ಕಾಲೇಜುಗಳಿಗೆ ನಾವು ಸುತ್ತೋಲೆ ಹೊರಡಿಸಿದ್ದೇವೆ. ಇದು ಕ್ರಮೇಣ ಪೂರ್ಣಪ್ರಮಾಣದಲ್ಲಿ ಜಾರಿಯಾಗಲಿದೆ’ ಎಂದು ತಿಳಿಸಿದರು.
‘ಅಪಘಾತ ಮತ್ತು ಸಾವು ನೋವುಗಳನ್ನು ತಡೆಯಲು ನಾವು ಕಾರ್ಯಪ್ರವೃತ್ತರಾಗಿದ್ದೇವೆ. ರಸ್ತೆ ಸಮಸ್ಯೆಗಳನ್ನು ಪರಿಹರಿಸುತ್ತಿದ್ದೇವೆ. ಸಂಡೂರಿನಲ್ಲಿ ಈ ಬಗ್ಗೆ ಅಧ್ಯಯನ ನಡೆಯುತ್ತಿದೆ. ಅದರ ವರದಿ ಆಧರಿಸಿ ರಸ್ತೆ ಸಮಸ್ಯೆಗಳನ್ನು ಸರಿಪಡಿಸುತ್ತೇವೆ. ಲಾರಿಗಳಿಗೆ ‘ಸ್ಪೀಡ್ ಗವರ್ನರ್’ಗಳನ್ನು ಅಳಡಿಸುತ್ತಿದ್ದೇವೆ. ಬಸ್‌ಗಳಲ್ಲೂ ವೇಗ ನಿಯಂತ್ರಕಗಳನ್ನು ಹಾಕುತ್ತಿದ್ದೇವೆ. ಈಗ ದ್ವಿಚಕ್ರ ವಾಹನ ಸವಾರರಿಗೆ ಹೆಲ್ಮೆಟ್ ಕಡ್ಡಾಯಗೊಳಿಸುತ್ತಿದ್ದೇವೆ. ಇತ್ತೀಚಿನ ಅಪಘಾತಗಳಲ್ಲಿ ತಲೆಗೆ ಪೆಟ್ಟು ಬಿದ್ದು ಮೃತಪಟ್ಟವರೇ ಅಧಿಕವಾಗಿದ್ದಾರೆ. ಆದ್ದರಿಂದಲೇ ಕಡ್ಡಾಯ ಹೆಲ್ಮೆಟ್ ಜಾರಿಗೆ ತರುತ್ತಿದ್ದೇವೆ’ ಎಂದು ಹೇಳಿದರು.
‘ಜಿಲ್ಲೆಯಲ್ಲಿ ರಸ್ತೆ ಸುರಕ್ಷತೆ ನಿಯಮ ಉಲ್ಲಂಘಿಸಿದ ಪ್ರಕರಣಗಳನ್ನು ನಿರ್ದಾಕ್ಷಿಣ್ಯವಾಗಿ ದಾಖಲಿಸಲಾಗುತ್ತಿದೆ. ನಮ್ಮ ಕಟ್ಟು ನಿಟ್ಟಿನ ಕ್ರಮಗಳಿಂದಾಗಿಯೇ ದುರಂತಗಳು ಈ ವರ್ಷ ಕಡಿಮೆಯಾಗಿವೆ. ಈ ವರ್ಷವೂ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುತ್ತೇವೆ. ಪೊಲೀಸರು, ಪತ್ರಕರ್ತರೂ ಹೆಲ್ಮೆಟ್ ಕಡ್ಡಾಯವಾಗಿ ಧರಿಸಬೇಕು. ಹೆಲ್ಮೆಟ್ ಧರಿಸದೇ ಇದ್ದರೆ ₹500 ದಂಡ ಹಾಕಲಾಗುವುದು’ ಎಂದೂ ಅವರು ಎಚ್ಚರಿಕೆ ನೀಡಿದರು.
ಹೆಲ್ಮೆಟ್ ಧರಿಸದೇ ಇರುವುದಕ್ಕೆ ಜಿಲ್ಲೆಯಲ್ಲಿ 2024ರಲ್ಲಿ 6,557 ಪ್ರಕರಣಗಳು ದಾಖಲಾಗಿದ್ದವು. 2025ರಲ್ಲಿ 2655 ಪ್ರಕರಣಗಳು ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ಒದಗಿಸಿರುವ ಅಂಕಿ ಅಂಶಗಳಿಂದ ಗೊತ್ತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.