ADVERTISEMENT

ತೆಕ್ಕಲಕೋಟೆ | ದಶಕವಾದರೂ ಬಗೆಹರಿಯದ ಸಮಸ್ಯೆ

ಹೆರಕಲ್ಲು: ಸಿರುಗುಪ್ಪ- ಕಂಪ್ಲಿ ರಾಜ್ಯ ಹೆದ್ದಾರಿ | ಖಾಸಗಿ ಜಮೀನಿನಲ್ಲಿ ರಸ್ತೆ, ಗುಂಡಿಗಳಲ್ಲಿ ನಿತ್ಯ ಸಂಚಾರ

​ಪ್ರಜಾವಾಣಿ ವಾರ್ತೆ
Published 8 ಸೆಪ್ಟೆಂಬರ್ 2025, 3:09 IST
Last Updated 8 ಸೆಪ್ಟೆಂಬರ್ 2025, 3:09 IST
ತೆಕ್ಕಲಕೋಟೆ ಸಮೀಪದ ಹೆರಕಲ್ಲು ಗ್ರಾಮದ ಬಳಿಯ ಸಿರುಗುಪ್ಪ- ಕಂಪ್ಲಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ
ತೆಕ್ಕಲಕೋಟೆ ಸಮೀಪದ ಹೆರಕಲ್ಲು ಗ್ರಾಮದ ಬಳಿಯ ಸಿರುಗುಪ್ಪ- ಕಂಪ್ಲಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ   

ತೆಕ್ಕಲಕೋಟೆ : ಇಲ್ಲಿನ ಹೆರಕಲ್ಲು ಗ್ರಾಮದಲ್ಲಿ ಹಾದುಹೋಗಿರುವ ಸಿರುಗುಪ್ಪ- ಕಂಪ್ಲಿ ರಾಜ್ಯ ಹೆದ್ದಾರಿಯಲ್ಲಿ ಮೊಣಕಾಲುದ್ದದ ಗುಂಡಿಗಳು ಬಿದ್ದಿದ್ದು, ಈ ರಸ್ತೆಯಲ್ಲಿ ಪ್ರಯಾಣಿಸುವವರು ನಿತ್ಯವೂ ನರಕ ಅನುಭವಿಸುವಂತಾಗಿದೆ.

ಹೈದರಾಬಾದಿಗೆ ನಿತ್ಯ ಸಂಚರಿಸುವ ಖಾಸಗಿ ಬಸ್ ಇತ್ತೀಚೆಗೆ ರಸ್ತೆಯ ಗುಂಡಿಯಲ್ಲಿ ಸಿಕ್ಕಿಕೊಂಡು ಪ್ರಯಾಣಿಕರು ರಾತ್ರಿಯೆಲ್ಲಾ ಪರದಾಡುವಂತಾಯಿತು. ಅಲ್ಲದೆ ಈ ಮಾರ್ಗದ ಮೂಲಕ ಹೋಗುವ ಲಾರಿ, ಟ್ರಾಕ್ಟರ್ ಮುಂತಾದ ವಾಹನಗಳು ಒಂದಿಲ್ಲೊಂದು ಗುಂಡಿಯಲ್ಲಿ ಸಿಕ್ಕಿಹಾಕಿಕೊಳ್ಳುತ್ತಿವೆ. ನಾಗರಿಕರು ಅಧಿಕಾರಿಗಳನ್ನು, ರಾಜಕಾರಣಿಗಳನ್ನು ಶಪಿಸುವಂತಾಗಿದೆ.

ನಿಟ್ಟೂರು- ಹೆರಕಲ್ಲು ಮಾರ್ಗ ಮಧ್ಯದಲ್ಲಿ ಹಲವು ದ್ವಿಚಕ್ರವಾಹನ ಸವಾರರು ಗುಂಡಿಗಳನ್ನು ತಪ್ಪಿಸಲು ಹೋಗಿ ಆಳವಾದ ಗುಂಡಿಗಳಿಗೆ ಬಿದ್ದು ಗಾಯ ಮಾಡಿಕೊಂಡಿದ್ದಾರೆ. ಗುಂಡಿಗಳ ಮಧ್ಯೆ ರಸ್ತೆ ಹುಡುಕುವುದೇ ಸಾಹಸ ಎಂಬಂತಾಗಿದೆ.

ADVERTISEMENT

ರಸ್ತೆಗೆ ಸರ್ಕಾರಿ ಭೂಮಿ ಇದ್ದರೂ ನಿರ್ಲಕ್ಷ್ಯ ಏಕೆ: ಲೋಕೋಪಯೋಗಿ ಇಲಾಖೆಗೆ ಸೇರಿದ ಸರ್ವೆ ನಂ.300/ಎನಲ್ಲಿ 3-03  ಎಕರೆ, 319ನಲ್ಲಿ 4-15 ಎಕರೆ ಜಮೀನು ಇದೆ. ಆದರೆ ರಸ್ತೆ ಕಾಮಗಾರಿ ಸರ್ಕಾರಿ ಜಮೀನಿನಲ್ಲಿ ನಡೆಯದೆ ಖಾಸಗಿ ಜಮೀನಿನಲ್ಲಿ ಹಾದು ಹೋಗಿದೆ. ಆದ್ದರಿಂದ ಹೆರಕಲ್ಲು ರಾಮಣ್ಣ ಅವರು ತಮಗೆ ಇತ್ತ ಭೂಮಿಯೂ ಇಲ್ಲ ಅತ್ತ ಬೆಳೆಯೂ ಇಲ್ಲ ಎಂಬಂತಾಗಿದೆ ಎಂದು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ. ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಿರುವ ಅವರು, ರಸ್ತೆ ಹಾದುಹೋಗಿರುವ ಭೂಮಿಗೆ ಬದಲಾಗಿ, ರಸ್ತೆ ಪಕ್ಕದಲ್ಲೇ ಇರುವ ಸರ್ಕಾರಕ್ಕೆ ಸೇರಿದ ಭೂಮಿ, ಇಲ್ಲವೆ ಹಣಕಾಸಿನ ಪರಿಹಾರ ನೀಡಲು ಆಗ್ರಹಿಸಿದ್ದಾರೆ.

ತೆಕ್ಕಲಕೋಟೆ ಸಮೀಪದ ಹೆರಕಲ್ಲು ಗ್ರಾಮದ ಬಳಿಯ ಸಿರುಗುಪ್ಪ- ಕಂಪ್ಲಿ ರಾಜ್ಯ ಹೆದ್ದಾರಿ ಸಂಪೂರ್ಣ ಹದಗೆಟ್ಟಿದೆ
ಮಲ್ಲಿಕಾರ್ಜುನ ಕೊಟಗಿ
ಯು ವೆಂಕೋಬ
ಯು.ರಾಮಣ್ಣ

ಇವರು ಏನಂತಾರೆ? 

ನಮ್ಮ ಪಟ್ಟಾ ಜಮೀನಿನಲ್ಲಿ ರಸ್ತೆ ಹಾದು ಹೋಗಿದೆ. ಈ ಬಗ್ಗೆ ಲೋಕೋಪಯೋಗಿ ಇಲಾಖೆ ಹಾಗೂ ಜಿಲ್ಲಾಮಟ್ಟದ ಅಧಿಕಾರಿಗಳಿಗೆ ಮನವಿ ಸಲ್ಲಿಸಿ ಸಾಕಾಗಿ ಹೋಗಿದೆ. ಇದರಿಂದ ಅನಿವಾರ್ಯವಾಗಿ ನ್ಯಾಯಾಲಯದ ಮೊರೆ ಹೋಗಿದ್ದೇವೆ

– ಜಮೀನಿನ ಮಾಲೀಕ ಯು.ರಾಮಣ್ಣ ಹೆರಕಲ್ಲು

ಖಾಸಗಿ ಜಮೀನಿನಲ್ಲಿ ಹಾದು ಹೋಗಿರುವ ರಸ್ತೆಯನ್ನು ಸರ್ಕಾರಿ ಜಮೀನಿನಲ್ಲಿ ನಿರ್ಮಾಣ ಮಾಡಿದಲ್ಲಿ ಶಾಲಾ ಕಾಲೇಜಿಗೆ ತೆರಳುವ ಮಕ್ಕಳೂ ಸೇರಿದಂತೆ ಗ್ರಾಮಸ್ಥರಿಗೆ ಅನುಕೂಲವಾಗಲಿದೆ'

– ಯು ವೆಂಕೋಬ ಅಧ್ಯಕ್ಷ ಸಿರುಗುಪ್ಪ ತಾಲ್ಲೂಕು ವಕೀಲರ ಸಂಘ

ಧಿಕಾರಿಗಳು ಮತ್ತು ಶಾಸಕರು ಈ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಪ್ರಯತ್ನಿಸಬೇಕು. ನಿತ್ಯ ಈ ರಸ್ತೆಯಲ್ಲಿ ಸಂಚರಿಸುವುದು ಎಂದರೆ ನರಕ ದರ್ಶನವಾಗುತ್ತದೆ

– ಮಲ್ಲಿಕಾರ್ಜುನ ಕೊಟಗಿ ಕಾರ್ಯದರ್ಶಿ ಸಾಮ್ರಾಟ್ ಹಿರಿಯ ಪ್ರಾಥಮಿಕ ಶಾಲೆ ನಿಟ್ಟೂರು

ಸರ್ಕಾರಿ ಜಮೀನಿನಲ್ಲಿ ರಸ್ತೆ ನಿರ್ಮಾಣಕ್ಕೆ ₹2 ಕೋಟಿ ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಅನುಮೋದನೆಗೊಂಡ ನಂತರ ರಸ್ತೆ ಕಾಮಗಾರಿ ಕೈಗೊಳ್ಳಲಾಗುವುದು

– ಚೆನ್ನನಗೌಡ ಎಇಇ ಲೋಕೋಪಯೋಗಿ ಇಲಾಖೆ ಸಿರುಗುಪ್ಪ

ಏನಿದು ವಿವಾದ?

ಸಂಡೂರು-ಸಿರುಗುಪ್ಪ ರಾಜ್ಯ ಹೆದ್ದಾರಿ-49 (ಕಂಪ್ಲಿ-ಸಿರುಗುಪ್ಪ) ರಸ್ತೆಯು ಹೆರಕಲ್ಲು ಗ್ರಾಮದ ಮರಿಸ್ವಾಮಿ ತಾತ ದೇವಸ್ಥಾನದಿಂದ ಸರ್ವೆ ನಂ. 146/ಎ 146/ಬಿ ಮತ್ತು 143/ಬಿ ಭೂಮಿಯಲ್ಲಿ ಹಾದುಹೋಗಿದೆ. ಈ ಭೂಮಿಯ ಮಾಲೀಕರಾದ ಯು. ಹನುಮಂತಪ್ಪ ಮತ್ತು ಯು. ರಾಮಣ್ಣ ಇವರು ಸಿರುಗುಪ್ಪ ಹೆಚ್ಚುವರಿ ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಿದ್ದಾರೆ. ಇದರಿಂದಾಗಿ ಸುಮಾರು 1ಕಿಮೀ ಕಾಮಗಾರಿ ನಡೆಯದೆ ರಸ್ತೆ ಸಂಪೂರ್ಣ ತಗ್ಗು ದಿಣ್ಣೆಗಳಿಂದ ತುಂಬಿ ಹೋಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.