ಕರ್ನಾಟಕ ಹೈಕೋರ್ಟ್
ಕುಡತಿನಿ (ಸಂಡೂರು): ಅವಧಿ ಮುಗಿದ ಪಟ್ಟಣ ಪಂಚಾಯಿತಿಗೆ ರಾಜ್ಯ ಸರ್ಕಾರವು ಆಡಳಿತಾಧಿಕಾರಿಯ ನೇಮಕಾತಿಗೆ ಕೈಗೊಂಡಿದ್ದ ಕ್ರಮಕ್ಕೆ ಧಾರವಾಡ ಉಚ್ಚನ್ಯಾಯಾಲಯವು ಈಚೆಗೆ ಮಧ್ಯಂತರ ತಡೆಯಾಜ್ಞೆ ನೀಡಿದೆ.
ಪಟ್ಟಣ ಪಂಚಾಯಿತಿಯ ಅಧ್ಯಕ್ಷೆ ಸುಜಾತಾ ಸತ್ಯಪ್ಪ, ಉಪಾಧ್ಯಕ್ಷ ಕನ್ನಿಕೇರಿ ಪಂಪಾಪತಿ ಸೇರಿದಂತೆ ಪಂಚಾಯಿತಿಯ ಎಲ್ಲ ಸದಸ್ಯರು ಪಂಚಾಯಿತಿಯ ಎರಡನೇ ಅವಧಿಯಲ್ಲಿ ಸರ್ಕಾರವು ಮೀಸಲು ನಿಗದಿಪಡಿಸುವಾಗ 16 ತಿಂಗಳು ಆಡಳಿತ ನಡೆಸುವ ಅವಕಾಶ ದೊರೆಯದ ಕಾರಣವನ್ನು ಪ್ರಶ್ನಿಸಿ ಕೋರ್ಟ್ ಮೇಟ್ಟಿಲೇರಿದ್ದರಿಂದ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
‘ಕುಡತಿನಿ ಪಟ್ಟಣ ಪಂಚಾಯಿತಿಯ ಆಡಳಿತದ ಮೊದಲನೆ ಅವಧಿಯನ್ನು ಮುಗಿಸಲಾಗಿದ್ದು ಎರಡನೇ ಅವಧಿಯಲ್ಲಿ ಸರ್ಕಾರವು ಮೀಸಲಾತಿ ನಿಗದಿಪಡಿಸುವ ನೆಪದಿಂದ ನಮ್ಮ ಅಧಿಕಾರ ಅವಧಿಯನ್ನು ಸುಮಾರು 16 ತಿಂಗಳ ಕಾಲ ಆಡಳಿತ ಅಧಿಕಾರಿಯನ್ನು ನೇಮಿಸಿ ಸಮಯವನ್ನು ವ್ಯರ್ಥಮಾಡಿದ್ದು, ನಮ್ಮ ಪಟ್ಟಣದ ಸಮಗ್ರ ಅಭಿವೃದ್ಧಿಗೆ ತೊಂದರೆಯಾಗಿದ್ದರಿಂದ ಎಲ್ಲರು ನ್ಯಾಯಾಲಯದ ಮೊರೆ ಹೋಗಲಾಗಿತ್ತು. ಪ್ರಸ್ತುತ ನ್ಯಾಯಾಲಯ ತಡೆಯಾಜ್ಞೆ ನೀಡಿದ್ದು ನಮಗೆ ಸಂತಸವಾಗಿದ್ದು, ಉಳಿದ ಅವಧಿಯಲ್ಲಿ ಜನರ ಸೇವೆ ಮಾಡಲು ಬಹಳ ಅನುಕೂಲವಾಗಿದೆ’ ಎಂದು ಕುಡತಿನಿ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿಯ ಅಧ್ಯಕ್ಷ ವಿ.ರಾಜಶೇಖರ್ ಹೇಳಿದರು.
ಪಟ್ಟಣ ಪಂಚಾಯಿತಿಯ ಉಪಾಧ್ಯಕ್ಷ, ಸ್ಥಾಯಿ ಸಮಿತಿ ಅಧ್ಯಕ್ಷ, ಕೆಲ ಸದಸ್ಯರು ಮುಖ್ಯಾಧಿಕಾರಿಗೆ ನ್ಯಾಯಾಲಯದ ತಡೆಯಾಜ್ಞೆಯ ಪ್ರತಿ ನೀಡಿದರು. ಕೋರ್ಟ್ ಆದೇಶದಂತೆ ಜನಪ್ರತಿನಿಧಿಗಳು ಪಂಚಾಯಿತಿಯ ಆಡಳಿತ ನಡೆಸಲು ಅವಕಾಶ ಕಲ್ಪಿಸುವಂತೆ ಮನವಿ ಮಾಡಿದರು.