ADVERTISEMENT

ಗ್ರಾಮೀಣ ಭಾಗದ ಹೈಟೆಕ್ ಕಾಲೇಜು

​ಪ್ರಜಾವಾಣಿ ವಾರ್ತೆ
Published 17 ಆಗಸ್ಟ್ 2021, 2:06 IST
Last Updated 17 ಆಗಸ್ಟ್ 2021, 2:06 IST
ಅಭಿಷೇಕ ಎನ್.ಹಡಪದ
ಅಭಿಷೇಕ ಎನ್.ಹಡಪದ   

ಕಮಲಾಪುರ: ಗ್ರಾಮೀಣ ಭಾಗದ ಸರ್ಕಾರಿ ಪದವಿ ಪೂರ್ವ ಕಾಲೇಜಿಗೆ ಅತ್ಯಾಧುನಿಕ ಪ್ರಯೋಗಾಲಯ ಸೌಕರ್ಯಗಳನ್ನು ಕಲ್ಪಿಸಿ ಹೈಟೆಕ್ ಸ್ಪರ್ಶ ನೀಡಲಾಗಿದೆ.

ಪ್ರತಿಭಾನ್ವಿತ ಹಾಗೂಬಡ ವಿದ್ಯಾರ್ಥಿಗಳು ನಗರ ಪ್ರದೇಶಗಳಿಗೆ ತೆರಳುವುದನ್ನು ಹಾಗೂ ಆರ್ಥಿಕ ಸಂಕಷ್ಟ ತಪ್ಪಿಸಲು ಇಲ್ಲಿನ ಸೌಕರ್ಯಗಳು ನೆರವಾಗುತ್ತಿವೆ. ಕೆಲ ವರ್ಷಗಳಿಂದ ವಿದ್ಯಾರ್ಥಿಗಳ ದಾಖಲಾತಿ ಕ್ಷೀಣಿಸುತ್ತಾ ಸಾಗಿತ್ತು. ಈಚೆಗೆ ನಿಯೋಜನೆಗೊಂಡ ಪ್ರಾಚಾರ್ಯರಾದ ಶಶಿಕಲಾ ಮಾಲಿ ಪಾಟೀಲ ಅವರ ಮುತುವರ್ಜಿ ಹಾಗೂ ಶಾಸಕ ಬಸವರಾಜ ಮತ್ತಿಮೂಡು ಅವರ ಧನ ಸಹಾಯದಿಂದ ಕಾಲೇಜಿಗೆ ಗುಣಮಟ್ಟದ ಪ್ರಯೋಗಾಲಯ ಸಜ್ಜುಗೊಂಡಿದೆ.

‘ಪಟ್ಟಣ ಸೇರಿದಂತೆ ತಾಲ್ಲೂಕಿನ ನೂರಾರು ವಿದ್ಯಾರ್ಥಿಗಳು ನಗರದ ಖಾಸಗಿ ಕಾಲೇಜು ಸೇರಲು ಮುಂದಾಗುತ್ತಿದ್ದರು. ಇದಕ್ಕಾಗಿ ಲಕ್ಷಾಂತರ ರೂಪಾಯಿ ವ್ಯಯಿಸುತ್ತಿದ್ದರು. ಅನುಕೂಲಸ್ಥರಿಗೆ ಮಾತ್ರ ಇದು ಸಾಧ್ಯವಾಗುತ್ತಿತ್ತು. ಅನಿವಾರ್ಯವಾಗಿ ಬಡ ವಿದ್ಯಾರ್ಥಿಗಳು ಮಾನವಿಕ ವಿಷಯಗಳನ್ನು ಆಯ್ದುಕೊಳ್ಳುತ್ತಿದ್ದರು. ಪ್ರತಿಭಾನ್ವಿತ ಬಡ ವಿದ್ಯಾರ್ಥಿಗಳು ಈಗ ವಿಜ್ಞಾನ ವಿಭಾಗ ಸೇರ್ಪಡೆಯಾಗಲು ಆಸಕ್ತಿ ತೋರುತ್ತಿದ್ದಾರೆ. ಅವರ ಕಲಿಕೆಗೆ ಅಗತ್ಯವಾದ ವಾತಾವರಣ, ಗುಣಮಟ್ಟದ ಬೋಧನೆ, ಸಿಬ್ಬಂದಿ ಹಾಗೂ ಪ್ರಯೋಗಾಲಯದಂತಹ ಸೌಲಭ್ಯಗಳು ಕಲ್ಪಿಸಲಾಗುತ್ತಿದೆ’ ಎಂದು ಶಶಿಕಲಾ ಮಾಲಿ ಪಾಟೀಲ’ ಅವರು ತಿಳಿಸಿದರು.

ADVERTISEMENT

‘ಜೀವಶಾಸ್ತ್ರ, ಭೌತಶಾಸ್ತ್ರ, ರಸಾಯನ ಶಾಸ್ತ್ರ ವಿಷಯಗಳಿಗೆ ಪ್ರತ್ಯೇಕ ಕೋಣೆಗಳಿವೆ. ಪ್ರಯೋಗಗಳಿಗೆ ಅಗತ್ಯವಾದ ಪರಿಕರ ಮತ್ತು ನುರಿತ ಉಪನ್ಯಾಸಕರಿದ್ದಾರೆ. ಜತೆಗೆ ಹೆಚ್ಚುವರಿಯಾಗಿ ಕಂಪ್ಯೂಟರ್ ಲ್ಯಾಬ್ ತೆರೆಯಲಾಗಿದೆ. ಕೆಲವೇ ದಿನಗಳಲ್ಲಿ ಹೆಚ್ಚುವರಿ ಬೋಧಕರೂ ನೇಮಕವಾಗುವರು’ ಎಂದರು.

ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗೆ ಸಂಬಂಧಿಸಿದ ಪರಿಕರಗಳನ್ನು ಒದಗಿಸಲಾಗುವುದು. ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ ಬೆಳೆಸಲು ಎನ್‍ಎಸ್‍ಎಸ್ ಘಟಕವಿದೆ ಎಂದು ‘ಪ್ರಜಾವಾಣಿ’ಗೆ ತಿಳಿಸಿದರು.

ಗುಣಮಟ್ಟದ ಶಿಕ್ಷಣ ಕಲ್ಪಿಸಲು ಉದ್ದೇಶದಿಂದ ಸರ್ಕಾರಿ ಕಾಲೇಜು ಸುಧಾರಣೆಗೊಳಿಸಲಾಗಿದೆ. ಪ್ರತಿ ತಿಂಗಳು ಪರೀಕ್ಷೆ ನಡೆಸಿ ಕಲಿಕೆ ಗುಣಮಟ್ಟ ವೃದ್ಧಿಸಲಾಗುವುದು. ಹಿಂದುಳಿದ ಮಕ್ಕಳಗೆ ವಿಶೇಷ ಕೌಶಲಗಳ ಮೂಲಕ ಕಲಿಕೆಗೆ ಪ್ರೋತ್ಸಾಹಿಸಲಾಗುವುದು’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.