ತೆಕ್ಕಲಕೋಟೆ: ಸಮೀಪದ ಉಪ್ಪಾರ ಹೊಸಳ್ಳಿ ಗ್ರಾಮದ ವಿಶಿಷ್ಟ ಹೋಳಿ ಆಚರಣೆ ಸುತ್ತಲಿನ ಗ್ರಾಮಸ್ಥರನ್ನು ಆಕರ್ಷಿಸುತ್ತಿದೆ.
ಯುಗಾದಿ ಪಾಡ್ಯಮಿಯಂದು ಗ್ರಾಮದ ಆಂಜನೇಯಸ್ವಾಮಿ ದೇವಸ್ಥಾನದ ರಥೋತ್ಸವ ಜರುಗುತ್ತದೆ. ಮರುದಿನ ಗ್ರಾಮದಲ್ಲಿ ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವುದು ಇಲ್ಲಿನ ವಾಡಿಕೆ.
ಊರ ಗೌಡರು ಹಾಗೂ ಶಾನುಭೋಗರ ಮನೆಯಿಂದ ಕಳಸ ಹಾಗೂ ಬಣ್ಣಗಳನ್ನು ಮೆರವಣಿಗೆ ಮೂಲಕ ದೇವಸ್ಥಾನಕ್ಕೆ ತಂದು ಪೂಜೆ ಮಾಡಿ ನಂತರ ಈಶ್ವರ ದೇವಸ್ಥಾನ ಹಾಗೂ ಆಂಜನೇಯ ದೇವಸ್ಥಾನದ ಮುಂಭಾಗದಲ್ಲಿರುವ ಪುಷ್ಕರಣಿಗೆ ರಂಗುರಂಗಿನ ಬಣ್ಣ ಹಾಕಿ ಹೋಲಿ ಹಬ್ಬಕ್ಕೆ ಚಾಲನೆ ನೀಡಲಾಗುತ್ತದೆ.
ಸುತ್ತಲೂ ನೆರೆದ ಜನ ಹೊಂಡಕ್ಕೆ ಜಿಗಿದು ಪರಸ್ಪರ ಬಣ್ಣ ಎರಚಿ ಸಂಭ್ರಮಿಸುವುದು ಶತಮಾನಗಳಿಂದಲೂ ಬಂದ ಆಚರಣೆಯಾಗಿದೆ ಎನ್ನುತ್ತಾರೆ ಗಾಮಸ್ಥರು.
ಈ ಕುರಿತು ಶಾನುಭೋಗ ಗುರುರಾಜ ಸ್ವಾಮಿ ಮಾತನಾಡಿ', ಬಹು ಹಿಂದಿನಿಂದಲೂ ಈ ವಿಶಿಷ್ಟ ಪದ್ದತಿ ಜಾರಿಯಲ್ಲಿದ್ದು, ಮುಂಚೆ ಪುಷ್ಕರಣಿಗೆ ಗುಲಾಬಿ ಹಾಗೂ ಬೇರೆ ಬೇರೆ ಹೂಗಳನ್ನು ಹಾಕಿ ಬಣ್ಣ ತಯಾರಿಸಿ ಆಡಲಾಗುತ್ತಿತ್ತು. ಆದರೆ ಈಗ ಕೃತಕ ಬಣ್ಣಗಳನ್ನು ಅನಿವಾರ್ಯವಾಗಿ ಬಳಸುತ್ತಿದ್ದೇವೆ' ಎಂದರು.
ಹೊಂಡಕ್ಕೆ ಧುಮುಕುವ ಯುವಕರು ಬಿಂದಿಗೆಗಳಲ್ಲಿ ಬಣ್ಣದ ನೀರು ತುಂಬಿಕೊಂಡು ಮನೆಗೆ ಒಯ್ಯುತ್ತಾರೆ. ಮನೆಯಲ್ಲಿರುವ ಹೆಂಗಸರು, ಮಕ್ಕಳು ವಯಸ್ಸಾದವರು ಬಣ್ಣವನ್ನು ಮೈಮೇಲೆ ಪ್ರೊಕ್ಷಿಸಿಕೊಂಡು ನಂತರ ಸ್ನಾನ ಮಾಡಿ ಗ್ರಾಮಕ್ಕೆ ಗ್ರಾಮವೇ ಹಬ್ಬದ ಸಂಭ್ರಮದಲ್ಲಿ ಪಾಲ್ಗೊಳ್ಳುವುದು ವಿಶೇಷ ಎನ್ನುತ್ತಾರೆ ಗ್ರಾಮಸ್ಥರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.