ಬಳ್ಳಾರಿ: ಹೆಚ್ಚಿನ ಬಾಡಿಗೆ ನೀಡುವ ಆಮಿಷವೊಡ್ಡಿ ಜನರಿಂದ ಬಾಡಿಗೆಗೆಂದು ಕಾರು ಪಡೆದು ಅಕ್ರಮವಾಗಿ ಮಾರಾಟ ಮಾಡಿದ್ದ ಪ್ರಕರಣದಲ್ಲಿ ಬಳ್ಳಾರಿ ಜಿಲ್ಲಾ ಪೊಲೀಸರು ಒಟ್ಟು 44 ವಾಹನಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ವಾಹನಗಳನ್ನು ನಗರದ ಡಿ.ಆರ್ ಮೈದಾನದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ಡಾ. ಶೋಭಾರಣಿ ವಿ.ಜೆ ಅವರು ವಾರಸುದಾರರಿಗೆ ಸೋಮವಾರ ಹಸ್ತಾಂತರ ಮಾಡಿದರು.
ಪ್ರಮುಖ ಆರೋಪಿ ಜಾಹಿದ್ ಪಾಷಾನಿಗೆ ಕಾರುಗಳನ್ನು ಬಾಡಿಗೆಗೆ ನೀಡಿ ಮೋಸ ಹೋಗಿರುವುದಾಗಿ ನಗರದ ಬ್ರೂಸ್‌ಪೇಟೆ, ಗಾಂಧಿನಗರ ಸೇರಿದಂತೆ ನಾಲ್ಕು ಠಾಣೆಗಳಲ್ಲಿ ಹಲವರಿಂದ ದೂರುಗಳು ಬಂದಿದ್ದವು. ಒಟ್ಟು 103 ಕಾರುಗಳನ್ನು ಜಾಹಿದ್ ಪಾಷ ಹಲವರಿಂದ ಬಾಡಿಗೆಗೆಂದು ಪಡೆದು, ಅವುಗಳನ್ನು ರಾಯಚೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ಮಾರಾಟ ಮಾಡಿದ್ದ. ಕೆಲವು ವಾಹನಗಳನ್ನು ಗಿರವಿ ಇಟ್ಟಿದ್ದ ಎನ್ನಲಾಗಿದೆ.
‘ಈ ಪ್ರಕರಣದ ತನಿಖೆ ಕೈಗೆತ್ತಿಕೊಂಡಿದ್ದ ಪೊಲೀಸರು ಈವರೆಗೆ 44 ವಾಹನಗಳನ್ನು ಪತ್ತೆ ಮಾಡಿದ್ದಾರೆ. ಜಿಪಿಎಸ್ ಆಧಾರದಲ್ಲಿಯೂ ವಾಹನಗಳನ್ನು ಪತ್ತೆ ಮಾಡಲಾಗಿದೆ’ ಎಸ್‌ಪಿ ಡಾ. ಶೋಭಾರಾಣಿ ವಿ.ಜೆ ತಿಳಿಸಿದ್ದಾರೆ.
‘ಜಾಹಿದ್ ಪಾಷನಿಂದ ಯಾರೇ ಕಾರು ಖರೀದಿ ಮಾಡಿದ್ದರೂ ಅವರು ಅದನ್ನು ಕೂಡಲೇ ಹಿಂದಿರುಗಿಸಬೇಕು. ಆತನಿಂದ ಕಾರು ಖರೀದಿಸಿದವರೂ ಆತನ ವಿರುದ್ಧ ಪ್ರಕರಣ ದಾಖಲಿಸಬಹುದು. ಶೀಘ್ರದಲ್ಲಿಯೇ ಎಲ್ಲ ಕಾರುಗಳನ್ನು ಪತ್ತೆ ಮಾಡಲಾಗುತ್ತದೆ. ಜಾಹಿದ್ ಪಾಷ ಕುರಿತ ಮಾಹಿತಿ ಸಿಕ್ಕಿದ್ದು, ಕೆಲವೇ ದಿನಗಳಲ್ಲಿ ಆತನನ್ನೂ ಬಂಧಿಸುತ್ತೇವೆ’ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೊದೆಗಳಲ್ಲಿ ಅಡಗಿಸಿಟ್ಟಿದ್ದರು
ಜಾಹಿದ್ ಪಾಷನಿಂದ ಕಾರು ಖರೀದಿಸಿದ್ದ ಕೆಲ ಮಂದಿ ಈ ಕುರಿತು ಪ್ರಕರಣ ದಾಖಲಾಗಿರುವುದು ತಿಳಿಯುತ್ತಲೇ ಕಾರು ಹಿಂದಿರುಗಿಸಲು ಹಿಂದೇಟು ಹಾಕಿದ್ದರು. ಕಾರುಗಳನ್ನು ಹೊಲಗಳಲ್ಲಿ ಪೊದೆಗಳಲ್ಲಿ ಬಚ್ಚಿಟ್ಟಿದ್ದರು ಎನ್ನಲಾಗಿದೆ. ಕೊನೆಗೆ ಪೊಲೀಸರ ನೆರವಿನೊಂದಿಗೆ ಕಾರುಗಳು ನಮ್ಮ ಕೈಸೇರಿದವು ಎಂದು ಕಾರು ಮಾಲೀಕರು ಮಾಹಿತಿ ನೀಡಿದ್ದಾರೆ. ರಾಯಚೂರು ಮತ್ತು ಸುತ್ತಮುತ್ತಲ ಜಿಲ್ಲೆಗಳಲ್ಲಿ ವಾಹನಗಳನ್ನು ಮಾರಾಟ ಮಾಡಲಾಗಿತ್ತು ಎಂದೂ ಎಸ್‌ಪಿ ಶೋಭಾರಾಣಿ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.