ಆಸ್ತಿ ನೋಂದಣಿ
ಬಳ್ಳಾರಿ: ನಿಯಮಬಾಹಿರ, ಅಕ್ರಮ ನೋಂದಣಿ ಪ್ರಕರಣಗಳನ್ನು ರದ್ದುಪಡಿಸುವ ‘ಕರ್ನಾಟಕ ನೋಂದಣಿ ತಿದ್ದುಪಡಿ ಕಾಯ್ದೆ–2023’ಕ್ಕೆ ಸೆಪ್ಟೆಂಬರ್ ಒಳಗೆ ಕರಡು ನಿಯಮಗಳನ್ನು ಪ್ರಕಟಿಸುವುದಾಗಿ ಸರ್ಕಾರ ಹೇಳಿದ್ದು, ಬಳ್ಳಾರಿ ಜಿಲ್ಲೆಯ ಮಟ್ಟಿಗೆ ಆಶಾಭಾವ ಮೂಡಿಸಿದೆ.
ಜಿಲ್ಲೆಯಲ್ಲಿ ವ್ಯಾಪಕವಾಗಿ ಬೇರೂರಿರುವ ಆಸ್ತಿ ಅಕ್ರಮ ನೋಂದಣಿ ದಂಧೆಗೆ ಕಡಿವಾಣ ಬೀಳುವ ಸಾಧ್ಯತೆಗಳು ಗೋಚರಿಸಿವೆ.
ನಕಲಿ ವ್ಯಕ್ತಿಗಳು, ನಕಲಿ ದಾಖಲೆಗಳನ್ನು ಸೃಷ್ಟಿ ಮಾಡಿ ಯಾರದ್ದೋ ಭೂಮಿಯನ್ನು ಯಾರಿಗೋ ಮಾರಾಟ ಮಾಡುವ ದಂಧೆ ಬಳ್ಳಾರಿಯಲ್ಲಿ ಅತ್ಯಂತ ಆಳವಾಗಿ ಬೇರುಬಿಟ್ಟಿದೆ. ಇಂಥದ್ದೇ ಒಂದು ಪ್ರಕರಣದಲ್ಲಿ 2024ರ ಫೆಬ್ರುವರಿಯಲ್ಲಿ ಸಬ್ ರಿಜಿಸ್ಟ್ರಾರ್ ವಿರುದ್ಧವೇ ಎಫ್‌ಐಆರ್ ದಾಖಲಾಗಿತ್ತು. ಅಷ್ಟೇ ಅಲ್ಲದೆ, ಜಿಲ್ಲೆಯ ಪ್ರತಿಷ್ಠಿತ ಕುಟುಂಬಗಳು, ಉದ್ಯಮಿಗಳೂ ಹೀಗೆ ಭೂಮಿಯನ್ನು ಅಕ್ರಮವಾಗಿ ಪರಾಭಾರೆ ಮಾಡಿರುವ ಆರೋಪಗಳಿದ್ದು, ಎಫ್‌ಐಆರ್‌ಗಳೂ ದಾಖಲಾಗಿವೆ.
ಇಂಥ ಪ್ರಕರಣಗಳಲ್ಲಿ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಿಸುವ ಕಾನೂನನ್ನು ಜಾರಿಗೆ ತರುತ್ತಿರುವುದಾಗಿ ಕಂದಾಯ ಸಚಿವ ಕೃಷ್ಣಬೈರೇಗೌಡ ವಿಧಾನಮಂಡಲ ಅಧಿವೇಶನದಲ್ಲೇ ತಿಳಿಸಿದ್ದಾರೆ.
‘ಅಧಿಕಾರಿಗಳೇ ಶಾಮೀಲಾಗಿ ಅಕ್ರಮ ನೋಂದಣಿ ಮಾಡಿಕೊಟ್ಟ ಉದಾಹರಣೆಗಳಿವೆ. ಕಾಯ್ದೆ ಜಾರಿಯ ನಂತರ ಅಂತಹ ಲೋಪ ಕಂಡುಬಂದರೆ ಅವರನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು. ಆಸ್ತಿಗಳನ್ನು ನಿಯಮಬಾಹಿರವಾಗಿ ಮಾಡಿದ್ದ ನೋಂದಣಿ ರದ್ದು ಮಾಡಲು ಇದುವರೆಗೂ ಕೋರ್ಟ್ ಮೊರೆ ಹೋಗಬೇಕಿತ್ತು. ಜನರಿಗೆ ಇನ್ನು ಅಂತಹ ಅಲೆದಾಟ ತಪ್ಪಲಿದೆ’ ಎಂದು ಕೃಷ್ಣಬೈರೇಗೌಡ ವಿಧಾನಸಭೆಯಲ್ಲಿ ಭರವಸೆ ನೀಡಿದ್ದಾರೆ.
ಭೂಮಿ ಕಳೆದುಕೊಂಡು ಪರದಾಡಿದ್ದ ಕುಟುಂಬ: ಮೋಕಾ ಠಾಣೆಯ ಬೆಣಕಲ್ಲು ಗ್ರಾಮದಲ್ಲಿ ಅಯ್ಯಮ್ಮ ಎಂಬುವವರ 1 ಎಕರೆ 80 ಸೆಂಟ್ಸ್ ಜಾಗವನ್ನು ನಕಲಿ ವ್ಯಕ್ತಿಗಳು ಮತ್ತು ದಾಖಲೆಗಳನ್ನು ಸೃಷ್ಟಿ ಮಾಡಿ ದುಷ್ಕರ್ಮಿಗಳು ಬೇರೆಯವರ ಹೆಸರಿಗೆ ಪರಾಭಾರೆ ಮಾಡಿದ್ದರು. ಈ ಪ್ರಕರಣದಲ್ಲಿ ಸಬ್ ರಿಜಿಸ್ಟ್ರಾರ್ ಸೇರಿದಂತೆ 8 ಮಂದಿ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಅಯ್ಯಮ್ಮ ಕೋರ್ಟು, ಕಚೇರಿ ಅಲೆಯಬೇಕಾದ ಪರಿಸ್ಥಿತಿ ಎದುರಾಗಿತ್ತು.
ಸದ್ಯ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹೇಳಿರುವ ಕಾಯ್ದೆ ಜಾರಿಗೆ ಬಂದರೆ, ಬಡವರ ಇಂಥ ಅಲೆದಾಟಗಳಿಗೆ ಮುಕ್ತಿ ಸಿಗಲಿದೆ ಎನ್ನುತ್ತಾರೆ ಅಧಿಕಾರಿಗಳು.
ಆಸ್ತಿಗಳ ರಕ್ಷಣೆ ಹೇಗೆ?: ಆಧಾರ್ ಆಧಾರಿತ ನೋಂದಣಿ ಪ್ರಾರಂಭವಾದರೆ, ಅಕ್ರಮ ನೋಂದಣಿ ನಿಲ್ಲಲಿದೆ. ಕಂದಾಯ ಇಲಾಖೆ ಈಗಾಗಲೇ ಈ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ. ನೋಂದಣಿಗೆ ಮುನ್ನ ಕೆವೈಸಿ ಆಧಾರಿತ ಆಧಾರ್ ದೃಢೀಕರಣವನ್ನು ಖಚಿತಪಡಿಸಿಕೊಳ್ಳಲು ಆಧಾರ್ ಸೀಡಿಂಗ್ ಮಾಡಲಾಗುತ್ತಿದೆ. ಈ ಸಂಬಂಧ ಸಚಿವರು ನಿರ್ಧಾರ ಕೈಗೊಳ್ಳವ ಸಾಧ್ಯತೆ ಇದೆ. ಆಸ್ತಿಗಳ ಮೇಲೆ ಒಂದು ಸಣ್ಣ ಮೊತ್ತದ ಸಾಲ ಪಡೆದರೂ ರಕ್ಷಣೆ ಸಾಧ್ಯ. ಸಾಲ ಪಡೆದಿರುವ ಆಸ್ತಿಗಳನ್ನು ಏಕಾಏಕಿ ನೋಂದಣಿ ಮಾಡಿಕೊಳ್ಳಲು ಸಾಧ್ಯವಿಲ್ಲ ಎಂದು ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.