ADVERTISEMENT

ಜಲ ಜೀವನ್ ಮಿಷನ್ ಯೋಜನೆ ಶೀಘ್ರ ಜಾರಿಗೊಳಿಸಿ: ಗಿರಿಜಾ ಶಂಕರ್‌ ಸೂಚನೆ

​ಪ್ರಜಾವಾಣಿ ವಾರ್ತೆ
Published 15 ಜೂನ್ 2025, 15:30 IST
Last Updated 15 ಜೂನ್ 2025, 15:30 IST
ಸಂಡೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಾಮಾನ್ಯ ಸಭೆ ಜರುಗಿತು 
ಸಂಡೂರಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಸಾಮಾನ್ಯ ಸಭೆ ಜರುಗಿತು    

ಸಂಡೂರು: ‘ಕೆಲ ಗ್ರಾಮಗಳಲ್ಲಿ ಗುತ್ತಿಗೆದಾರರು ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಅರ್ಧಕ್ಕೆ ಸ್ಥಗಿತಗೊಳಿಸಿರುವುದು, ಇನ್ನೂ ಕೆಲವು ಕಡೆ ವಿಳಂಬವಾಗಿರುವ ಬಗ್ಗೆ ದೂರುಗಳು ಬಂದಿವೆ. ಗುತ್ತಿಗೆದಾರರು, ಸಂಬಂಧಪಟ್ಟ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಯನ್ನು ಸಮರ್ಪಕವಾಗಿ, ಶೀಘ್ರವಾಗಿ ಜಾರಿಗೊಳಿಸಬೇಕು’ ಎಂದು ಬಳ್ಳಾರಿಯ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಗಿರಿಜಾ ಶಂಕರ್‌ ಸೂಚಿಸಿದರು.

ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ತಾಲ್ಲೂಕು ಮಟ್ಟದ ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಾಮಾನ್ಯ ಸಭೆಯಲ್ಲಿ ಅವರು ಮಾತನಾಡಿದರು.

‘ಗ್ರಾಮೀಣ ಪ್ರದೇಶದ ಎಲ್ಲ ಗ್ರಾಮಗಳಲ್ಲಿ ಮದ್ಯ ಅಕ್ರಮ ಮಾರಾಟವು ಹೆಚ್ಚಾಗಿದೆ. ಅದಿರು ಲಾರಿ ಚಾಲಕರು ಮದ್ಯ ಸೇವನೆ ಮಾಡಿ  ವಾಹನ ಚಾಲನೆ ಮಾಡುವುದರಿಂದ ಪ್ರಸ್ತುತ ದಿನಗಳಲ್ಲಿ ಅಪಘಾತಗಳು ಹೆಚ್ಚಿನ ಪ್ರಮಾಣದಲ್ಲಿ ಸಂಭವಿಸುತ್ತಿವೆ. ಅಬಕಾರಿ ಅಧಿಕಾರಿಗಳು ಮದ್ಯ ಅಕ್ರಮ ಮಾರಾಟವನ್ನು ನಿಯಂತ್ರಿಸಲು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು’ ಎಂದರು.

ADVERTISEMENT

‘ಗ್ರಾಮಗಳಲ್ಲಿ ಜಲ ಜೀವನ್ ಮಿಷನ್ ಯೋಜನೆಯ ಕಾಮಗಾರಿಯ ಪೈಪ್‌ಲೈನ್‍ಗಾಗಿ ರಸ್ತೆಗಳನ್ನು ಅಗೆದು ಗುಂಡಿಗಳನ್ನು ನಿರ್ಮಿಸಿಲಾಗಿದೆ. ಬೈಕ್ ಸೇರಿದಂತೆ ವಿವಿಧ ವಾಹನಗಳ ಸವಾರರು, ಜನರು ನಿತ್ಯ ಸಂಚಾರಕ್ಕಾಗಿ ಪರಿತಪಿಸುವಂತಾಗಿದೆ. ಗ್ರಾಮಗಳಲ್ಲಿನ ಜನರು ಗ್ರಾಮ ಪಂಚಾಯಿತಿಯ ವಿರುದ್ಧ ದೂರುತ್ತಿದ್ದಾರೆ. ಗುತ್ತಿಗೆದಾರರು, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಅಧಿಕಾರಿಗಳು ಈ ಕಾಮಗಾರಿಯನ್ನು ತ್ವರಿತವಾಗಿ ಮುಗಿಸಿ ರಸ್ತೆಯಲ್ಲಿನ ಗುಂಡಿಗಳನ್ನು ಮುಚ್ಚಬೇಕು’ ಎಂದು ಚೋರುನೂರು ಗ್ರಾಮ ಪಂಚಾಯಿತಿಯ ಪಿಡಿಒ ಕರಿಬಸಪ್ಪ ಒತ್ತಾಯಿಸಿದರು.

ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಾಹಕ ಅಧಿಕಾರಿ ಮಡಗಿನ ಬಸಪ್ಪ ಮಾತನಾಡಿ, ‘ಪೈಪ್‍ಲೈನ್‍ಗಾಗಿ ಅಗೆದ ರಸ್ತೆಗಳಲ್ಲಿನ ಗುಂಡಿಗಳನ್ನು ಗುತ್ತಿಗೆದಾರರು ಶೀಘ್ರವಾಗಿ ಮುಚ್ಚಬೇಕು. ಜನರ ಸಂಚಾರಕ್ಕಾಗಿ ಅನುಕೂಲ ಮಾಡಿಕೊಡಬೇಕು. ಪಂಚಾಯಿತಿಯವರು ಗ್ರಾಮೀಣ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸಲು ಗ್ರಾಮಗಳಲ್ಲಿ ನೀರಿನ ಘಟಕಗಳನ್ನು ವ್ಯವಸ್ಥಿತವಾಗಿ ನಿರ್ವಹಣೆ ಮಾಡಬೇಕು. ಶಾಲೆಗಳು ಆರಂಭವಾಗಿದ್ದು ವಸತಿ ನಿಲಯಗಳ ಸ್ವಚ್ಛತೆಗೆ ಸೂಕ್ತ ಕ್ರಮ ವಹಿಸಬೇಕು. ಸರ್ಕಾರಿ ಶಾಲಾ ಕಾಲೇಜುಗಳಲ್ಲಿನ ಶೌಚಾಲಯಗಳನ್ನು ಸ್ವಚ್ಛವಾಗಿಟ್ಟುಕೊಳ್ಳಬೇಕು’ ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಸಭೆಯಲ್ಲಿ ಪಾಲ್ಗೊಂಡಿದ್ದರು.

ಉಬ್ಬಳಗಂಡಿ ಗ್ರಾಮ: ಶಾಲಾ ಕೊಠಡಿ ನಿರ್ಮಾಣಕ್ಕೆ ಕ್ರಮ

‘ತಾಲ್ಲೂಕಿನ ಎಲ್ಲ ಶಾಲೆಗಳಲ್ಲಿ ಕುಡಿಯುವ ನೀರು ಶೌಚಾಲಯ ವಿದ್ಯುತ್ ಸೇರದಂತೆ ಇತರ ಸೌಲಭ್ಯಗಳನ್ನು ಸಮರ್ಪಕವಾಗಿ ಒದಗಿಸಲಾಗಿದೆ. ಉಬ್ಬಳಗಂಡಿ ಗ್ರಾಮದಲ್ಲಿ ನೂತನ ಶಾಲೆಯ ಕೊಠಡಿಗಳ ನಿರ್ಮಾಣಕ್ಕಾಗಿ 2 ಎಕರೆ ಜಮೀನುನನ್ನು ಖಾಸಗಿ ವ್ಯಕ್ತಿಗಳು ನೀಡಲು ಮುಂದಾಗಿದ್ದು ಶೀಘ್ರವಾಗಿ ನೂತನ ಆಧುನಿಕ ಮಾದಿರಿಯ ಶಾಲಾ ಕೊಠಡಿಗಳನ್ನು ನಿರ್ಮಿಸಲಾಗುವುದು’ ಎಂದು ಸಂಡೂರಿನ ಕ್ಷೇತ್ರ ಶಿಕ್ಷಣಾಧಿಕಾರಿ ಐ.ಆರ್.ಅಕ್ಕಿ ಸಭೆಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.