ADVERTISEMENT

ಸಿಎಂ ನೇತೃತ್ವದಲ್ಲಿ ಕೈಗಾರಿಕೋದ್ಯಮಗಳಿಗೆ ಸಂಬಂಧಿಸಿದ ಮಹತ್ವದ ಸಭೆ 30ರಂದು

​ಪ್ರಜಾವಾಣಿ ವಾರ್ತೆ
Published 26 ಸೆಪ್ಟೆಂಬರ್ 2025, 5:13 IST
Last Updated 26 ಸೆಪ್ಟೆಂಬರ್ 2025, 5:13 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಬಳ್ಳಾರಿ: ಬಳ್ಳಾರಿ ಜಿಲ್ಲೆಯ ಕಾರ್ಖಾನೆ ಹಾಗೂ ಕೈಗಾರಿಕೋದ್ಯಮಗಳಿಗೆ ಸಂಬಂಧಿಸಿದ ವಿಷಯಗಳ ಕುರಿತಂತೆ ಚರ್ಚಿಸಲು ಸಚಿವರು, ಶಾಸಕರು, ಕೈಗಾರಿಕೋದ್ಯಮಿಗಳ ಸಭೆಯನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಇದೇ 30ರಂದು ಕರೆದಿದ್ದಾರೆ. 

ಈ ಸಭೆಗೆ ಮುಖ್ಯವಾಗಿ ಆರ್ಸೆಲರ್‌ ಮಿತ್ತಲ್‌, ಉತ್ತಮ ಗಾಲ್ವಾ ಮತ್ತು ವಿಜಯನಗರ ಸ್ಟೀಲ್‌ ಲಿಮಿಟೆಡ್‌ನ ಮುಖ್ಯಸ್ಥರನ್ನು ಆಹ್ವಾನಿಸಿರುವುದು ಕುತೂಹಲ ಕೆರಳಿಸಿದೆ.

ಈ ಮೂರು ಸಂಸ್ಥೆಗಳು ಕೈಗಾರಿಕೆ ಆರಂಭಿಸುವುದಾಗಿ ಕುಡುತಿನಿಯಲ್ಲಿ ಭಾರಿ ಪ್ರಮಾಣದ ಭೂಮಿ ಖರೀದಿಸಿವೆ. ಈ ಕಂಪನಿಗಳಿಗೆ ಭೂಮಿ ನೀಡಿರುವ ರೈತರು ತಮಗೆ ಹೆಚ್ಚಿನ ಪರಿಹಾರ ಸಿಗಬೇಕು ಎಂದು ಸಾವಿರ ದಿನಗಳಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಕಂಪನಿಗಳು ಕೈಗಾರಿಕೆಗಳನ್ನು ಸ್ಥಾಪಿಸಬೇಕು ಎಂಬ ಒತ್ತಾಯವೂ ಇದೆ. ಈ ಮಧ್ಯೆ ಮುಖ್ಯಮಂತ್ರಿ ಸಭೆ ಆಯೋಜಿಸಿದ್ದಾರೆ. 

ADVERTISEMENT

ಮುಖ್ಯಮಂತ್ರಿ ಸೂಚನೆಯಂತೆ ಅವರ ವಿಶೇಷ ಕರ್ತವ್ಯಾಧಿಕಾರಿಯು ಬುಧವಾರ ಸೂಚನಾ ಪತ್ರ ಹೊರಡಿಸಿದ್ದು, ಅಗತ್ಯ ಮಾಹಿತಿಯೊಂದಿಗೆ ಬರುವಂತೆ ಪತ್ರದಲ್ಲಿ ತಿಳಿಸಲಾಗಿದೆ.  

ಸಭೆಗೆ ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ, ವಸತಿ, ವಕ್ಸ್ ಹಾಗೂ ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಿಗೆ ಸಭೆಯ ಕುರಿತು ತಿಳಿಸುವಂತೆ ಅವರ ಆಪ್ತ ಕಾರ್ಯದರ್ಶಿಗಳಿಗೆ ತಿಳಿಸಲಾಗಿದೆ. 

ಜತೆಗೆ, ಸಂಸದ ಇ. ತುಕಾರಾಮ್, ಶಾಸಕ ಬಿ. ನಾಗೇಂದ್ರ, ಜೆ.ಎನ್. ಗಣೇಶ್,  ಅನ್ನಪೂರ್ಣ, ಆರ್ಥಿಕ ಇಲಾಖೆ, ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ, ಕಂದಾಯ ಇಲಾಖೆಯ ಸರ್ಕಾರದ ಪ್ರಧಾನ ಕಾರ್ಯದರ್ಶಿ, ಕೆಐಎಡಿಬಿ ಸಿಇಒ,  ಬಳ್ಳಾರಿ ಜಿಲ್ಲಾಧಿಕಾರಿಗಳನ್ನು ಸಭೆಗೆ ಕರೆಯಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.