
ಬಳ್ಳಾರಿ: ಪ್ರತಿ ವರ್ಷದ ಡಿ. 28 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಸಂಸ್ಥಾಪನಾ ದಿನ. ಆರಂಭದಲ್ಲಿ ರಾಜಕೀಯ ಪಕ್ಷದ ಸ್ವರೂಪ ಇಲ್ಲದಿದ್ದರೂ, ರಾಜಕೀಯ ವ್ಯವಸ್ಥೆಯ ಸುಧಾರಣೆಯ ಉದ್ದೇಶ ಹೊಂದಿದ್ದ ಕಾಂಗ್ರೆಸ್‌ನ ಸಂಸ್ಥಾಪನಾ ದಿನಕ್ಕೂ, ಬಳ್ಳಾರಿಗೂ ನಿಕಟವಾದ ಸಂಪರ್ಕವಿರುವುದು ಬಹುತೇಕರಿಗೆ ಗೊತ್ತಿಲ್ಲ.
ಬ್ರಿಟಿಷ್ ಸರ್ಕಾರದ ಅಧಿಕಾರಿ ಎ.ಒ ಹ್ಯೂಮ್ 1885ರಲ್ಲಿ ಐಎನ್‌ಸಿ ಸ್ಥಾಪಿಸಿದ್ದರು. ಡಿ. 28ರಂದು ಅದರ ಮೊದಲ ಸಭೆ ಬಾಂಬೆಯ ಗೋಕುಲ್ ದಾಸ್ ತೇಜ್‌ಪಾಲ್ ಸಂಸ್ಕೃತಿ ಕಾಲೇಜಿನಲ್ಲಿ ನಡೆದಿತ್ತು. ಈ ಸಭೆಗೆ ಅಖಂಡ ಭಾರತದ ಒಟ್ಟು 72 ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಅದರಲ್ಲಿ ಬಳ್ಳಾರಿಯ ಇಬ್ಬರು ಸೇರಿದಂತೆ ಕರ್ನಾಟಕದ ಮೂವರು ಇದ್ದರು ಎನ್ನುತ್ತದೆ ಇತಿಹಾಸ.
ಅಂದಿಗೆ, ‘ನ್ಯಾಯವಾದಿ ಕೇಸರಿ’ ಎಂದೇ ಕರೆಸಿಕೊಳ್ಳುತ್ತಿದ್ದ, ವೆಂಕಟರಾವ್ ಕೋಲಾಚಲಂ, ಉದ್ಯಮಿಯಾಗಿದ್ದ ಸಭಾಪತಿ ಮೊದಲಿಯಾರ್, ಬೆಳಗಾವಿಯ ಬಾಬು ಸಾಹೇಬ್ ಭಾಟೆ ಮೊದಲ ಸಭೆಯಲ್ಲಿ ಪಾಲ್ಗೊಂಡಿದ್ದರು ಎಂದು ಹಲವು ಕಡೆ ಉಲ್ಲೇಖವಾಗಿದೆ. ಈ ಮೂವರಲ್ಲಿ ವೆಂಕಟರಾವ್ ಕೋಲಾಚಲಂ ಮತ್ತು ಸಭಾಪತಿ ಮೊದಲಿಯಾರ್ ಬಳ್ಳಾರಿ ಮೂಲದವರು.
‘ಎ.ಒ ಹ್ಯೂಮ್ ಅವರು ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪನೆ ಮಾಡುವ ವೇಳೆ, ಅದರ ಸದಸ್ಯರಾಗಲು ಅರ್ಜಿಗಳನ್ನು ಆಹ್ವಾನಿಸಿದ್ದರು. ಇದರ ಜತೆಗೆ, ತಾವೇ ಒಂದು ಸಮಿತಿ ರಚಿಸಿ ಸಮಾಜದ ಪ್ರಮುಖರನ್ನು ಹುಡುಕಿ ಮೊದಲ ಸಭೆಗೆ ಆಹ್ವಾನಿಸಲು ತೀರ್ಮಾನಿಸಿದ್ದರು. ಆ ಸಂದರ್ಭದಲ್ಲಿ ವೆಂಕಟರಾವ್ ಕೋಲಾಚಲಂ ಕಲ್ಯಾಣ ದುರ್ಗದ ಹಂಗಾಮಿ ತಹಶೀಲ್ದಾರ್ ಆಗಿದ್ದರು. ಇದರ ಜತೆಗೆ, ನ್ಯಾಯವಾದಿಯಾಗಿ ಕೋಲಾಚಲಂ ಮಾಡಿದ್ದ ಕೆಲಸ ತಿಳಿದು ಅವರನ್ನು ಕಾಂಗ್ರೆಸ್ ಮೊದಲ ಸಭೆಗೆ ಪ್ರತಿನಿಧಿಯಾಗಿ ಆಹ್ವಾನಿಸಲಾಗಿತ್ತು. ಒಟ್ಟು ಏಳು ಸಭೆಗಳಲ್ಲಿ ಕೋಲಾಚಲಂ ಭಾಗವಹಿಸಿದ್ದರು. ಅವರು 1903ರಲ್ಲಿ ಭಾರತೀಯ ಸೋಷಿಯಲ್ ಕಾಂಗ್ರೆಸ್‌ನ ಸಭೆಗೆ ಅಧ್ಯಕ್ಷರೂ ಆಗಿದ್ದರು’ ಎಂದು ವೆಂಕಟರಾವ್ ಕೋಲಾಚಲಂ ಅವರ ಮರಿಮೊಮ್ಮಗ ಅನಂತಪ್ರಕಾಶ ಕೋಲಾಚಲಂ ‘ಪ್ರಜಾವಾಣಿ’ಗೆ ತಿಳಿಸಿದರು.
‘1885ರಲ್ಲಿ ನಡೆದ ಮೊದಲ ಕಾಂಗ್ರೆಸ್ ಸಭೆಗೆ ಅಖಂಡ ಭಾರತದ ವಿವಿಧ ಭಾಗದಿಂದ ಬಂದಿದ್ದ ಪ್ರತಿನಿಧಿಗಳಲ್ಲಿ ವೆಂಕಟರಾವ್ ಕೋಲಾಚಲಂ ಅವರು ಅತ್ಯಂತ ಕಿರಿಯ ಸದಸ್ಯರಾಗಿದ್ದರು. ಅವರ ವಯಸ್ಸು ಆಗ 35 ವರ್ಷ ಆಗಿತ್ತು’ ಎಂದು ವೆಂಕಟರಾವ್ ಕೋಲಾಚಲಂ ಅವರ ಐದನೇ ತಲೆಮಾರಿನ ವೆಂಕಟನಾಗ್ ಕೋಲಾಚಲಂ ಹೇಳಿದರು.
ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಮೊದಲ ಸಭೆಯಲ್ಲಿ ದಾದಾ ಬಾಯಿ ನವರೋಜಿ, ಮಹದೇವ ಗೋವಿಂದ ರಾನಡೆ, ಜಿ. ಸುಬ್ರಹ್ಮಣ್ಯ ನಾಯರ್ ಸೇರಿದಂತೆ ಒಟ್ಟು 72 ಪ್ರತಿನಿಧಿಗಳು ಭಾಗವಹಿಸಿದ್ದರು. ದೇಶದಲ್ಲಿ ರಾಜಕೀಯ ಸುಧಾರಣೆ ತರುವುದು, ಜನರು ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವಾಗಿ ಕೆಲಸ ಮಾಡುವುದು, ಜನರ ಸಮಸ್ಯೆಗಳನ್ನು ಸರ್ಕಾರಕ್ಕೆ ತಿಳಿಸಿ ಪರಿಹಾರ ಹುಡುವುದು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಉದ್ದೇಶವಾಗಿತ್ತು. ಇದೇ ವಿಚಾರಗಳೇ ಕಾಂಗ್ರೆಸ್‌ನ ವಾರ್ಷಿಕ ಸಭೆಗಳಲ್ಲಿ ಚರ್ಚೆಯಾಗುತ್ತಿದ್ದವು ಎಂದು ಇತಿಹಾಸ ಹೇಳುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.