ADVERTISEMENT

ಹೊಸಪೇಟೆಯ ವಿವಿಧೆಡೆ ಸಂಭ್ರಮದ ಸ್ವಾತಂತ್ರ್ಯ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 16 ಆಗಸ್ಟ್ 2022, 13:36 IST
Last Updated 16 ಆಗಸ್ಟ್ 2022, 13:36 IST
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರು ಸ್ವಾತಂತ್ರ್ಯ ಹೋರಾಟಗಾರ ಗುಂಡೂರಾವ್‌ ದೇಸಾಯಿ ಅವರನ್ನು ಗೌರವಿಸಿದರು
ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ದ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಕುಲಪತಿ ಪ್ರೊ.ಸ.ಚಿ. ರಮೇಶ ಅವರು ಸ್ವಾತಂತ್ರ್ಯ ಹೋರಾಟಗಾರ ಗುಂಡೂರಾವ್‌ ದೇಸಾಯಿ ಅವರನ್ನು ಗೌರವಿಸಿದರು   

ಹೊಸಪೇಟೆ: ಸ್ವಾತಂತ್ರ್ಯ ದಿನವನ್ನು ನಗರ ಸೇರಿದಂತೆ ವಿವಿಧ ಕಡೆಗಳಲ್ಲಿ ವಿವಿಧ ಸಂಘ ಸಂಸ್ಥೆಗಳು ಸೋಮವಾರ ಆಚರಿಸಿದವು. ಅದರ ವಿವರ ಇಂತಿದೆ.

ಹಂಪಿ ಕನ್ನಡ ವಿಶ್ವವಿದ್ಯಾಲಯ:

ಕುಲಪತಿ ಪ್ರೊ. ಸ.ಚಿ. ರಮೇಶ ಧ್ವಜಾರೋಹಣ ನೆರವೇರಿಸಿ, ಸದೃಢ ದೇಶ ನಿರ್ಮಾಣಕ್ಕೆ ನಾವೆಲ್ಲರೂ ಸದೃಢ ಮನಸ್ಸು ಹೊಂದುವುದು ಅವಶ್ಯಕ. ಸ್ವಾತಂತ್ರ್ಯ ಹೋರಾಟದಲ್ಲಿ ಮಹತ್ವದ ಪಾತ್ರವಹಿಸಿದ ಕಾರ್ಮಿಕ ವರ್ಗ, ಮಹಿಳಾ ವರ್ಗ, ಸಮಾಜವಾದಿ ವರ್ಗದ ದೃಷ್ಟಿಕೋನಗಳ ಬಗ್ಗೆ ಸಂಶೋಧನೆಗಳು ನಡೆಯುವುದು ಅನಿವಾರ್ಯವಾಗಿದೆ ಎಂದರು.

ADVERTISEMENT

ಸ್ವಾತಂತ್ರ್ಯ ಹೋರಾಟಗಾರ ಗುಂಡೂರಾವ್ ದೇಸಾಯಿ ಅವರನ್ನು ಸನ್ಮಾನಿಸಲಾಯಿತು. ಕುಲಸಚಿವ ಎ.ಸುಬ್ಬಣ್ಣ ರೈ, ಉಪಕುಲಸಚಿವ ಎ. ವೆಂಕಟೇಶ, ಅಮೃತ ಮಹೋತ್ಸವ ಸಂಯೋಜನಾಧಿಕಾರಿ ಮೋಹನ್ ರಾವ್ ಪಾಂಚಾಳ, ಚರಿತ್ರೆ ವಿಭಾಗದ ಪ್ರಾಧ್ಯಾಪಕ ಚಿನ್ನಸ್ವಾಮಿ ಸೋಸಲೆ, ಸಂಶೋಧನಾ ವಿದ್ಯಾರ್ಥಿಗಳಾದ ಪುಷ್ಪ, ಮಂಜುನಾಥ್ ಇದ್ದರು.

ಜಿಲ್ಲಾ ಪಂಚಾಯತಿ:

ಕಚೇರಿಯ ಆವರಣದಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಹರ್ಷಲ್ ಭೋಯರ್ ನಾರಾಯಣ ರಾವ್ ಧ್ವಜಾರೋಹಣ ನೆರವೇರಿಸಿದರು. ಉಪಕಾರ್ಯದರ್ಶಿ ತಿಮ್ಮಪ್ಪ, ಯೋಜನಾ ನಿರ್ದೇಶಕ ಅಶೋಕ ತೋಟದ, ಮುಖ್ಯ ಯೋಜನಾಧಿಕಾರಿ ಅನ್ನದಾನ ಸ್ವಾಮಿ ಇದ್ದರು.

ಷಾ ಭವರ್‌ಲಾಲ್ ಬಾಬುಲಾಲ್ ನಾಹರ್ ಕಾಲೇಜು:

ಆಡಳಿತ ಮಂಡಳಿಯ ಅಧ್ಯಕ್ಷ ಕರಿಬಸವರಾಜ ಬಾದಾಮಿ ದ್ವಜಾರೋಹಣ ನೆರವೇರಿಸಿ, ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿದರು. ಪ್ರಾಚಾರ್ಯ ಎನ್.ವಿಶ್ವನಾಥಗೌಡ, ಪ್ರಾಧ್ಯಾಪಕರಾದ ಲಲಿತಾ, ಶಿವನಗೌಡ ಸಾತ್ಮಾರ, ಪವಿತ್ರ, ಸುಮಾ ಇದ್ದರು. ಸ್ಥಳೀಯ ಸೈನಿಕರು ಹಾಗೂ ರೈತರನ್ನು ಸನ್ಮಾನಿಸಲಾಯಿತು.

ಟಿಎಂಎಇಎಸ್ ಶಿಕ್ಷಣ ಸಂಸ್ಥೆ:

ಸಂಸ್ಥೆಯ ಡಿಎವಿ ಪಬ್ಲಿಕ್ ಶಾಲೆ ಹಾಗೂ ಪಿಯು ಕಾಲೇಜಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ಹಮ್ಮಿಕೊಳ್ಳಲಾಗಿತ್ತು. ಸಿಆರ್‌ಪಿಎಫ್ ನಿವೃತ್ತ ಅಧಿಕಾರಿ ಮೆಹೆಯುದ್ದೀನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಲೇಜಿನ ಪ್ರಾಚಾರ್ಯ ಪ್ರೊ.ವಿ.ಎಸ್. ದಯಾನಂದಕುಮಾರ್, ಆಡಳಿತ ಮಂಡಳಿಯ ಅಧ್ಯಕ್ಷ ಎಂ.ಕೆ.ರವೀಂದ್ರ, ನಿರ್ದೇಶಕ ಟಿ.ಎಂ.ಚಂದ್ರಶೇಖರ, ಶಾಲೆಯ ಪ್ರಭಾರ ಮುಖ್ಯಶಿಕ್ಷಕಿ ರಶೀದಾ ಬಾನು ಇದ್ದರು.

ದೀಪಾಲಿ ಪ್ಯಾರಾ ಮೆಡಿಕಲ್ ಹಾಗೂ ನರ್ಸಿಂಗ್ ಕಾಲೇಜು:

ಜ್ಞಾನ ದೀಪ ಪ್ರಾಥಮಿಕ ಹಾಗೂ ಪ್ರೌಢಶಾಲೆಯ ಸಹಭಾಗಿತ್ವದಲ್ಲಿ ಶಾಲೆಯ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆಡಳಿತ ಮಂಡಳಿ ಅಧ್ಯಕ್ಷ ಡಾ.ವಿಶ್ವನಾಥ ದೀಪಾಲಿ ಧ್ವಜಾರೋಹಣ ನೆರವೇರಿಸಿದರು. ಡಾ.ನೀರಜ, ವೀರಭದ್ರಪ್ಪ, ಪಂಪಾಪತಿ, ಜಾರ್ಜ್, ಭಾಗ್ಯಶ್ರೀ, ದೀಕ್ಷಿತ್, ಶಿವಗಂಗ, ದೀಪಕ್ ಇದ್ದರು.

ಗುಡ್ಡದಲ್ಲಿ ಧ್ವಜಾರೋಹಣ:

ತಾಲ್ಲೂಕಿನ ಗುಂಡ್ಲವದ್ದೀಗೇರಿ ಗ್ರಾಮದ ಚಂದ್ರಗಿರಿ ಬೆಟ್ಟದಲ್ಲಿ ಯುವಕರು ಧ್ವಜಾರೋಹಣ ಕೈಗೊಂಡರು. ಬೆಟ್ಟದಲ್ಲಿ ಕಲ್ಲಿನ ಮೇಲೆ ತ್ರಿವರ್ಣ ಧ್ವಜದ ಬಣ್ಣ ಬಳಿದು ಧ್ವಜಸ್ತಂಭಕ್ಕೆ ಪೂಜೆ ನೆರವೇರಿಸಿ ಧ್ವಜಾರೋಹಣ ಮಾಡಿದರು. ಗ್ರಾಮದ ಯುವಕರಾದ ಗೋಪಾಲ, ಕೃಷ್ಣಮೂರ್ತಿ, ಶ್ರೀಹರಿ, ಪಾಂಡುರಂಗ ಇದ್ದರು.

ಶ್ರೀ ಸಿದ್ದೇಶ್ವರ ಶಾಲೆ:

ತಾಲ್ಲೂಕಿನ ಕಮಲಾಪುರದ ಸಿದ್ದೇಶ್ವರ ಸ್ವಾಮಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಸ್‌ಡಿಎಂಸಿ ಉಪಾಧ್ಯಕ್ಷ ಮಾಳ್ಗಿ ಈಶ್ವರಪ್ಪ ಧ್ವಜಾರೋಹಣ ಮಾಡಿದರು.

ನಂತರ ಸಾಂಸ್ಕೃತಿಕ ಕಾರ್ಯಕ್ರಮ ಜೊತೆಗೆ ವಲಯ ಮಟ್ಟ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಪದಕ ವಿತರಿಸಲಾಯಿತು. ಶಾಲೆಯ ಮುಖ್ಯ ಶಿಕ್ಷಕ ಲಕ್ಕಪ್ಪ ಸಾಕಾರ, ಶಿಕ್ಷಕರಾದ ಮಹಾಂತೇಶ್ ಜಿ.ಆರ್. ಅಲ್ಯಾನಾಯ್ಕ ಇದ್ದರು.

ವಾಲ್ಮೀಕಿ ಕಲಾ ಮಹಿಳಾ ಸಂಸ್ಥೆ:

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಸಂಗೀತ ಸಾಂಸ್ಕೃತಿಕ ಸಂಭ್ರಮ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಮಲ್ಲಿಕಾರ್ಜುನ ತುರುವನೂರು ಹಿಂದೂಸ್ತಾನಿ ಗಾಯನ, ಅಂಗಡಿ ವಾಮದೇವ ಅವರು ದಾಸರ ಪದ, ಜಾನಪದ ಗೀತೆ ಮತ್ತು ವಚನಗಾಯನವನ್ನು ಯಲ್ಲಪ್ಪ ಹಾಗೂ ವಸಂತ್ ಕುಮಾರ್ ಎಂ. ಪ್ರಸ್ತುತ ಪಡಿಸಿದರು.
ರೇಣುಕಾ ಭಾವಗೀತೆಗಳನ್ನು ಹಾಡಿದರು. ಕಾವ್ಯಾಬಾಯಿ ದಾಸವಾಣಿ ಗೀತೆ ಮತ್ತು ಕೆ.ಪ್ರಿಯಾ ಕಲಾ ತಂಡದಿಂದ ದೇಶಭಕ್ತಿ ಗಾಯನ ಪ್ರೇಕ್ಷಕರ ಮನತಣಿಸಿತು. ಮಹೇಶ್ ಕುಮಾರ್ ಕೀಬೋರ್ಡ್ ಹಾಗೂ ಹನುಮಂತಪ್ಪ ಕಾರಿಗನೂರು ಮತ್ತು ಸುಮೇದ ತಬಲ ಸಾಥ್ ನೀಡಿದರು.

ಸಂಸ್ಥೆಯ ಅಧ್ಯಕ್ಷೆ ಅನುರಾಧ ವಿ., ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಬಸವರಾಜ ಕೆ., ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಜ್ಯೋತಿ, ರವಿಶಂಕರ್ ದೇವರಮನೆ, ಕೃಷ್ಣ ಕೆ‌., ಅನ್ವರ್ ಬಾಷಾ, ಭಾರತಿ ಪಾಟೀಲ್, ಡಿ.ಬಸಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.