ADVERTISEMENT

ಹೊಸಪೇಟೆ: ಮರಿಯಮ್ಮನಹಳ್ಳಿಯ ಮಹಿಳಾ ಮಣಿ...

ಎಚ್.ಎಸ್.ಶ್ರೀಹರಪ್ರಸಾದ್
Published 7 ಮಾರ್ಚ್ 2021, 19:30 IST
Last Updated 7 ಮಾರ್ಚ್ 2021, 19:30 IST
ಮೀನಾಕ್ಷಿ
ಮೀನಾಕ್ಷಿ   

ಮರಿಯಮ್ಮನಹಳ್ಳಿ (ಹೊಸಪೇಟೆ ತಾಲ್ಲೂಕು): ರಂಗಭೂಮಿ, ಕಲಾವಿದರ ತವರೂರು ಎಂದೇ ಹೆಸರು ಗಳಿಸಿರುವ ಪಟ್ಟಣದಲ್ಲಿ ಪುರುಷರಷ್ಟೇ ಮಹಿಳೆಯರು ಹಿರಿದಾದ ಸಾಧನೆ ಮಾಡಿರುವುದು ವಿಶೇಷ.

ನಾಟಕ, ಕಿರುತೆರೆ, ಸಂಗೀತ, ಶಿಕ್ಷಣ, ರಾಜಕೀಯ ಸೇರಿದಂತೆ ಇತರೆ ರಂಗಗಳಲ್ಲಿ ಮಹಿಳೆಯರು ತಮ್ಮದೇ ಛಾಪು ಮೂಡಿಸಿದ್ದಾರೆ.

ರಂಗಭೂಮಿಗೆ ಮಹಿಳೆಯರು ಬರಲು ಹಿಂದೇಟು ಹಾಕುತ್ತಿದ್ದ ಕಾಲದಲ್ಲಿ ದಿ.ನಿಂಗಮ್ಮ, ದಿ.ಸುವರ್ಣಮ್ಮ, ದಿ.ಹನುಮಂತಮ್ಮ, ದಿ.ಸೋಮಮ್ಮ, ದಿ.ತಳವಾರ ಹನುಮಂತಮ್ಮ, ದಿ.ಯಶೋಧಾ ಅವರು ಪದಾರ್ಪಣೆ ಮಾಡಿದ್ದರು.

ADVERTISEMENT

ನಂತರ ಚಂದ್ರಮ್ಮ, ಅಂಬುಜಾ, ಶ್ಯಾಮಲಾ, ಶಾಂತಮ್ಮ, ಎಸ್.ರೇಣುಕಾ, ಎನ್.ರೇಣುಕಾ, ಎ.ರೇಣುಕಾ, ಶಾರದಾ, ಶ್ಯಾಮಲಾ, ಸರ್ವಮಂಗಳ, ಡಿ.ಹನುಮಕ್ಕ ನಂತರ ಆ ಪರಂಪರೆ ಮುಂದುವರೆಸಿಕೊಂಡು ಬಂದರು.

ರಂಗಭೂಮಿಯಲ್ಲಿ ದೊಡ್ಡ ಹೆಸರು ಮಾಡಿರುವ ಕೆ. ನಾಗರತ್ನಮ್ಮ ಅವರು ವಿಶಿಷ್ಟ ನಟನೆಯ ಮೂಲಕ ಎಲ್ಲರ ಮನಗೆದ್ದವರು. ಮಹಿಳಾ ವೃತ್ತಿರಂಗ ಕಲಾವಿದರ ಸಂಘ ಸ್ಥಾಪಿಸಿ, ಮಹಿಳಾ ಪ್ರಧಾನ ನಾಟಕಗಳಿಗೆ ಹೆಚ್ಚಿನ ಒತ್ತು ಕೊಟ್ಟರು.

ದಿ.ಕಾಳವ್ವ ಜೋಗತಿ ಗರಡಿಯಲ್ಲಿ ಪಳಗಿದ ಮಂಜಮ್ಮ ಜೋಗತಿಯವರು ದೇಶದ ತುಂಬೆಲ್ಲ ಜೋಗತಿ ನೃತ್ಯ ಪರಿಚಯಿಸಿದರು. ಸದ್ಯ ಜಾನಪದ ಅಕಾಡೆಮಿ ಅಧ್ಯಕ್ಷೆಯಾಗಿರುವ ಅವರಿಗೆ ಪದ್ಮಶ್ರೀ ಪುರಸ್ಕಾರದ ಗೌರವ ಸಂದಿದೆ.

ಸದ್ಯ ಪಟ್ಟಣದ ಪ್ರಮುಖ ಹುದ್ದೆಗಳನ್ನು ಮಹಿಳಾ ಮಣಿಗಳೇ ಅಲಂಕರಿಸಿರುವುದು ವಿಶೇಷ.ಬಿ. ಮೀನಾಕ್ಷಿ ಅವರು ಅಪರಾಧ ವಿಭಾಗದ ಪಿಎಸ್‌ಐ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯಾಧಿಕಾರಿಯಾಗಿ ಪರ್ಣಿಕಾ ಪವನ್‌ ರಾಜ್‌, ಬಿ.ಎಂ.ಎಸ್‌. ಕಾಂತಲಾ ಅಧ್ಯಕ್ಷೆಯಾಗಿದ್ದಾರೆ. ನಾಡಕಚೇರಿಯಲ್ಲಿ ಎಂ.ಲಾವಣ್ಯ ಉಪತಹಶೀಲ್ದಾರ್‌ ಆಗಿದ್ದಾರೆ.

‘ಮಹಿಳೆ ಇಂದು ಎಲ್ಲ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾಳೆ. ಅವಳಿಗೆ ಇಷ್ಟವಾದ ಕ್ಷೇತ್ರ ಆಯ್ಕೆ ಮಾಡಿಕೊಂಡು ಪುರುಷರಿಗೆ ಸರಿಸಮಾನವಾಗಿ ಕೆಲಸ ನಿರ್ವಹಿಸುತ್ತಿದ್ದಾಳೆ. ಇದು ಮಹಿಳೆಯರ ಸ್ವಾವಲಂಬನೆಯ ಯುಗ’ ಎನ್ನುತ್ತಾರೆ ಬಿ. ಮೀನಾಕ್ಷಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.