ADVERTISEMENT

ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡುವೆ: ವೈ.ದೇವೇಂದ್ರಪ್ಪ

ಕೆ.ನರಸಿಂಹ ಮೂರ್ತಿ
Published 24 ಮೇ 2019, 13:53 IST
Last Updated 24 ಮೇ 2019, 13:53 IST
ವೈ.ದೇವೇಂದ್ರಪ್ಪ
ವೈ.ದೇವೇಂದ್ರಪ್ಪ   

ಬಳ್ಳಾರಿ: ಚಿಕ್ಕ ಮುನ್ಸೂಚನೆಯನ್ನೂ ನೀಡದೆ ಕಾಂಗ್ರೆಸ್‌ ತೊರೆದು ಬಿಜೆಪಿ ಸೇರಿ ಹಠದಿಂದ ಟಿಕೆಟ್‌ ಪಡೆದವರು ಹರಪನಹಳ್ಳಿಯ ವೈ.ದೇವೇಂದ್ರಪ್ಪ. ಮೊದಲ ಬಾರಿಗೆ ಲೋಕಸಭೆ ಪ್ರವೇಶಿಸುತ್ತಿರುವ ಅವರು, ‘ನನಗಿಂತ ಸಮರ್ಥರು ಯಾರು?’ ಎಂದು ಹೇಳಿಕೊಂಡಿದ್ದ, ಮೈತ್ರಿ ಪಕ್ಷಗಳ ಪ್ರಬಲ ಅಭ್ಯರ್ಥಿ ವಿ.ಎಸ್‌.ಉಗ್ರಪ್ಪ ಅವರಿಗೆ ಸೋಲಿನ ರುಚಿ ಕಾಣಿಸಿ ಮೂರೂ ಪಕ್ಷಗಳ ಮಂದಿಗೆ, ಲಕ್ಷಾಂತರ ಮತದಾರರಿಗೆ ಅಚ್ಚರಿ ತಂದವರು.

ರೈತ ಕುಟುಂಬದ, ದೇಸಿ ಜೀವನಾನುಭವದ ಗಣಿಯಂತಿರುವ ದೇವೇಂದ್ರಪ್ಪ, ಅದೊಂದೇ ತಮ್ಮ ಶಕ್ತಿ ಎಂದು ನಂಬಿದ್ದಾರೆ. ಮಾತಿಗಿಳಿದರೆ ನೀತಿವಾಕ್ಯ, ಪದ್ಯಗಳನ್ನು ನಿರರ್ಗಳವಾಗಿ ಹೇಳುವ ಅವರು ‘ಪ್ರಜಾವಾಣಿ’ಗೆ ನೀಡಿದ ಸಂದರ್ಶನದ ಆರಂಭದಲ್ಲೇ, ‘ಉಸಿರು ನಿಲ್ಲುವ ಮುನ್ನ ಹೆಸರು ನಿಲ್ಲುವ ಕೆಲಸ ಮಾಡುವೆ’ ಎಂದು ತಮ್ಮ ಉದ್ದೇಶ, ಗುರಿಗಳನ್ನು ಸ್ಪಷ್ಟಪಡಿಸಿದರು.

ಸಂದರ್ಶನದ ಪೂರ್ಣಪಾಠ ಇಲ್ಲಿದೆ.

ADVERTISEMENT

* ನಿಮ್ಮ ಗೆಲುವನ್ನು ಹೇಗೆ ವಿಶ್ಲೇಷಿಸುತ್ತೀರಿ?

ಇದು ನನ್ನ ಗೆಲುವಲ್ಲ. ಪಕ್ಷದ ಹಾಗೂ ಮತದಾರರ ಗೆಲುವು. ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಲ್ಲಿ ಉಗ್ರಪ್ಪ ಅವರನ್ನು ಗೆಲ್ಲಿಸಿದ್ದ ಮತದಾರರು ಸೋಲನ್ನೂ ತೋರಿಸಿದ್ದಾರೆ. ತಾಯಂದಿರು ರೊಟ್ಟಿಯನ್ನು ಎರಡೆರಡು ಬಾರಿ ಹೆಂಚಿನ ಮೇಲೆ ಹಾಕಿ ಸುಡುತ್ತಾರೆ. ಈ ಚುನಾವಣೆಯಲ್ಲೂ ಹಾಗೇ ಆಗುತ್ತದೆ ಎಂದು ಅನ್ನಿಸಿತ್ತು. ಮತದಾರರು ಉಗ್ರಪ್ಪ ಅವರ ಗೆಲುವಿನ ರೊಟ್ಟಿಯನ್ನು ತಿರುವಿಹಾಕಿ ನನಗೆ ಕೊಟ್ಟಿದ್ದಾರೆ.

* ಮೋದಿ ಅಲೆಯಿಂದ ಗೆದ್ದೆ ಎಂದಿರಿ. ಗೆಲುವಿನಲ್ಲಿ ನಿಮ್ಮ ಪಾತ್ರ ಏನು?

ನನ್ನ ಪಾತ್ರ ಏನೇನೂ ಇಲ್ಲ. ಬಿಸಿಲಿನಲ್ಲಿ ಎಲ್ಲೆಡೆ ಹೋದೆ, ಇಡೀ ಜಿಲ್ಲೆಯಲ್ಲಿ ನಡೆದಾಡಿ ಜನರಲ್ಲಿ ಮತ ಯಾಚಿಸಿದೆ. ಅವರು ಸ್ವಾಗತಿಸಿದರು. ಅವರೇ ನನ್ನ ದೇವರು. ನನ್ನ ಜೀವ ಇರುವವರೆಗೂ ಸೇವೆ ಸಲ್ಲಿಸಿ ಋಣ ತೀರಿಸುವೆ. ಪಕ್ಷದ ನಾಯಕರು, ಕಾರ್ಯಕರ್ತರು, ನನ್ನ ಕುಟುಂಬದ ಸದಸ್ಯರು, ಗೆಳೆಯರು, ಸಂಬಂಧಿಕರು ಎಲ್ಲ ಎಂಟು ಕ್ಷೇತ್ರಗಳಲ್ಲೂ ನನಗಾಗಿ ಮನೆಮನೆಗೆ ಭೇಟಿ ಕೊಟ್ಟು ಕೆಲಸ ಮಾಡಿದರು.

* ಸಂಸದರಾಗಿ ಬಿ.ಶ್ರೀರಾಮುಲು ಮತ್ತು ವಿ.ಎಸ್‌.ಉಗ್ರಪ್ಪ ಗಳಿಸಿದ್ದ ವರ್ಚಸ್ಸಿಗಿಂತ ನಿಮ್ಮ ವರ್ಚಸ್ಸು ಹೇಗೆ ಭಿನ್ನ?

ನಾನೊಬ್ಬ ರೈತನ ಮಗ, ನನ್ನನ್ನು ಆಯ್ಕೆ ಮಾಡಿರುವ ಕ್ಷೇತ್ರದ ಅಭಿವೃದ್ಧಿಗಾಗಿ ಹಗಲಿರುಳೂ ಶ್ರಮಿಸುವೆ. ಪ್ರಧಾನ ಮಂತ್ರಿ ಕೈಹಿಡಿದು ಹೆಚ್ಚಿನ ಅನುದಾನ ತಂದು ನಾನು ಜನರ ಸಂಸದ ಎಂಬುದನ್ನು ಸಾಬೀತು ಮಾಡುವೆ.

* ಉಗ್ರಪ್ಪ ಆಯ್ಕೆಯಾಗುವವರೆಗೂ ಕ್ಷೇತ್ರದಲ್ಲಿ ಸಂಸದರ ಕಚೇರಿಯೇ ಇರಲಿಲ್ಲ. ಅದಕ್ಕೇ ಏನು ಹೇಳುವಿರಿ?

ಸರ್ಕಾರದ ವೆಚ್ಚದಲ್ಲಿ ಸಂಸದರ ಕಚೇರಿಯನ್ನು ಸ್ಥಾಪಿಸಿದ್ದಕ್ಕೆ ಅವರಿಗೆ ಧನ್ಯವಾದ ಹೇಳುವೆ. ಆದರೆ, ಜನರ ಸೇವೆಗೆ ಸಂಸದರ ಕಚೇರಿ ಇರಲೇಬೇಕೆಂದೇನಿಲ್ಲ. ಕಚೇರಿ, ಬಯಲು, ಮನೆ ಎಲ್ಲಿದ್ದರೂ ಜನರ ಕೆಲಸ ಮಾಡಬಹುದು. ಅಹವಾಲು ಆಲಿಸಲು ಮರದ ನೆರಳು ಸಾಕು. ಕಚೇರಿಯ ಬಾಗಿಲು ಜನರಿಗೆ ಸದಾ ತೆರೆದಿರುತ್ತದೆ.

* ಸಂಸದನಾಗಿ ಕೆರೆ ತುಂಬಿಸುವುದು ಮೊದಲ ಆದ್ಯತೆ ಎಂದಿದ್ದಿರಿ. ನಂತರದ ಆದ್ಯತೆಗಳೇನು?

ತುಂಗಭದ್ರಾ ಜಲಾಶಯದ ಹೂಳು ತೆರವುಗೊಳಿಸುವುದು, ಬೆಳೆಗಳಿಗೆ ನೀರು ಹರಿಸುವುದು, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸುವುದು– ಆದ್ಯತೆಗಳು. ಅದಕ್ಕಾಗಿ ಐದು ವರ್ಷದ ಕ್ರಿಯಾಯೋಜನೆಯನ್ನೂ ತಯಾರಿಸಿ ಹಂತಹಂತವಾಗಿ ಅನುಷ್ಠಾನಗೊಳಿಸುವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.