ಸಾಂಕೇತಿಕ ಚಿತ್ರ
ಬಳ್ಳಾರಿ: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ‘ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ–2025’ ಸಮಾವೇಶ ಅದ್ಧೂರಿಯಾಗಿ ನಡೆಯುತ್ತಿದೆ. ನಮಗೆ ಎಷ್ಟು ಬಂಡವಾಳ ಹರಿದುಬರಬಹುದು, ಎಷ್ಟು ಉದ್ಯೋಗ ಸೃಷ್ಟಿಯಾಗಿರಬಹುದು ಎಂದು ಹಲವು ಜಿಲ್ಲೆಗಳು ನಿರೀಕ್ಷೆ ಕಂಗಳಿಂದ ನೋಡುತ್ತಿವೆ.
ಇಂಥ ಹೊತ್ತಿನಲ್ಲಿ, ಈ ಹಿಂದಿನ ಸಮಾವೇಶದಲ್ಲಿ ಅಖಂಡ ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ಘೋಷಣೆಯಾದ ಒಡಂಬಡಿಕೆಗಳಲ್ಲಿ ಎಷ್ಟು ಕಂಪನಿಗಳು ಹೂಡಿಕೆ ಮಾಡಿವೆ, ಎಷ್ಟು ಉದ್ಯೋಗ ಸೃಷ್ಟಿಯಾಗಿವೆ ಎಂಬ ಪ್ರಶ್ನೆಗಳು ಕಾಡಲಾರಂಭಿಸಿವೆ.
ಕಳೆದ ಬಂಡವಾಳ ಹೂಡಿಕೆ ಸಮಾವೇಶದಲ್ಲಿ ಆದ ಒಡಂಬಡಿಕೆಗಳ ಸ್ಥಿತಿಗತಿ ಕುರಿತು ವಿಧಾನ ಪರಿಷತ್ ಸದಸ್ಯೆ, ಕೊಪ್ಪಳದ ಹೇಮಲತಾ ನಾಯಕ್ ಅವರು ಸರ್ಕಾರದಿಂದ ಮಾಹಿತಿಯನ್ನೂ ಪಡೆದಿದ್ದಾರೆ. ಸರ್ಕಾರ ನೀಡಿರುವ ಮಾಹಿತಿಯು ಸದ್ಯದ ಪ್ರಶ್ನೆಗಳಿಗೆ ಉತ್ತರಗಳಿವೆ.
ಸರ್ಕಾರದ ಉತ್ತರದಲ್ಲೇನಿದೆ?: ಬಳ್ಳಾರಿ ಜಿಲ್ಲೆಯಲ್ಲಿ ‘ಎಪ್ಸಿಲಾನ್’ ಎಂಬ ಕಂಪನಿ ₹9 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿಯೂ, ₹7,500 ಉದ್ಯೋಗ ಸೃಷ್ಟಿ ಮಾಡುವುದಾಗಿಯೂ ಹೇಳಿತ್ತು. ರಿಸೋರ್ಸ್ ಪೆಲೆಟ್ ಕನ್ಸೇಟ್ರೇಟ್ಸ್ ಎಂಬ ಕಂಪನಿ ಬಳ್ಳಾರಿ ಮತ್ತು ಕೊಪ್ಪಳದಲ್ಲಿ ₹1,893 ಕೋಟಿ ಹೂಡಿ, 900 ಉದ್ಯೋಗ ನೀಡುವುದಾಗಿಯೂ ತಿಳಿಸಿತ್ತು.
ಈ ಪೈಕಿ, ‘ಎಪ್ಸಿಲಾನ್’ ಕಂಪನಿ ಸದ್ಯ ₹8,350 ಕೋಟಿ ಹೂಡಿಕೆ ಮಾಡಿ 6,450 ಉದ್ಯೋಗ ನೀಡುವುದಾಗಿ ಸರ್ಕಾರದ 61ನೇ ರಾಜ್ಯ ಉನ್ನತ ಮಟ್ಟದ ಅನುಮೋದನೆ ಸಮಿತಿ (ಎಸ್‌ಎಚ್‌ಎಲ್‌ಸಿಸಿ) ಸಭೆಯಲ್ಲಿ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದುಕೊಂಡಿವೆ. ಇನ್ನು ‘ರಿಸೋರ್ಸ್ ಪೆಲೆಟ್ ಕನ್ಸೆಟ್ರೇಟ್ಸ್’ ಕಂಪನಿಯು ತನ್ನ ಮೂಲ ಒಡಂಬಡಿಕೆಯಂತೆಯೇ ಎಸ್‌ಎಚ್‌ಎಲ್‌ಸಿಸಿಯಲ್ಲಿ ಅನುಮತಿ ಪಡೆದುಕೊಂಡಿದೆ.
ಆದರೆ, ಈ ಕಂಪನಿಗಳು ಇನ್ನೂ ಕಾರ್ಯಾರಂಭ ಮಾಡಿಲ್ಲ. ವಿವಿಧ ಇಲಾಖೆಗಳ ಅನುಮತಿ ಪಡೆಯಲು ಅನುಪಾಲನೆಯಲ್ಲಿ ತೊಡಗಿವೆ ಎಂದು ಗೊತ್ತಾಗಿದೆ.
ಇನ್ನು ಗ್ರೀನ್ ಹೈಡ್ರೋಜೆನ್ ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ‘ರಿನ್ಯೂ ಪವರ್’ ಎಂಬ ಕಂಪನಿ ವಿಜಯನಗರ, ಚಿತ್ರದುರ್ಗ, ಕೊಪ್ಪಳ ಸೇರಿದಂತೆ ಆರು ಜಿಲ್ಲೆಗಳಲ್ಲಿ ₹30 ಸಾವಿರ ಕೋಟಿ ಹೂಡಿ, 30 ಸಾವಿರ ಉದ್ಯೋಗ ಸೃಷ್ಟಿ ಮಾಡುವುದಾಗಿ ಹೇಳಿತ್ತು.
ಈ ಕಂಪನಿ ಸದ್ಯ 20 ಸಾವಿರ ಕೋಟಿ ಹೂಡಿಕೆ ಮಾಡುವುದಾಗಿಯೂ, 2 ಸಾವಿರ ಉದ್ಯೋಗ ಸೃಷ್ಟಿ ಮಾಡುವುದಾಗಿಯೂ ಹೇಳಿ 60ನೇ ಎಸ್‌ಎಚ್‌ಎಲ್‌ಸಿಸಿ ಸಭೆಯಲ್ಲಿ ಅರ್ಜಿ ಸಲ್ಲಿಸಿ ಅನುಮೋದನೆ ಪಡೆದುಕೊಂಡಿದ್ದು, ಕೈಗಾರಿಕೆ ಸ್ಥಾಪನೆಗಾಗಿ ವಿವಿಧ ಇಲಾಖೆಗಳ ಅನುಮತಿ ಪಡೆಯುವ ಪ್ರಕ್ರಿಯೆಯೆಲ್ಲಿದೆ ಎಂದು ಸರ್ಕಾರ ಉತ್ತರ ನೀಡಿದೆ.
‘ಸದ್ಯ ಅನುಮೋದನೆ ಪಡೆದಿರುವ ಕಂಪನಿಗಳು ಕಾರ್ಯಾರಂಭ ಮಾಡಿ, ಉದ್ಯೋಗ ಸೃಷ್ಟಿ ಮಾಡಲು ಇನ್ನೂ ಕೆಲ ವರ್ಷಗಳು ಬೇಕಾಗುತ್ತವೆ’ ಎಂದು ಬೃಹತ್ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಮೂಲಗಳು ತಿಳಿಸಿವೆ.
ಹಿಂದಿನ ಸಮಾವೇಶದ ಒಡಂಬಡಿಕೆಗಳ ಸ್ಥಿತಿಗತಿಯ ಬಗ್ಗೆ ಸರ್ಕಾರ ನೀಡಿದ ಉತ್ತರ ಸಮಾಧಾನ ತಂದಿಲ್ಲ. ಒಪ್ಪಂದಗಳು ಜಾರಿಯಾಗುವಲ್ಲಿ ವಿಳಂಬವಾಗುತ್ತಿರುವ ಬಗ್ಗೆ ಸರ್ಕಾರ ಉತ್ತರವನ್ನೇ ಕೊಟ್ಟಿಲ್ಲ.–ಹೇಮಲತಾ ನಾಯಕ್, ವಿಧಾನಪರಿಷತ್ ಸದಸ್ಯೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.