ADVERTISEMENT

ಕನ್ನಡ‌‌‌‌ ವಿವಿಗೆ‌ ಅನುದಾನದ ಕೊರತೆ; ವಿಷಾದ

​ಪ್ರಜಾವಾಣಿ ವಾರ್ತೆ
Published 12 ಜನವರಿ 2021, 8:06 IST
Last Updated 12 ಜನವರಿ 2021, 8:06 IST
   

ಬಳ್ಳಾರಿ:‌ 'ವಿಶ್ವದಲ್ಲೇ ಅತ್ಯಂತ ವಿಶಿಷ್ಟವಾದ ಕನ್ನಡ ವಿಶ್ವವಿದ್ಯಾಲಯವು ಅನುದಾನದ‌ ಕೊರತೆಯನ್ನು ಎದುರಿಸುತ್ತಿರುವುದು ವಿಷಾದನೀಯ' ಎಂದು ಕವಿ‌ ಬಿ.ಆರ್.ಲಕ್ಷ್ಮಣರಾವ್ ಅಭಿಪ್ರಾಯ ವ್ಯಕ್ತಪಡಿಸಿದರು.

ನಗರದಲ್ಲಿ ಮಂಗಳವಾರ ಕನ್ನಡ ಸಾಹಿತ್ಯ ಪರಿಷತ್ತು ರಾಷ್ಟ್ರೀಯ ಯುವ ದಿನದ ಪ್ರಯುಕ್ತ ಏರ್ಪಡಿಸಿದ್ದ ರಾಜ್ಯಮಟ್ಟದ ಸಂಕ್ರಾಂತಿ ಕವಿಗೋಷ್ಠಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, 'ಭಾಷೆ‌ ಮತ್ತು ಸಂಶೋಧನೆಗೆಂದೇ ಮೀಸಲಾದ‌ ವಿಶ್ವವಿದ್ಯಾಲಯಕ್ಕೆ‌ ಸರ್ಕಾರ ಕೂಡಲೇ ಅನುದಾನ ಬಿಡುಗಡೆ ಮಾಡಬೇಕು' ಎಂದು ಒತ್ತಾಯಿಸಿದರು.

'ತತ್ವಜ್ಞಾನಿ ಸದಾ ಆಕಾಶದ‌ ಕಡೆಗೆ ನೋಡಿದರೆ,‌ ಕವಿಯ ಗಮನ‌ ಸದಾ ಭೂಮಿಯ ಕಡೆಗೆ ಇರುತ್ತದೆ. ಕಾವ್ಯಕ್ಕೆ ಭೂಮಿತಾಯಿಯ ಗುಣವಿರಬೇಕು. ಕವಿಗೆ ಹೆಂಗರುಳಿರಬೇಕು' ಎಂದರು.

ADVERTISEMENT

'ನೆಲಮುಖಿಯಾದ ಕಾವ್ಯ ಜನಪರವಾಗಿರುತ್ತದೆ.‌
ಕವಿಯೂ ಜನಸಾಮಾನ್ಯರ ನಡುವೆ ಇದ್ದುಕೊಂಡೇ ಕಾವ್ಯವನ್ನು ಜನಪ್ರಿಯಗೊಳಿಸಬೇಕು. ಕವಿಗೆ ಸತತ ಅಧ್ಯಯನ ಅಗತ್ಯ' ಎಂದರು. ಇದೇ ಸಂದರ್ಭದಲ್ಲಿ ತಮ್ಮ‌ ಕೆಲವು‌ ಕವಿತೆಗಳನ್ನು‌ ಅವರು ಹಾಡಿದರು.

ವಿಮರ್ಶಕ ಪ್ರೊ. ಮೃತ್ಯುಂಜಯ ರುಮಾಲೆ ಅಧ್ಯಕ್ಷತೆ ವಹಿಸಿದ್ದರು. ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿದ್ದರಾಮ ಕಲ್ಮಠ, ಜನಕಲ್ಯಾಣ ರಕ್ಷಣಾ ವೇದಿಕೆ ಅಧ್ಯಕ್ಷ ಜೆ.ಎಂ. ಸ್ವಾಮಿ, ಮುಖಂಡ ರಮೇಶ್ ‌ಬುಜ್ಜಿ, ಕಾರ್ಮಿಕ ಮುಖಂಡ ಹಂಪೇರು ಹಾಲೇಶ್ವರ ಗೌಡ, ಪತ್ರಕರ್ತ ಎಚ್.ಎಂ. ಮಹೇಂದ್ರ ಕುಮಾರ್ ಉಪಸ್ಥಿತರಿದ್ದರು.
ರಾಜ್ಯದ ವಿವಿಧ ಜಿಲ್ಲೆಗಳ‌ 26 ಕವಿಗಳು‌ ಕವಿತೆ ಓದಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.