
ದೇವದಾರಿ ಗಣಿ ಗುತ್ತಿಗೆ ನಕ್ಷೆ
ಬಳ್ಳಾರಿ: ‘ಕುದುರೆಮುಖ ಕಬ್ಬಿಣ ಅದಿರು ಕಂಪನಿ ಲಿಮಿಟೆಡ್‌ನ (ಕೆಐಒಸಿಎಲ್) ದೇವದಾರಿ ಕಬ್ಬಿಣದ ಅದಿರು ಗಣಿ ಗುತ್ತಿಗೆ ಅವಧಿ ವಿಸ್ತರಿಸಬಾರದು’ ಎಂದು ‘ಜನ ಸಂಗ್ರಾಮ ಪರಿಷತ್’ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.
ಕೇಂದ್ರ ಗಣಿ ಸಚಿವಾಲಯವು ‘ಗಣಿ ಮತ್ತು ಖನಿಜಗಳು (ಅಭಿವೃದ್ಧಿ ಮತ್ತು ನಿಯಂತ್ರಣ) (ಎಂಎಂಡಿಆರ್) ಕಾಯ್ದೆ–1957’ರ ಸೆಕ್ಷನ್ 20(ಎ) ಅಡಿಯಲ್ಲಿನ ತನ್ನ ಪರಮಾಧಿಕಾರ ಬಳಸಿ ಇತ್ತೀಚೆಗೆ ಗಣಿ ಗುತ್ತಿಗೆಯನ್ನು 2 ವರ್ಷಗಳಿಗೆ ವಿಸ್ತರಣೆ ಮಾಡಿ, ಆದೇಶಿಸಿತ್ತು. ಇದನ್ನು ಆಕ್ಷೇಪಿಸಿರುವ ಪರಿಷತ್, ಕೇಂದ್ರದ ಆದೇಶದಂತೆ ರಾಜ್ಯ ಸರ್ಕಾರ ನಡೆದುಕೊಳ್ಳಬಾರದು ಎಂದು ಆಗ್ರಹಿಸಿದೆ.
ರಾಜ್ಯ ಸರ್ಕಾರವು 2024ರ ಡಿಸೆಂಬರ್‌ನಲ್ಲಿ ದೇವದಾರಿ ಗಣಿ ಗುತ್ತಿಗೆಯನ್ನು ಒಂದು ವರ್ಷದ ಅವಧಿಗೆ ಒಂದು ಬಾರಿಗೆ ಮಾತ್ರ ವಿಸ್ತರಣೆ ಮಾಡಿದೆ. ಎಂಎಂಡಿಆರ್ ಕಾಯ್ದೆ ಅಡಿಯಲ್ಲಿ ಇದು ಗರಿಷ್ಠ ರಿಯಾಯಿತಿ. ಈ ರಿಯಾಯಿತಿಯ ಹೊರತಾಗಿಯೂ ಕೆಐಒಸಿಎಲ್ ಗಣಿಗಾರಿಕೆ ಕಾರ್ಯಾಚರಣೆಗಳನ್ನು ಪ್ರಾರಂಭಿಸಲು ವಿಫಲವಾಗಿದೆ. ಹೀಗಾಗಿ, 470.4 ಹೆಕ್ಟೇರ್ ಗಣಿ ಗುತ್ತಿಗೆ ಪ್ರದೇಶವನ್ನು ಮೀಸಲಿಟ್ಟು ರಾಜ್ಯ ಸರ್ಕಾರ 2017ರಲ್ಲಿ ಹೊರಡಿಸಿದ್ದ ಅಧಿಸೂಚನೆಯನ್ನು ರದ್ದುಗೊಳಿಸಬೇಕು ಎಂದು ಪರಿಷತ್ ಒತ್ತಾಯಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.