ಸಂಡೂರು: ಮಾಜಿ ಸಚಿವ ಬಿ. ಶ್ರೀರಾಮುಲು ಅವರ ವಿರುದ್ಧ ಅವಹೇಳನಕರವಾಗಿ, ಕೀಳಾಗಿ ಮಾತನಾಡಿದ ಶಾಸಕ ಜನಾರ್ದನ ರೆಡ್ಡಿ ವಿರುದ್ಧ ಪೊಲೀಸ್ ಇಲಾಖೆಯು ಪ್ರಕರಣ ದಾಖಲಿಸಬೇಕು ಎಂದು ಒತ್ತಾಯಿಸಿ ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ತಾಲ್ಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಿ ಸಂಡೂರು ಠಾಣೆಯ ಪಿಎಸ್‍ಐ ವೀರೇಶ್ ಅವರಿಗೆ ಸೋಮವಾರ ಮನವಿ ಸಲ್ಲಿಸಲಾಯಿತು.
ತಾಲ್ಲೂಕು ಘಟಕದ ಅಧ್ಯಕ್ಷ ವಿ.ಅಂಬ್ರೇಶ್ ಮಾತನಾಡಿ, ‘ಜನಾರ್ದನ ರೆಡ್ಡಿಯವರು ಈಚೆಗೆ ಪತ್ರಿಕಾಗೋಷ್ಠಿ ನಡೆಸಿ ಮಾಧ್ಯಮದ ಮೂಲಕ ನಮ್ಮ ಸಮುದಾಯದ ಮುಖಂಡರಾದ ಬಿ.ಶ್ರೀರಾಮುಲು ಅವರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ರೌಡಿ ಶೀಟರ್ ಪದ ಬಳಕೆ ಮಾಡಿ ಏಕ ವಚನದಲ್ಲಿ ನಿಂದಿಸಿ ಅವಮಾನ ಮಾಡಿದ್ದರಿಂದ ರಾಜ್ಯದ ವಾಲ್ಮೀಕಿ ಸಮುದಾಯಕ್ಕೆ ಬಹಳ ನೋವುಂಟು ಮಾಡಿದ್ದಾರೆ. ರೆಡ್ಡಿಯ ವಿರುದ್ಧ ಜಾತಿ ನಿಂದನೆ, ಮಾನನಷ್ಟ ಮೊಕದ್ದಮೆ ದೂರನ್ನು ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಬೇಕು’ ಎಂದು ಒತ್ತಾಯಿಸಿದ್ದಾರೆ.
ತಾಲ್ಲೂಕು ವಾಲ್ಮೀಕಿ ಸಮುದಾಯದ ಮುಖಂಡರು ಪಟ್ಟಣದ ವಿಜಯ ವೃತ್ತದಲ್ಲಿ ಕೆಲ ಕಾಲ ಪ್ರತಿಭಟನೆ ನಡೆಸಿ, ಜನಾರ್ದನ ರೆಡ್ಡಿ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಸಂಡೂರು ಕೂಡ್ಲಗಿ ಪ್ರಮುಖ ರಸ್ತೆಯ ಮೂಲಕ ಸ್ಥಳೀಯ ಠಾಣೆಯವರೆಗೂ ಪಾದಯಾತ್ರೆ ಮಾಡಿ ಪಿಎಸ್‍ಐ ಅವರಿಗೆ ಮನವಿ ಸಲ್ಲಿಸಿದರು.
ಉಪಾಧ್ಯಕ್ಷ ಎನ್.ಚಂದ್ರು, ಕಾರ್ಯದರ್ಶಿ ಕೆ.ಕುಲಿರಾಜ್, ಖಜಾಂಚಿ ದೇವೇಂದ್ರಪ್ಪ, ಮುಖಂಡರಾದ ಡಿ.ಕ್ರೀಷ್ಣಪ್ಪ, ಕರಿಬಸಪ್ಪ, ಕುಮಾರ್, ಟಿ.ಎರ್‍ರಿಸ್ವಾಮಿ, ಹನುಮಯ್ಯ, ಹೊನ್ನುರಸ್ವಾಮಿ, ತಾಲ್ಲೂಕಿನ ವಿವಿಧ ಗ್ರಾಮಗಳ ವಾಲ್ಮೀಕಿ ಸಮಾಜದ ಮುಖಂಡರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.