ADVERTISEMENT

ಬಳ್ಳಾರಿ ಸಂಘರ್ಷ | ಶ್ರೀರಾಮುಲುರನ್ನು ಕೊಲ್ಲುವ ಉದ್ದೇಶದ ದಾಳಿ: ಜನಾರ್ದನ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 11 ಜನವರಿ 2026, 23:40 IST
Last Updated 11 ಜನವರಿ 2026, 23:40 IST
ಜನಾರ್ದನ ರೆಡ್ಡಿ 
ಜನಾರ್ದನ ರೆಡ್ಡಿ    

ಬಳ್ಳಾರಿ: ‘ಶಾಸಕ ಭರತ್‌ ರೆಡ್ಡಿ ಆಪ್ತ ಸತೀಶ್‌ ರೆಡ್ಡಿ ಎಂಬಾತ ಶ್ರೀರಾಮುಲು ಅವರನ್ನು ಕೊಲ್ಲುವ ಉದ್ದೇಶದೊಂದಿಗೆ ಜ.1ರಂದು ಬ್ಯಾನರ್‌ ವಿಚಾರವನ್ನು ಮುಂದಿಟ್ಟುಕೊಂಡು ದಾಳಿ ಮಾಡಿದ್ದ. ಅವಾಚ್ಯ ಶಬ್ಧಗಳಿಂದ ನಿಂದನೆ ಮಾಡಿದ್ದ’ ಎಂದು ಶಾಸಕ ಜನಾರ್ದನ ರೆಡ್ಡಿ ಆರೋಪಿಸಿದ್ದಾರೆ. 

ಭಾನುವಾರ ಸುದ್ದಿಗೋಷ್ಠಿ ನಡೆಸಿದ ಅವರು, ಶ್ರೀರಾಮುಲು ಅವರನ್ನು ಸತೀಶ್‌ ರೆಡ್ಡಿ ನಿಂದಿಸಿದ್ದಾನೆ ಎನ್ನಲಾದ, ಹಲ್ಲೆಗೆ ಸೂಚಿಸಿದ್ದಾನೆ ಎನ್ನಲಾದ ವಿಡಿಯೊವನ್ನು ಬಿಡುಗಡೆ ಮಾಡಿದರು. 

ಬಳಿಕ ಮಾತನಾಡಿದ ಜನಾರ್ದನ ರೆಡ್ಡಿ, ‘ಬ್ಯಾನರ್‌ ಅಳವಡಿಕೆ ಮಾಡುವ ವೇಳೆ ಶ್ರೀರಾಮುಲು ಅವರನ್ನು ಸತೀಶ್‌ ರೆಡ್ಡಿ ತೆಲುಗಿನಲ್ಲಿ ನಿಂದಿಸುತ್ತಾ, ಹಲ್ಲೆ ಮಾಡಲು ಬೆಂಬಲಿಗರಿಗೆ ಸೂಚಿಸುತ್ತಾನೆ. ‘ಈಗ ಬಿಟ್ಟರೆ ಮುಂದೆ ಸಿಗುವುದಿಲ್ಲ, ಹೊಡೆಯಿರಿ’ ಎಂದು ದಾಳಿಗೆ ತಿಳಿಸುತ್ತಾನೆ.  ಶ್ರೀರಾಮುಲು ಜಾತಿಯನ್ನು ಉಲ್ಲೇಖಿಸಿ ನಿಂದನೆ ಮಾಡುತ್ತಾನೆ. ಇದು ಪೂರ್ವ ನಿಯೋಜಿತ ಕೃತ್ಯ ಎಂಬುದು ಈ ಮೂಲಕ ಸಾಬೀತಾಗಿದೆ’ ಎಂದರು.  

ADVERTISEMENT

‘ಶ್ರೀರಾಮುಲು ಅವರನ್ನು ಕೊಲ್ಲಲೆಂದೇ ಈ ದಾಳಿ ನಡೆದಿದೆ. ಸದ್ಯ ವಿಡಿಯೊ ಒಂದು ದಿನದ ಹಿಂದೆಯಷ್ಟೇ ಸಿಕ್ಕಿತು’ ಎಂದರು. 

‘ಸ್ಥಳೀಯ ಪೊಲೀಸರು ಮತ್ತು ಸಿಐಡಿ ಅಧಿಕಾರಿಗಳಿಬ್ಬರೂ ಸರ್ಕಾರದ ಕೈಗೊಂಬೆಗಳೇ. ಅಧಿಕಾರಿಗಳು ಅಷ್ಟು ಧಕ್ಷರಾಗಿದ್ದಿದ್ದರೆ ಇಷ್ಟೊತ್ತಿಗೆ ಭರತ್‌ ರೆಡ್ಡಿ, ಸತೀಶ್‌ ರೆಡ್ಡಿ ಮತ್ತು ಅಂಗರಕ್ಷಕರನ್ನು ಬಂಧಿಸಬೇಕಾಗಿತ್ತು. ನಾವು ವಿಡಿಯೊ ಸಾಕ್ಷಿಗಳನ್ನು ನೀಡಿದರೂ ಈ ವರೆಗೆ ಬಂಧಿಸಿಲ್ಲ. ಸಿಬಿಐಗೆ ವಹಿಸಿದರೆ ಮಾತ್ರ ನ್ಯಾಯ ಸಿಗಲಿದೆ. ಇಲ್ಲವೇ ನ್ಯಾಯಾಂಗ ತನಿಖೆ ನಡೆಯಬೇಕು ಎಂದರು. 

ಪಾದಯಾತ್ರೆ ಬಗ್ಗೆ ಇಂದು ತೀರ್ಮಾನ 

‘ಇದೇ 17ರಂದು ಬಿಜೆಪಿಯು ಹೋರಾಟ ಹಮ್ಮಿಕೊಳ್ಳಲಿದೆ. ಈ ಬಗ್ಗೆ ಹಿರಿಯ ನಾಯಕರೊಂದಿಗೆ ಚರ್ಚೆ ಮಾಡಲಾಗಿದೆ. ಸೋಮವಾರ ಈ ಬಗ್ಗೆ ಅಂತಿಮ ತೀರ್ಮಾನ ಹೊರಬೀಳಲಿದೆ‘ ಎಂದು ಶಾಸಕ ಜನಾರ್ದನ ರೆಡ್ಡಿ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.