ಸಿರುಗುಪ್ಪ: ತಾಲ್ಲೂಕಿನ 64 ಹಳೇಕೋಟೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಆದರ್ಶ ಶಾಲೆ ಹಿಂಭಾಗದಲ್ಲಿ ಬರುವ ವಿಜಯ ನಗರ ಸಾಮ್ರಾಜ್ಯರ ಕಾಲದ ಜಿಗಳರಾತಿ ಬಾವಿ ವರ್ಷವಿಡೀ ನೀರಿನ ಚಿಲುಮೆ ಎದ್ದು ಕಾಣುತ್ತದೆ.
ಈ ಬಾವಿಯಲ್ಲಿ ಸದಾ ನೀರು ಭೂಮಿಯಿಂದ ಸುಮಾರು ಇಪ್ಪತ್ತು ಅಡಿಗಳಷ್ಟು ಆಳದಲ್ಲಿ ಸಿಗುತ್ತದೆ. ಎಷ್ಟು ನೀರು ತೆಗೆದರೂ ಈ ಬಾವಿಯ ನೀರು ಬತ್ತುವುದಿಲ್ಲ. ಬೇಸಿಗೆಯಲ್ಲಿ ನೀರು ಸ್ವಲ್ಪ ಕೆಳಕ್ಕೆ ಹೋಗಿ ನಂತರ ತನ್ನ ಮಟ್ಟಕ್ಕೆ ಬಂದು ಯಥಾಸ್ಥಿತಿಗೆ ತಲುಪುತ್ತದೆ. ಮಳೆಗಾಲದಲ್ಲಿ ಮಾತ್ರ ನೀರು ಅಕ್ಷಯಪಾತ್ರೆ ಇದ್ದ ರೀತಿಯಲ್ಲಿ ಇರುತ್ತದೆ. ಬಾವಿಯ ಒಳಗೆ ವಿಘ್ನೇಶ್ವರ, ನಾಗರ ಹಾವು, ಇಬ್ಬರು ಜಂಟಿಯಾಗಿ ನಿಂತ ಕಲಾಕೃತಿಗಳು ಸುಂದರವಾಗಿ ಕಾಣುತ್ತವೆ.
ಸಿರುಗುಪ್ಪ ನಗರಕ್ಕೆ ಸರಬರಾಜು ಆಗುವ ಕುಡಿಯುವ ನೀರಿನ ಕೆರೆಯ ಬಳಿಯ ಚಿಕ್ಕ ಬೆಟ್ಟದಲ್ಲಿ ಈ ಒರತೆ ಇದೆ. ಈ ಪ್ರದೇಶದಲ್ಲಿ ಹಿಂದೆ ವಿಜಯನಗರದ ಅರಸರು ತಾಳಿಕೋಟೆ ಯುದ್ದಕ್ಕೆ ಹೋಗುವ ಸಂದರ್ಭದಲ್ಲಿ ಈ ಬಾವಿಯನ್ನು ನಿರ್ಮಿಸಿ ನೂರಾರು ಪ್ರಾಣಿ ಪಕ್ಷಿಗಳಿಗೆ ನೀರು ಒದಗಿಸುವ ಮೂಲಕ ಪ್ರಸಿದ್ಧವಾಗಿದೆ.
ಪಕ್ಕದ ಕೆರೆಯಲ್ಲಿ ನೀರು ಬತ್ತಿದರು ಬಾವಿಯಲ್ಲಿ ಮಾತ್ರ ನೀರು ಬತ್ತಿಲ್ಲ. ಕೃಷಿ ಚಟುವಟಿಕೆಗಳಿಗೆ ಸುಮಾರು ನೂರಾರು ಕೊಳವೆಬಾವಿ ಕೊರೆಸಿದರು. ಈ ಬಾವಿಯ ನೀರು ಕಡಿಮೆಯಾಗಿಲ್ಲದೆ ಇರುವುದು ಇಂದಿಗೂ ಸಾಕ್ಷಿಯಾಗಿದೆ.
‘ಕುರಿ, ದನ ಮೇಯಿಸುವವರು ಬೇಸಿಗೆಯಲ್ಲಿ ಕುಡಿಯುವ ನೀರು ಅರಿಸಿ ಇಲ್ಲಿಯವರೆಗೂ ಬರುತ್ತಾರೆ. ನಗರಸಭೆಯಿಂದ ಬೃಹತ್ ಕುಡಿಯುವ ನೀರಿನ ಕೆರೆ ನಿರ್ಮಿಸಿದರೂ ಈ ಬಾವಿಗೆ ಯಾವುದೇ ಅಡಚಣೆ ಇರುವುದಿಲ್ಲ. ಈ ಬಾವಿಯ ಸುತ್ತಲೂ ಬೇಲಿ ಹಾಕಿ, ಜಾಗೃತೆಯಿಂದ ಸ್ಥಳವನ್ನು ಕಾಪಾಡಬೇಕು’ ಎಂದು ಇತಿಹಾಸ ಸಂಶೋಧಕ ಡಾ.ರಾಮಕೃಷ್ಣ ಅವರ ಮನವಿಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.