ADVERTISEMENT

ಭೂ ಪರಭಾರೆ ವಿಷಯ ರಾಜಕೀಯವಾಗುತ್ತಿದೆ ಅದಕ್ಕೆ ಪ್ರತಿಕ್ರಿಸಲಾರೆ: ಸಜ್ಜನ್‌ ಜಿಂದಾಲ್

​ಪ್ರಜಾವಾಣಿ ವಾರ್ತೆ
Published 8 ಜೂನ್ 2019, 8:27 IST
Last Updated 8 ಜೂನ್ 2019, 8:27 IST
   

ಹೊಸಪೇಟೆ: 'ನಾವು ಯಾವುದೇ ಅಕ್ರಮ ಎಸಗುತ್ತಿಲ್ಲ. ಎಲ್ಲವೂ ಕಾನೂನಿನ ಚೌಕಟ್ಟಿನಲ್ಲಿ ಕಂಪೆನಿ ನಡೆಸುತ್ತಿದ್ದೇವೆ. ಭೂ ಪರಭಾರೆ ವಿಷಯ ರಾಜಕೀಯಗೊಳ್ಳುತ್ತಿದ್ದರೆ ಅದರ ಬಗ್ಗೆ ನಾನೇನೂ ಪ್ರತಿಕ್ರಿಯಿಸಲಾರೆ. ರಾಜಕೀಯದಲ್ಲಿ ಅದೆಲ್ಲ ಸಾಮಾನ್ಯ' ಎಂದು ಜಿಂದಾಲ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಸಜ್ಜನ್ ಜಿಂದಾಲ್ ಹೇಳಿದರು.

ತೋರಣಗಲ್‌ನ ಜಿಂದಾಲ್‌ನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, 'ಜಿಂದಾಲ್‌ನಿಂದ ಈ ರಾಜ್ಯಕ್ಕೆ, ಈ ರಾಜ್ಯದ ಜನರಿಗೆ ಯಾವುದೇ ಅನಾನುಕೂಲವಾಗಿಲ್ಲ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಪ್ರತಿಯೊಬ್ಬರಿಗೂ ಪ್ರಶ್ನಿಸುವ ಹಕ್ಕಿದೆ. ಅದೇ ಪ್ರಜಾಪ್ರಭುತ್ವದ ವೈಶಿಷ್ಟ್ಯ. ಅಂದಹಾಗೆ, ಯಾರೊ ಒಬ್ಬರು ವಿರೋಧ ಮಾಡಿದರೆ ಏನಾಗಲಿದೆ' ಎಂದರು.

ಎಂ.ಎಂ.ಎಲ್‌ಗೆ ಕೊಡಬೇಕಾದ ₹1,200ಕೋಟಿ ಬಾಕಿ ಉಳಿಸಿಕೊಂಡಿರುವ ವಿಚಾರ ನ್ಯಾಯಾಲಯದಲ್ಲಿದೆ. ಹಾಗಾಗಿ ಅದರ ಬಗ್ಗೆ ನಾನೇನೂ ಮಾತನಾಡಲಾರೆ. ಇಲ್ಲವಾದಲ್ಲಿ ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ಹೇಳಿದರು.

ADVERTISEMENT

ಗುತ್ತಿಗೆ ಮತ್ತು ಮಾರಾಟ ಕರಾರಿನ ಅನ್ವಯ ರಾಜ್ಯ ಸರ್ಕಾರವು ಜಿಂದಾಲ್‌ಗೆ3,667 ಎಕರೆ ಜಮೀನು ನೀಡಿದೆ. ಅದರಂತೆ ಈಗ ಜಮೀನು ಪರಭಾರೆ ಮಾಡಬೇಕು. ಯಾವುದೋ ಕಾರಣ ನೀಡಿ ಜಮೀನು ಪರಭಾರೆ ಮಾಡದಿದ್ದರೆ ತಪ್ಪಾಗುತ್ತದೆ. ಭವಿಷ್ಯದಲ್ಲಿ ರಾಜ್ಯಕ್ಕೆ ಕೈಗಾರಿಕೆಗಳು ಬರಲು ಹಿಂದೇಟು ಹಾಕಬಹುದು ಎಂದು ರಾಜ್ಯ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ ಅಧ್ಯಕ್ಷ ಸುಧಾಕರ್ ಶೆಟ್ಟಿ ತಿಳಿಸಿದರು.

ಉದ್ಯೋಗ ನಿವಾರಣೆ ಮಾಡುವಲ್ಲಿ ಕೈಗಾರಿಕೆಗಳ ಪಾತ್ರ ಮಹತ್ವದ್ದಾಗಿದೆ. ಅವುಗಳಿಗೆ ಉತ್ತೇಜನ ಸಿಗಬೇಕು ಹೊರತು ಕಾಲೆಳೆಯುವ ಕೆಲಸವಾಗಬಾರದು ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.