ADVERTISEMENT

ಐತಿಹಾಸಿಕ ನಗರಿ ಕಂಪ್ಲಿಯಲ್ಲಿ ಸಂಭ್ರಮ: ಸಿಂಗಾರಕೊಂಡ ವಿಜಯನಗರ ಹೆಬ್ಬಾಗಿಲು

ಪಂಡಿತಾರಾಧ್ಯ ಎಚ್.ಎಂ ಮೆಟ್ರಿ
Published 12 ಫೆಬ್ರುವರಿ 2026, 7:38 IST
Last Updated 12 ಫೆಬ್ರುವರಿ 2026, 7:38 IST
ಕಂಪ್ಲಿ ಉತ್ಸವ ಲೋಗೋ
ಕಂಪ್ಲಿ ಉತ್ಸವ ಲೋಗೋ   

ಕಂಪ್ಲಿ: ಕಂಪ್ಲಿ ಉತ್ಸವದ ಹಿನ್ನೆಲೆಯಲ್ಲಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಂತ ಸಂಭ್ರಮ ಆವರಿಸಿದೆ. ಹಬ್ಬದ ವಾತಾವರಣ ಮನೆ ಮಾಡಿದೆ.

ಕ್ರಿ.ಶ 8ನೇ ಶತಮಾನದಿಂದ ಆರಂಭವಾಗುವ ಕಂಪ್ಲಿ ಇತಿಹಾಸದಲ್ಲಿ ನಂದರು, ಮೌರ್ಯರು, ಶಾತವಾಹನರು, ಕದಂಬರು, ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಹೊಯ್ಸಳರು, ವಿಜಯನಗರದ ಸಾಮ್ರಾಟರು, ಕಂಪಲಿರಾಯ ಮತ್ತು ಗಂಡುಗಲಿ ಕುಮಾರಾಮ ಆಳ್ವಿಕೆ ನಡೆಸಿದ್ದಾರೆ.

ಇಂಥ ಕಂಪ್ಲಿಯ ಉತ್ಸವದಲ್ಲಿ ಬುಧವಾರದಿಂದ ಜನಪದ ವಾಹಿನಿ, ತುಂಗಾರತಿ ಜರುಗಿದೆ. ಫೆ.12ರಂದು ಗಂಡುಗಲಿ ಕುಮಾರರಾಮ ವೇದಿಕೆಯಲ್ಲಿ ನಡೆಯುವ ಉದ್ಘಾಟನೆ, ಮನೋರಂಜನೆ ಕಾರ್ಯಕ್ರಮಗಳ ರಸದೌತಣಕ್ಕೆ ಕ್ಷಣಗಣನೆ ಆರಂಭಗೊಂಡಿದೆ. 

ADVERTISEMENT

ಪಟ್ಟಣದ ಸುಂದರಿ ಸಕ್ಕರೆ ಕಾರ್ಖಾನೆ ಮೈದಾನದಲ್ಲಿ ವೇದಿಕೆ ನಿರ್ಮಾಣವಾಗಿದ್ದು, ಡಿಜಿಟಲ್ ವ್ಯವಸ್ಥೆಯ ಧ್ವನಿ, ಬೆಳಕಿನಿಂದ ಶೋಭಿಸುತ್ತಿದೆ. ಪ್ರೇಕ್ಷಕರಿಗಾಗಿ 12,000ಆಸನ ಸಜ್ಜಾಗಿವೆ. ವೇದಿಕೆ ಬಳಿ ಫಲಪುಷ್ಪ ಪ್ರದರ್ಶನ, ಸರ್ಕಾರದ ವಿವಿಧ ಇಲಾಖೆಯ ಪಕ್ಷಿನೋಟ, ಪ್ರಗತಿ ಕುರಿತ ಪ್ರದರ್ಶನ ಮಳಿಗೆಗಳು ತಲೆಎತ್ತಿವೆ. ಉತ್ಸವಕ್ಕೆ ಬರುವವರಿಗೆ ಒಂದೆಡೆ ಊಟದ ವ್ಯವಸ್ಥೆ ಕಲ್ಪಿಸಲಾಗಿದೆ.

ಗುರುವಾರ ಮಧ್ಯಾಹ್ನ 3ರಿಂದ 6ವರೆಗೆ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6ಕ್ಕೆ ಜಿಲ್ಲಾ ಉಸ್ತುವಾರಿ ಸಚಿವ ಬಿ.ಝಡ್. ಜಮೀರ್ ಆಹ್ಮದ್ ಖಾನ್ ಕಾರ್ಯಕ್ರಮ ಉದ್ಘಾಟಿಸಲಿದ್ದು, ಕನ್ನಡ ಮತ್ತು ಸಂಸ್ಕೃತಿ  ಸಚಿವ ಎಸ್. ಶಿವರಾಜ್ ತಂಗಡಗಿ, ಶಾಸಕ ಜೆ.ಎನ್. ಗಣೇಶ್ ಅಧ್ಯಕ್ಷತೆ, ಸಂಸದ ಈ. ತುಕಾರಾಂ, ವಿಧಾನಪರಿಷತ್ ಸದಸ್ಯರು, ಜಿಲ್ಲೆಯ ಶಾಸಕರು, ಜಿಲ್ಲಾ ಮತ್ತು ತಾಲ್ಲೂಕು ಆಡಳಿತ ಅಧಿಕಾರಿಗಳು ಭಾಗವಹಿಸಲಿದ್ದಾರೆ.

ಕಂಪ್ಲಿ ಉತ್ಸವ ಅಂಗವಾಗಿ ಸುಂದರಿ ಸಕ್ಕರೆ ಕಾರ್ಖಾನೆ ಮೈದಾನದಲ್ಲಿ ಸಿದ್ಧವಾಗಿರುವ ಗಂಡಗಲಿ ಕುಮಾರರಾಮ ವೇದಿಕೆ 

ಕಲಾವಿದರ ದಂಡು 

ಉದ್ಘಾಟನೆ ಬಳಿಕ ಅನುಶ್ರೀ ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಚಂದನ್‍ಶೆಟ್ಟಿ ಕಲಾವಿದರಾದ ಹನುಮಂತ ಲಮಾಣಿ ಚನ್ನಪ್ಪ ಹುದ್ದಾರ ಬಾಳು ಬೆಳಗುಂದಿ ಶಿವಾನಿ ಶಿವದಾಸ್ ಅಶ್ವಿನಿ ಗೋಕಾಕ ಕಾಮಿಡಿ ಕಿಲಾಡಿ ಶಿವರಾಜ ಕೆ.ಆರ್. ಪೇಟೆ ಗಿಚ್ಚಿಗಿಲಿಗಿಲಿಯ ರಾಘವೇಂದ್ರ ಪ್ರವೀಣ್‍ಕುಮಾರ ಗಸ್ತಿ ಹುಲಿ ಕಾರ್ತಿಕ ಮತ್ತು ಡಿಕೆಡಿ ಡ್ಯಾನ್ ತಂಡದವರು ಪ್ರೇಕ್ಷಕರ ಮನತಣಿಸಲಿದ್ದಾರೆ. 

ಶಾಸಕ ಜೆ.ಎನ್. ಗಣೇಶ್ ನೇತೃತ್ವದಲ್ಲಿ 2ನೇ ಬಾರಿ ‘ಕಂಪ್ಲಿ ಉತ್ಸವ’ ನಡೆಯುತ್ತಿದೆ. ನಾಡಿನ ಕಲೆ ಸಾಹಿತ್ಯ ವೈಭವ ಸಾರುವ ಕಾರ್ಯಕ್ರಮಗಳು ವೇದಿಕೆಯಲ್ಲಿ ಮೇಳೈಸಲಿದೆ. ಕ್ಷೇತ್ರದ ಜನರು ಭಾಗವಹಿಸಿ ಯಶಸ್ವಿಗೊಳಿಸಲು ಮನವಿ -
-ಹೊಸಕೋಟೆ ಜಗದೀಶ್, ಅಧ್ಯಕ್ಷರು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘ ಮೆಟ್ರಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.