ADVERTISEMENT

ಕಂಪ್ಲಿ ಉತ್ಸವ ಪ್ರಚಾರ ವಾಹನಕ್ಕೆ ಚಾಲನೆ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2026, 3:05 IST
Last Updated 9 ಫೆಬ್ರುವರಿ 2026, 3:05 IST
ಕಂಪ್ಲಿ ಉತ್ಸವದ ಪ್ರಚಾರ ವಾಹನಕ್ಕೆ ಶಾಸಕ ಜೆ.ಎನ್. ಗಣೇಶ್ ಭಾನುವಾರ ಚಾಲನೆ ನೀಡಿದರು. ತಹಶೀಲ್ದಾರ್ ಜೂಗಲ ಮಂಜುನಾಥ, ಅಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು
ಕಂಪ್ಲಿ ಉತ್ಸವದ ಪ್ರಚಾರ ವಾಹನಕ್ಕೆ ಶಾಸಕ ಜೆ.ಎನ್. ಗಣೇಶ್ ಭಾನುವಾರ ಚಾಲನೆ ನೀಡಿದರು. ತಹಶೀಲ್ದಾರ್ ಜೂಗಲ ಮಂಜುನಾಥ, ಅಧಿಕಾರಿಗಳು, ಮುಖಂಡರು ಭಾಗವಹಿಸಿದ್ದರು   

ಕಂಪ್ಲಿ: ಫೆ. 11 ಮತ್ತು 12ರಂದು ಕಂಪ್ಲಿ ಉತ್ಸವ ನಡೆಯುವ ಕಾರಣ ಶಾಸಕ ಜೆ.ಎನ್. ಗಣೇಶ್ ಉತ್ಸವದ ಪ್ರಚಾರ ವಾಹನಕ್ಕೆ ಭಾನುವಾರ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಶಾಸಕರು, ‘ಕನ್ನಡ ಕಿರುತೆರೆ ನಿರೂಪಕಿ ಅನುಶ್ರೀ, ಕನ್ನಡ ಚಿತ್ರರಂಗದ ಜನಪ್ರಿಯ ಗಾಯಕ ಚಂದನ್‍ ಶೆಟ್ಟಿ, ಕಿರುತೆರೆ ಖಾಸಗಿ ಚಾನಲ್‍ನ ಜನಪ್ರಿಯ ಸರಿಗಮಪ ಕಲಾವಿದರಾದ ಹನುಮಂತ ಲಮಾಣಿ, ಚನ್ನಪ್ಪ ಹುದ್ದಾರ, ಬಾಳು ಬೆಳಗುಂದಿ, ಶಿವಾನಿ ಶಿವದಾಸ್, ಅಶ್ವಿನಿ ಗೋಕಾಕ, ಕಾಮಿಡಿ ಕಿಲಾಡಿ ಶಿವರಾಜ ಕೆ.ಆರ್. ಪೇಟೆ, ಗಿಚ್ಚಿಗಿಲಿಗಿಲಿಯ ರಾಘವೇಂದ್ರ, ಪ್ರವೀಣ್‍ಕುಮಾರ ಗಸ್ತಿ, ಹುಲಿ ಕಾರ್ತಿಕ ಮತ್ತು ಡಿಕೆಡಿ ಡ್ಯಾನ್ ತಂಡದವರು ವಿಶೇಷವಾಗಿ ರಂಜಿಸಲಿದ್ದಾರೆ. ಈ ಮನೋರಂಜನೆ ಕಾರ್ಯಕ್ರಮಗಳಲ್ಲಿ ತಾಲ್ಲೂಕಿನ ಎಲ್ಲರೂ ಭಾಗವಹಿಸಿ ಯಶಸ್ವಿಗೊಳಿಸಬೇಕು’ ಎಂದು ಮನವಿ ಮಾಡಿದರು.

‘ಕಂಪ್ಲಿ ಉತ್ಸವವನ್ನು ಜನೋತ್ಸವವನ್ನಾಗಿ ರೂಪಿಸಲು ಸ್ಥಳೀಯ ಕಲಾವಿದರಿಗೂ ಅವಕಾಶ ಕಲ್ಪಿಸಲಾಗಿದೆ. ಜತೆಗೆ ಮಕ್ಕಳು, ಮಹಿಳೆಯರು, ಯುವಜನತೆಗೆ ವೈವಿಧ್ಯಮಯ ಕಾರ್ಯಕ್ರಮ, ಸ್ಪರ್ಧೆಗಳನ್ನು ಆಯೋಜಿಸಲಾಗಿದೆ’ ಎಂದರು.

ADVERTISEMENT

ಉತ್ಸವದಲ್ಲಿ ತಾಲ್ಲೂಕಿನ ಇತಿಹಾಸ, ಸಾಹಿತ್ಯ, ಸಂಗೀತ, ಸಾಂಸ್ಕೃತಿಕ, ಸಾಮಾಜಿಕ ನೆಲೆಗಳ ಶ್ರೀಮಂತಿಕೆಯನ್ನು ಪ್ರದರ್ಶಿಸಲಾಗುವುದು. ಕಳೆದ ಬಾರಿಗಿಂತ ಕಂಪ್ಲಿ ಉತ್ಸವವನ್ನು ಇನ್ನಷ್ಟು ಅದ್ದೂರಿಯಾಗಿ ಆಚರಿಸಲು ನಿರ್ಧರಿಸಲಾಗಿದೆ’ ಎಂದು ಹೇಳಿದರು.

ಉತ್ಸವದ ಹಿನ್ನೆಲೆಯಲ್ಲಿ ಪಟ್ಟಣದ ಪ್ರಮುಖ ಬೀದಿಗಳನ್ನು, ಐತಿಹಾಸಿಕ ಸೋಮಪ್ಪ ಕೆರೆಯನ್ನು ಜಗಮಗಿಸುವ ವಿದ್ಯುತ್‍ದೀಪಗಳಿಂದ, ಕಮಾನುಗಳಿಂದ ಅಲಂಕರಿಸುವ ಕಾರ್ಯ, ಸ್ವಚ್ಛತೆ, ನೈರ್ಮಲ್ಯ, ರಸ್ತೆ ಕಾಮಗಾರಿಗಳು ಪ್ರಗತಿಯಲ್ಲಿದೆ ಎಂದರು.

ತಹಶೀಲ್ದಾರ್ ಜೂಗಲ ಮಂಜುನಾಯಕ ಮಾತನಾಡಿ, ಉತ್ಸವದ ರೂಪುರೇಷೆ ಸಿದ್ಧಗೊಳ್ಳುತ್ತಿದ್ದು, ತಾಲ್ಲೂಕಿನ ಎಲ್ಲ ಇಲಾಖೆಯ ಅಧಿಕಾರಿಗಳು ಯಶಸ್ಸಿಗೆ ಸಹಕರಿಸುವಂತೆ ಕೋರಿದರು.

ಪುರಸಭೆ ಮುಖ್ಯಾಧಿಕಾರಿ ಬಿ. ಮಲ್ಲಿಕಾರ್ಜುನ, ಎಪಿಎಂಸಿ ಅಧ್ಯಕ್ಷ ಎನ್. ಹಬೀಬ್‍ರೆಹಮಾನ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಶ್ರೀನಿವಾಸರಾವ್, ಪ್ರಮುಖರಾದ ಬಿ. ಸಿದ್ದಪ್ಪ, ಆರ್.ಪಿ. ಶಶಿಕುಮಾರ್, ಲಡ್ಡು ಹೊನ್ನೂರವಲಿ, ಬಿ. ಜಾಫರ್ ಹಾಜರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.