ಕಂಪ್ಲಿ: ತಾಲ್ಲೂಕಿನ ಗಡಿಗ್ರಾಮ ಕಣಿವಿ ತಿಮ್ಮಲಾಪುರದಲ್ಲಿ ಶ್ರೀಕೃಷ್ಣದೇವರಾಯ ಉಲ್ಲೇಖದ ಎರಡು ದಾನ ಶಾಸನಗಳು ಪತ್ತೆಯಾಗಿವೆ.
ಒಂದು ಶಾಸನ ಗ್ರಾಮದ ಒಳಗಡೆ ಇದ್ದರೆ ಮತ್ತೊಂದು ಕಾಲುವೆಯ ಬಳಿಯ ಹೊರವಲಯದ ಗದ್ದೆಯಲ್ಲಿರುವ ಹುಟ್ಟುಬಂಡೆಗೆ ಬರೆಸಲಾಗಿದೆ ಎಂದು ಸಂಶೋಧಕ ನರಸಿಂಹ ತಿಳಿಸಿದರು.
‘ತಿಮ್ಮಲಾಪುರವು ಕೃಷ್ಣದೇವರಾಯ ಆಳ್ವಿಕೆಯಲ್ಲಿ ಪ್ರಮುಖ ಕೇಂದ್ರವಾಗಿದ್ದು, ಹಂಪಿಗೆ ಸಮೀಪದಲ್ಲಿದೆ. ಇಲ್ಲಿ ಪಾಳೆಯಗಾರರು ಆಳ್ವಿಕೆ ನಡೆಸಿದ ಹಾಗೂ ದೇವಾಲಯ ನಿರ್ಮಿಸಿ ಆ ದೇವಾಲಯಕ್ಕೆ ಪೂಜ ಪರಿಕರಗಳನ್ನು ನೀಡಿದ ಕುರಿತಾಗಿರುವ ದಾನ ಶಾಸನಗಳು ದೊರಕಿವೆ’ ಎಂದು ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯದ ಪ್ರೊ. ತಿಪ್ಪೇಸ್ವಾಮಿ ತಿಳಿಸಿದರು.
ಗ್ರಾಮದೊಳಗಿರುವ ಶಾಸನದಲ್ಲಿ ಗಣಾಧಿಪತಯೇ ಶುಭಮಸ್ತು ಎಂಬ ಸಾಲುಗಳಿಂದ ಆರಂಭಗೊಳ್ಳುತ್ತದೆ. ಇದು 12 ಅಡಿ ಎತ್ತರ 5 ಅಡಿ ಅಗಲವಿದ್ದು, ಕನ್ನಡ ಲಿಪಿಯ 33 ಸಾಲುಗಳಿವೆ. ಶಾಸನದ ಮೇಲ್ಭಾಗದಲ್ಲಿ ಎಡಗಡೆ ಸೂರ್ಯ, ಬಲಗಡೆ ಚಂದ್ರ ಚಿಹ್ನೆಯೊಂದಿಗೆ ಶಂಖ ಮತ್ತು ಚಕ್ರ ಚಿತ್ರಗಳ ಮಧ್ಯ ಭಾಗದಲ್ಲಿ ವಿಷ್ಣುನಾಮದ ಚಿಹ್ನೆ ಇದೆ.
ಗ್ರಾಮದ ಹೊರವಲಯದ ಗದ್ದೆಯಲ್ಲಿ ಹುಟ್ಟು ಬಂಡೆಗೆ ಶಾಸನವನ್ನು ಬರೆಸಲಾಗಿದೆ. ಈ ಶಾಸನದ ಮೇಲ್ಭಾಗದಲ್ಲಿ ಮೊದಲಿಗೆ ಸೂರ್ಯ, ಚಂದ್ರರ ಚಿಹ್ನೆಗಳಿವೆ. ಇಲ್ಲಿಯೂ ಸಹ ಸ್ವಸ್ತಿಶ್ರೀ ಜಯಾಭ್ಯುದಯ ಶಾಲಿವಾಹನ ಶಕ ವರುಷ ಶ್ರೀಮುಖ ಸಂವತ್ಸರ ಎಂದು ಆರಂಭಗೊಳ್ಳುತ್ತದೆ. ಶಾಸನದಲ್ಲಿ ಕೃಷ್ಣದೇವರಾಯನನ್ನು ರಾಜಾಧಿರಾಜ ರಾಜ ಪರಮೇಶ್ವರ ಎಂಬ ಬಿರುದುಳ್ಳ ಸಾಲುಗಳಿವೆ. ಬಹುತೇಕ ಅಕ್ಷರಗಳು ಸವೆದು ಹೋಗಿವೆ. ಇದರಲ್ಲಿಯೂ ಸಹ 33 ಸಾಲುಗಳ ಕನ್ನಡ ಲಿಪಿ ಹಾಗೂ ಅಲ್ಲಲ್ಲಿ ತೆಲುಗು ಭಾಷೆಯ ಪದಗಳನ್ನು ಬಳಸಲಾಗಿದೆ ಎಂದು ವಿಜಯನಗರ ತಿರುಗಾಟ ಸಂಶೋಧನ ತಂಡದ ಗೋವಿಂದ ವಿವರಿಸಿದರು.
ವಿಜಯನಗರ ತಿರುಗಾಟ ಸಂಶೋಧನ ತಂಡದ ಕೃಷ್ಣಗೌಡ, ವೀರಾಂಜನೇಯ, ಸಂಶೋಧಕರಾದ ಎಚ್. ರವಿ, ಗ್ರಾಮದ ನಾಗರಾಜ ಅವರ ನೆರವಿನೊಂದಿಗೆ ಈ ಶಾಸನಗಳನ್ನು ಪತ್ತೆ ಮಾಡಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.