ADVERTISEMENT

ಕನ್ನಡ ಅನ್ನ, ಉದ್ಯೋಗ ಕೊಡುವ ಭಾಷೆಯಾಗಲಿ: ಮೌನೇಶ್‌ ಬಡಿಗೇರ್

​ಪ್ರಜಾವಾಣಿ ವಾರ್ತೆ
Published 1 ನವೆಂಬರ್ 2020, 7:43 IST
Last Updated 1 ನವೆಂಬರ್ 2020, 7:43 IST
ತಾಲ್ಲೂಕು ಆಡಳಿತದಿಂದ ಭಾನುವಾರ ಹೊಸಪೇಟೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೊತ್ಸವದಲ್ಲಿ ಸಹಾಯಕ ಪ್ರಾಧ್ಯಾಪಕ ಮೌನೇಶ್‌ ಬಡಿಗೇರ್ ಮಾತನಾಡಿದರು
ತಾಲ್ಲೂಕು ಆಡಳಿತದಿಂದ ಭಾನುವಾರ ಹೊಸಪೇಟೆಯಲ್ಲಿ ಆಯೋಜಿಸಿದ್ದ ಕನ್ನಡ ರಾಜ್ಯೊತ್ಸವದಲ್ಲಿ ಸಹಾಯಕ ಪ್ರಾಧ್ಯಾಪಕ ಮೌನೇಶ್‌ ಬಡಿಗೇರ್ ಮಾತನಾಡಿದರು   

ಹೊಸಪೇಟೆ: ‘ಕನ್ನಡ ಭಾಷೆಯೂ ಅನ್ನ ಮತ್ತು ಉದ್ಯೋಗ ಕೊಡುವ ಭಾಷೆಯಾಗಿ ಬೆಳೆಯಬೇಕು’ ಎಂದು ಸಹಾಯಕ ಪ್ರಾಧ್ಯಾಪಕ ಮೌನೇಶ್‌ ಬಡಿಗೇರ್‌ ಹೇಳಿದರು.

ತಾಲ್ಲೂಕು ಆಡಳಿತದಿಂದ ಭಾನುವಾರ ನಗರದಲ್ಲಿ ಹಮ್ಮಿಕೊಂಡಿದ್ದ ಕನ್ನಡ ರಾಜ್ಯೋತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ‘ಕನ್ನಡ ಭಾಷೆಯ ಉಳಿವಿಗಾಗಿ ಕನ್ನಡಿಗರು ಆತ್ಮಾವಲೋಕನ ಮಾಡಿಕೊಳ್ಳಬೇಕು. ಜಾಗತೀಕರಣದ ಪ್ರಭಾವವೂ ಭಾಷೆ ಮೇಲೆ ಬೀರಿದೆ. ಪ್ರಾಥಮಿಕ ಶಿಕ್ಷಣದಲ್ಲಿ ಕನ್ನಡ ಕಡ್ಡಾಯವಾಗಬೇಕು. ಭಾಷೆಯ ಬಗೆಗಿನ ದ್ವಂದ್ವ ನಿಲುವು ಹಾಗೂ ಇಂಗ್ಲಿಷ್‌ ವ್ಯಾಮೋಹಕ್ಕೆ ಒಳಗಾಗದೇ ಭಾಷೆ ಬೆಳೆಸಬೇಕು’ ಎಂದು ತಿಳಿಸಿದರು.

‘ಕನ್ನಡಿಗರು ಕನ್ನಡ ಗಡಿ ಪ್ರದೇಶದ ಕನ್ನಡ ಶಾಲೆಗಳ ಸ್ಥಿತಿಗತಿಯನ್ನು ಗಮನಿಸಿ ಮೂಲ ಸೌಲಭ್ಯ ಒದಗಿಸಬೇಕು, ಉದ್ಯೋಗದಲ್ಲಿ ಮಿಸಲಾತಿಗೆ ಸರೋಜಿನಿ ಮಹಿಷಿ ವರದಿ ಪರಿಣಾಮಕಾರಿಯಾಗಿ ಜಾರಿಯಾಗಬೇಕು’ ಎಂದರು.

ADVERTISEMENT

‘ಕರ್ನಾಟಕದ ಏಕೀಕರಣ ಚಳವಳಿಯಲ್ಲಿ ಹೊಸಪೇಟೆಯ ನಾಗನಗೌಡ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. ಮಹಾಭಾರತದ ಭೀಷ್ಮ ಪರ್ವದಲ್ಲಿ ಕರುನಾಡಿನ ಉಲ್ಲೇಖವಿದೆ. ಪಂಪನು ತನ್ನ ಆದಿಪುರಾಣದಲ್ಲಿ ಕಾವೇರಿಯಿಂದ ಗೋದಾವರಿ ವರೆಗೆ ಕನ್ನಡ ನಾಡು ಹಬ್ಬಿತ್ತು ಎಂದು ತಿಳಿಸಿದ್ದಾನೆ’ ಎಂದು ಸ್ಮರಿಸಿದರು.

ಧ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್‌ ಎಚ್‌. ವಿಶ್ವನಾಥ್‌, ‘1956ರ ನವೆಂಬರ್‌ 1ರಂದು ವಿವಿಧ ಪ್ರದೇಶಗಳಲ್ಲಿ ಹಂಚಿ ಹೋಗಿದ್ದ ಕನ್ನಡ ಭಾಷೆಯನ್ನಾಡುವ ಜನರ ರಾಜ್ಯ ಉದಯವಾಯಿತು. ಆ ದಿನ ಸ್ಮರಣೆಗಾಗಿ ಪ್ರತಿ ವರ್ಷ ಕರ್ನಾಟಕ ರಾಜ್ಯೋತ್ಸವ ಆಚರಿಸುತ್ತೇವೆ’ ಎಂದು ತಿಳಿಸಿದರು.

ಕೋವಿಡ್‌ನಿಂದ ಮೃತರಾದ ಕನ್ನಡ ಹೋರಾಟಗಾರ ಪಾಂಡುರಂಗ ಹವಾಲ್ದಾರ್‌ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಕಾರ್ಯಕ್ರಮಕ್ಕೂ ಮುನ್ನ ವಿಕಾಸ ಯುವಕ ಮಂಡಳಿ, ಸ್ಫೂರ್ತಿ ವೇದಿಕೆ ಹಾಗೂ ಸರ್ಕಾರಿ ನೌಕರರ ಸಂಘದವರು ವಡಕರಾಯ ದೇವಸ್ಥಾನದಿಂದ ಕನ್ನಡ ಜ್ಯೋತಿಯನ್ನು ತಂದರು.

ಕನ್ನಡ ಸಾಹಿತ್ಯ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷ ಎತ್ನಳ್ಳಿ ಮಲ್ಲಯ್ಯ, ನಗರಸಭೆ ಪೌರಾಯುಕ್ತೆ ಪಿ. ಜಯಲಕ್ಷ್ಮಿ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಆರ್.ಕೆ.ಶ್ರೀಕುಮಾರ್, ಅಧ್ಯಕ್ಷೆ ನಾಗವೇಣಿ ಬಸವರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಸುನಂದಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.