ADVERTISEMENT

ಬಳ್ಳಾರಿ | ಹಂಪಿ ಕನ್ನಡ ವಿ.ವಿ: ಸಿಂಡಿಕೇಟ್‌ ಸಮಿತಿ ಹೆಚ್ಚೋ, ನ್ಯಾಯಮೂರ್ತಿಯೋ?

ಸಿಂಡಿಕೇಟ್‌ ಸಭೆ ನಿರ್ಣಯಕ್ಕೆ ವಿರುದ್ಧವಾದ ಕೆಲಸ

ಶಶಿಕಾಂತ್ ಎಸ್. ಶೆಂಬೆಳ್ಳಿ
Published 6 ಜನವರಿ 2022, 19:30 IST
Last Updated 6 ಜನವರಿ 2022, 19:30 IST
ಹಂಪಿ ಕನ್ನಡ ವಿಶ್ವವಿದ್ಯಾಲಯ
ಹಂಪಿ ಕನ್ನಡ ವಿಶ್ವವಿದ್ಯಾಲಯ   

ಹೊಸಪೇಟೆ (ವಿಜಯನಗರ): ನಿವೃತ್ತ ನ್ಯಾಯಮೂರ್ತಿ ನಡೆಸುವ ತನಿಖೆ ಹೆಚ್ಚೋ ಅಥವಾ ಸಿಂಡಿಕೇಟ್‌ ಸಮಿತಿಯ ತನಿಖೆ ಹೆಚ್ಚೋ?

ಸದ್ಯ ಹಂಪಿ ಕನ್ನಡ ವಿಶ್ವವಿದ್ಯಾಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಮನಿಸಿದರೆ ಇಂಥದ್ದೊಂದು ಪ್ರಶ್ನೆ ಮೂಡದೇ ಇರಲಾರದು. ವಿ.ವಿ. ಸಿಂಡಿಕೇಟ್‌ ಸಭೆಯಲ್ಲಿ ಕೈಗೊಂಡಿರುವ ನಿರ್ಣಯಕ್ಕೆ ತದ್ವಿರುದ್ಧವಾದ ಪ್ರಕ್ರಿಯೆ ವಿ.ವಿ.ಯಲ್ಲಿ ನಡೆಯುತ್ತಿರುವುದೇ ಇದಕ್ಕೆ ಮುಖ್ಯ ಕಾರಣ.

ಡಿ. 6ರಂದು ನಡೆದ ಸಿಂಡಿಕೇಟ್‌ ಸಭೆಯಲ್ಲಿ 2015ರಿಂದ 2021ರ ವರೆಗಿನ ಎಲ್ಲ ರೀತಿಯ ಕಾಮಗಾರಿ, ಖರೀದಿ, ಲಂಚದ ಆರೋಪದ ಕುರಿತು ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಲು ನಿರ್ಣಯ ತೆಗೆದುಕೊಳ್ಳಲಾಗಿತ್ತು. ಇನ್ನೇನು ತನಿಖೆ ಆರಂಭವಾಗಬೇಕು. ಆದರೆ, 2020ರ ಮಾರ್ಚ್‌ 20ರಂದು ಸಿಂಡಿಕೇಟ್‌ ಸದಸ್ಯ ಜೈಭೀಮ್‌ ಆರ್‌. ಕಟ್ಟಿ ಅವರ ಪತ್ರ ಹಾಗೂ 204ನೇ ಸಿಂಡಿಕೇಟ್‌ ಸಮಿತಿ ಸಭೆಯ ನಿರ್ಣಯದಂತೆ 2015ರಿಂದ 2020ರಲ್ಲಿ ಕೈಗೊಂಡ ಕಾಮಗಾರಿಗಳ ವೆಚ್ಚ ಪರಿಶೀಲನೆಗೆ ಸಮಿತಿ ರಚಿಸಲಾಗಿತ್ತು.

ADVERTISEMENT

ಸಮಿತಿ ಸದಸ್ಯ ಪ್ರೊ.ಜಿ.ಸಿ. ರಾಜಣ್ಣ ಅಧ್ಯಕ್ಷತೆಯಲ್ಲಿ 2021ರ ಫೆಬ್ರುವರಿ 21ರಂದು ಸಮಿತಿ ಸಭೆ ಸೇರಲಾಗಿತ್ತು. ಅದಾದ ಬಳಿಕ ಸಮಿತಿ ಒಂದು ಸಲವೂ ಸಭೆ ಸೇರಿರಲಿಲ್ಲ. ಆದರೆ, ಡಿ. 28ರಂದು ಸಮಿತಿ ಏಕಾಏಕಿ ಸಭೆ ಸೇರಿ, ಪರಿಶೀಲನೆ ಮುಂದುವರೆಸಿದೆ. ಇದನ್ನು ಕುಲಸಚಿವ ಪ್ರೊ. ಎ. ಸುಬ್ಬಣ್ಣ ರೈ ‘ಪ್ರಜಾವಾಣಿ’ಗೆ ಖಚಿತಪಡಿಸಿದ್ದಾರೆ. ಆದರೆ, ಸಭೆಯ ಮಾಹಿತಿ ಹಂಚಿಕೊಂಡಿಲ್ಲ.

ಎಲ್ಲವೂ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಲು ನಿರ್ಣಯ ಕೈಗೊಂಡಿರುವಾಗ ಮತ್ತೊಂದು ಸಮಿತಿಗೆ ವೆಚ್ಚದ ಪರಿಶೀಲನೆಗೆ ಅವಕಾಶ ಮಾಡಿಕೊಟ್ಟಿರುವುದು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಇಷ್ಟೊಂದು ದೀರ್ಘ ಅವಧಿಯ ನಂತರ ಸಮಿತಿ ಕ್ರಿಯಾಶೀಲವಾಗಿರುವುದು ಕೂಡ ಸಂಶಯ ಮೂಡಿಸಿದೆ. ಇದು ದಿಕ್ಕು ತಪ್ಪಿಸುವ ಯತ್ನ ಎಂಬ ಆರೋಪ ಕೇಳಿ ಬಂದಿವೆ.

ಬಡ್ತಿಗೆ ಲಂಚ, ಪಿಂಚಣಿ, ಶಿಷ್ಯವೇತನ ಪಡೆಯಬೇಕಾದರೆ ಕಮಿಷನ್‌ ಪಾವತಿಸುವುದು ಸೇರಿದಂತೆ ಹಲವು ರೀತಿಯ ಗಂಭೀರ ಸ್ವರೂಪದ ಭ್ರಷ್ಟಾಚಾರದ ಆರೋಪಗಳನ್ನು ಹಾಲಿ ಕುಲಪತಿ ಪ್ರೊ.ಸ.ಚಿ.ರಮೇಶ ಎದುರಿಸುತ್ತಿದ್ದಾರೆ. ಈ ಕುರಿತು ಸ್ವತಃ ವಿಶ್ವವಿದ್ಯಾಲಯದ ಸಿಬ್ಬಂದಿಯೇ ನೇರ ಆರೋಪ ಮಾಡಿದ್ದಾರೆ. ಅವರ ವಿರುದ್ಧ ಧರಣಿ ಕೂಡ ನಡೆಸಿದ್ದಾರೆ.

ಇದರ ಬಗ್ಗೆ ಸಿಂಡಿಕೇಟ್‌ ಸಭೆಯಲ್ಲಿ ವಿಸ್ತೃತ ಚರ್ಚೆ ನಡೆಸಿದ ಬಳಿಕ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿಯಿಂದ ತನಿಖೆ ನಡೆಸಲು ಒಕ್ಕೊರಲಿನ ತೀರ್ಮಾನ ಕೈಗೊಳ್ಳಲಾಗಿದೆ. ಹೀಗಿದ್ದರೂ ಕಾರ್ಯಕಾರಿ ಸಮಿತಿ ಸದಸ್ಯರನ್ನು ಒಳಗೊಂಡ ಸಮಿತಿಯಿಂದ ಮತ್ತೊಂದು ಆಂತರಿಕ ತನಿಖೆ ನಡೆಸುವ ಅಗತ್ಯವಿತ್ತೇ ಎಂಬ ಪ್ರಶ್ನೆ ಮೂಡಿದೆ. ತಮ್ಮ ವಿರುದ್ಧದ ಭ್ರಷ್ಟಾಚಾರದ ಆರೋಪಗಳಿಗಿಂತ ಹಿಂದಿನ ಕುಲಪತಿಯಲ್ಲಾದ ಕಾಮಗಾರಿಗಳ ಕುರಿತು ಎರಡುವರೆ ವರ್ಷಗಳ ನಂತರ ತನಿಖೆಗೆ ಆಸಕ್ತಿ ತೋರುತ್ತಿರುವುದು ಕೂಡ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ.

‘ಸಿಂಡಿಕೇಟ್‌ ‌ಸಮಿತಿ ರಚನೆಯ ತನಿಖಾ ಸಮಿತಿಗಿಂತ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಗೆ ಹೆಚ್ಚಿನ ಅಧಿಕಾರ‌, ಗೌರವ ಇದೆ. ಈ ಅಂಶವನ್ನು ಕಾರ್ಯಕಾರಿ ಸಮಿತಿಯ ಸದಸ್ಯರೆಲ್ಲರೂ ಗಮನಿಸಬೇಕು. ಒಂದು ಸಲ ಕೈಗೊಂಡ ನಿರ್ಣಯಕ್ಕೆ ವಿರುದ್ಧವಾಗಿ ನಡೆದುಕೊಳ್ಳುವುದು ಅಪಚಾರ. ಅದನ್ನು ತಡೆಯುವ ಕೆಲಸ ಸಮಿತಿ ಸದಸ್ಯರು ಮಾಡಬೇಕು. ಇಲ್ಲವಾದರೆ ಅವರು ಕುಲಪತಿ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆ ಎಂಬ ಅನುಮಾನ ಮೂಡಿಸುತ್ತದೆ’ ಎಂದು ಬೋಧಕ, ಬೋಧಕೇತರ ನೌಕರರ ಸಂಘದವರು ಅಭಿಪ್ರಾಯ ಪಟ್ಟಿದ್ದಾರೆ.

ಮುಖ್ಯಸ್ಥರಾಗಿ ಮುಂದುವರೆಸಲು ಸೂಚನೆ
‘ಸಹ ಪ್ರಾಧ್ಯಾಪಕ ಎಂ. ಮಲ್ಲಿಕಾರ್ಜುನಗೌಡ ಅವರಿಗೆ ಕನ್ನಡ ಸಾಹಿತ್ಯ ಅಧ್ಯಯನ ವಿಭಾಗದ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲು ಅನುವು ಮಾಡಿಕೊಡಬೇಕು’ ಎಂದು ಧಾರವಾಡ ಹೈಕೋರ್ಟ್‌ ಸಂಚಾರಿ ಪೀಠವು ಹಂಪಿ ಕನ್ನಡ ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಎ.ಸುಬ್ಬಣ್ಣ ರೈ ಅವರಿಗೆ ಸೂಚನೆ ನೀಡಿದೆ.

ಮುಖ್ಯಸ್ಥ ಹುದ್ದೆಯಿಂದ ತೆಗೆದು, ಬೇರೆಡೆ ವರ್ಗಾವಣೆ ಮಾಡಿದ್ದನ್ನು ಪ್ರಶ್ನಿಸಿ ಮಲ್ಲಿಕಾರ್ಜುನಗೌಡ ಕೋರ್ಟ್‌ ಮೊರೆ ಹೋಗಿದ್ದರು. ನ್ಯಾಯಾಲಯವು ವಿಚಾರಣೆ ಬಾಕಿ ಇರಿಸಿ ಮಧ್ಯಂತರ ಆದೇಶ ಹೊರಡಿಸಿದೆ. ‘ಮಲ್ಲಿಕಾರ್ಜುನಗೌಡ ಅವರಿಗೆ ಮುಖ್ಯಸ್ಥರಾಗಿ ಮುಂದುವರೆಸಬೇಕೆಂದು ನ್ಯಾಯಾಲಯ ಆದೇಶ ನೀಡಿರುವ ಪ್ರತಿ ಇನ್ನೂ ನಮ್ಮ ಕೈಸೇರಿಲ್ಲ’ ಎಂದು ಸುಬ್ಬಣ್ಣ ರೈ ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದರು.

***

ಹಿಂದಿನ ಕಾರ್ಯಕಾರಿ ಸಮಿತಿ ಸಭೆಯ ನಿರ್ಣಯದಂತೆ ಈಗ ವೆಚ್ಚದ ಪರಿಶೀಲನೆ ನಡೆಸಲಾಗುತ್ತಿದೆ. ಇದರಲ್ಲಿ ತಪ್ಪೇನೂ ಇಲ್ಲ.
-ಪ್ರೊ. ಎ. ಸುಬ್ಬಣ್ಣ ರೈ,ಕುಲಸಚಿವ, ಹಂಪಿ ಕನ್ನಡ ವಿಶ್ವವಿದ್ಯಾಲಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.