ADVERTISEMENT

ತೋರಣಗಲ್ಲು: ಕರಾಟೆಯಲ್ಲಿ ಮಿಂಚುತ್ತಿರುವ ವೈಶಾಲಿ

ವಾರದಲ್ಲಿ ಮೂರು ದಿನ ಅಭ್ಯಾಸ; ದೇಶ–ವಿದೇಶದಲ್ಲೂ ಪದಕ ಬೇಟೆ

ಬಿ.ಯರ್ರಿಸ್ವಾಮಿ
Published 12 ಫೆಬ್ರುವರಿ 2020, 19:45 IST
Last Updated 12 ಫೆಬ್ರುವರಿ 2020, 19:45 IST
ಪದಕಗಳೊಂದಿಗೆ ಕರಾಟೆ ಪ್ರತಿಭೆ ವೈಶಾಲಿ
ಪದಕಗಳೊಂದಿಗೆ ಕರಾಟೆ ಪ್ರತಿಭೆ ವೈಶಾಲಿ   

ತೋರಣಗಲ್ಲು: ಸಮೀಪದ ಕುರೆಕುಪ್ಪ ಗ್ರಾಮದ ನಿವಾಸಿ, ಶಂಕರಗುಡ್ಡ ಕಾಲೊನಿಯ ಆದರ್ಶ ವಿದ್ಯಾಲಯದ 7ನೇ ತರಗತಿ ವಿದ್ಯಾರ್ಥಿನಿ ವೈಶಾಲಿ ತನ್ನ ಕರಾಟೆ ಪ್ರತಿಭೆಯಿಂದ ಗ್ರಾಮದಲ್ಲಿ ಮನೆ ಮಾತಾಗಿದ್ದಾಳೆ.

ಜಿಲ್ಲಾಮಟ್ಟದಿಂದ ಅಂತರರಾಷ್ಟ್ರೀಯ ಕರಾಟೆ ಸ್ಪರ್ಧೆಗಳಲ್ಲಿ ಆಕೆ ಗೆದ್ದ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳು ಅವಳ ಸಾಧನೆ ಸಾರುತ್ತವೆ.‌‌ 6ನೇ ವಯಸ್ಸಿನಿಂದಲೇ ಆಕೆ ಕರಾಟೆ ಅಭ್ಯಾಸದಲ್ಲಿ ತೊಡಗಿದ್ದಾಳೆ.ತೋರಣಗಲ್ಲಿನ ವಿಜಯ ವಿಠ್ಠಲನಗರದ ಕರಾಟೆ ತರಬೇತಿ ಶಾಲೆಯ ಶಿಕ್ಷಕ ಕಟ್ಟೆಸ್ವಾಮಿ ಆಕೆಯ ಮಾರ್ಗದರ್ಶಕರು.

ವಾರದಲ್ಲಿ ಮೂರು ದಿನ ಅಂದರೆ ಬುಧವಾರ ಮತ್ತು ಶನಿವಾರ ಸಂಜೆ 5ರಿಂದ 6.30ರ ವರೆಗೆ ಹಾಗೂ ಭಾನುವಾರ ಬೆಳಿಗ್ಗೆ 8 ರಿಂದ 10.30ರ ಆಕೆ ಕರಾಟೆ ಅಭ್ಯಾಸ ಮಾಡುತ್ತಿದ್ದಾಳೆ.

ADVERTISEMENT

2019ರ ಮೇ 3ರಿಂದ 5ರ ವರೆಗೆ ಮಲೇಷ್ಯಾದದಲ್ಲಿ ಓಕನೋವ ಗೋಜು - ರಿಯು ಕರಾಟೆ - ಡು ಫೆಡರೇಷನ್ ವತಿಯಿಂದ ನಡೆದ ಅಂತರರಾಷ್ಟ್ರೀಯ ಕರಾಟೆಯ 16ನೇ ಓಪನ್ ಚಾಂಪಿಯನ್‍ಷಿಪ್‍ನ 13 ವಯಸ್ಸಿನವರ ಕಟಾ ವಿಭಾಗದಲ್ಲಿ 3ನೇ ಸ್ಥಾನದೊಂದಿಗೆ ಬೆಳ್ಳಿ ಪದಕ ಗೆದ್ದಿದ್ದಾಳೆ. ಆಕೆಗೆ ಮಲೇಷ್ಯಾ ಸರ್ಕಾರ ಗ್ರಾಮೀಣ ಪ್ರತಿಭೆ ಎಂಬ ಪ್ರಮಾಣ ಪತ್ರ ನೀಡಿ ಗೌರವಿಸಿದೆ.

2018ರಲ್ಲಿ ಬಳ್ಳಾರಿಯಲ್ಲಿ ಬುಡಾಕಾನ್ ಕರಾಟೆ ಅಕಾಡೆಮಿ ಮತ್ತು ಬಳ್ಳಾರಿ ಜಿಲ್ಲೆಯ ಕರಾಟೆ ಸ್ಪೋರ್ಟ್ಸ್ ಅಸೋಸಿಯೇಷನ್ ನಡೆಸಿದ ಜಿಲ್ಲಾಮಟ್ಟದಲ್ಲಿ ಸ್ಪರ್ಧೆಯ ಕುಮಿತೆ ವಿಭಾಗದಲ್ಲಿ ಬೆಳ್ಳಿ ಹಾಗೂ ಟೀಮ್ ಕಾಟಾದಲ್ಲಿ ಕಂಚು ಪದಕವನ್ನು ಪಡೆದಿದ್ದಾಳೆ.

2017ರಲ್ಲಿ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಕೇಂದ್ರ ಸರ್ಕಾರದ ಕ್ರೀಡಾ ಸಚಿವಾಲಯದ ನೇತೃತ್ವದಲ್ಲಿ ನಡೆದ ರಾಷ್ಟ್ರ ಮಟ್ಟದ ಶ್ರೀಲಂಕಾ ಓಪನ್ ಕರಾಟೆ ಚಾಂಪಿಯನ್‍ಶಿಪ್‍ನ ವೈಯಕ್ತಿಕ ಕಟಾ ವಿಭಾಗದಲ್ಲಿ ಪ್ರಥಮ ಸ್ಥಾನದೊಂದಿಗೆ ಚಿನ್ನದ ಪದಕ, ಗುಂಪು ವಿಭಾಗದ ಟೀಮ್ ಕಟಾದಲ್ಲಿ ಪ್ರಥಮ ಸ್ಥಾನದೊಂದಿಗೆ ಬಂಗಾರದ ಪದಕ ಹಾಗೂ ಕುಮಿತೆ ವಿಭಾಗದಲ್ಲಿ ದ್ವೀತಿಯ ಸ್ಥಾನದೊಂದಿಗೆ ಬೆಳ್ಳಿ ಪದಕ ಜಯಿಸಿದ್ದಾಳೆ.

2016ರಲ್ಲಿ ಸಿಂಧನೂರಿನಲ್ಲಿ ಕರ್ನಾಟಕದ ಸ್ಪೋರ್ಟ್ಸ್ ಕ್ಲಬ್ ನಡೆಸಿದ ಮೊದಲ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್‍ಶಿಪ್‍ನ ಕಟಾ ಮತ್ತು ಕುಮಿತೆ ವಿಭಾಗದಲ್ಲಿ ಬೆಳ್ಳಿ ಪದಕ,2017ರಲ್ಲಿ ಗಂಗಾವತಿ
ಯಲ್ಲಿ ಬ್ರೈಟ್ ಕರಾಟೆ ಸ್ಪೋರ್ಟ್ ಅಸೋಸಿಯೇಷನ್ ನಡೆಸಿದ ರಾಜ್ಯ ಮಟ್ಟದ ಸ್ಪರ್ಧೆಯ ಕುಮಿತೆ ವಿಭಾಗದಲಿ ಚಿನ್ನ, ಕಟಾ ಮತ್ತು ಟೀಮ್ ಕಟಾ ವಿಭಾಗದಲ್ಲಿ ಬೆಳ್ಳಿ ಪದಕ ಪಡೆದಿದ್ದಾಳೆ.

ಕರಾಟೆಯ ಜೊತೆಗೆ ಕಬಡ್ಡಿ, ಈಜು, ವಾಲಿಬಾಲ್ ಆಟದಲ್ಲೂ ಪರಿಶ್ರಮವುಳ್ಳ ವೈಶಾಲಿ ಕ್ಲಸ್ಟರ್‌
ಮಟ್ಟದಲ್ಲಿ ಅನೇಕ ಬಹುಮಾನ ಬಾಚಿದ್‌ದು ವಿಶೇಷ. ನವೋದಯ ಶಾಲೆಗೆ ಹಿಂದಿನ ವರ್ಷ ಆಯ್ಕೆಯಾಗಿ
ದ್ದರೂ ಕರಾಟೆಯ ಕಲಿಕೆಗೆ ತೊಡಕಾಗುತ್ತದೆ ಎಂಬ ಕಾರಣಕ್ಕೆ ಈಗಿರುವ ಶಾಲೆಯಲ್ಲೇ ಮುಂದುವರಿದಿದ್ದಾಳೆ.

‘ಅಂತರರಾಷ್ಟ್ರೀಯ ಸ್ಪರ್ಧೆಗಳಿಗೆ ಮಗಳನ್ನು ಕರೆದೊಯ್ದಾಗ ಲಕ್ಷಾಂತರ ರೂಪಾಯಿ ವ್ಯಯಿಸಬೇಕಾಗುತ್ತದೆ. ಕುರೆಕುಪ್ಪ ಪುರಸಭೆ ಮತ್ತು ಕ್ರೀಡಾ ಇಲಾಖೆಯು ನೆರವು ನೀಡಬೇಕು’ ಎಂದು ಆಕೆಯ ತಂದೆ ತಳವಾರ ಹೊನ್ನೂರಸ್ವಾಮಿ ಅಭಿಪ್ರಾಯಪಟ್ಟರು.

*
ಹಿಂದಿನ ಡಿಸೆಂಬರ್‌ನಲ್ಲಿ ಬ್ಲಾಕ್ ಬೆಲ್ಟ್ ಪರೀಕ್ಷೆಯಲ್ಲಿ ಉತ್ತೀರ್ಣಳಾಗಿರುವ ವೈಶಾಲಿಗೆ ಉಜ್ವಲ ಭವಿಷ್ಯವಿದೆ.
-ಕಟ್ಟೆಸ್ವಾಮಿ, ತರಬೇತುದಾರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.