ADVERTISEMENT

ಹೊಸಪೇಟೆಯಲ್ಲಿ ನಾಲ್ಕಕ್ಕೇರಿದ ಕೊರೊನಾ ಸೋಂಕಿತರ ಸಂಖ್ಯೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2020, 4:30 IST
Last Updated 4 ಏಪ್ರಿಲ್ 2020, 4:30 IST
ಕೊರೊನಾ ಸೋಂಕು
ಕೊರೊನಾ ಸೋಂಕು   

ಹೊಸಪೇಟೆ: ನಗರದಲ್ಲಿ ಇನ್ನೊಬ್ಬ ವ್ಯಕ್ತಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದ್ದು, ನಗರದಲ್ಲಿ ಸೋಂಕಿತರ ಸಂಖ್ಯೆ ಶನಿವಾರ ನಾಲ್ಕಕ್ಕೇರಿದೆ. ಇದರೊಂದಿಗೆ ಬಳ್ಳಾರಿ ಜಿಲ್ಲೆ ಸೋಂಕಿತರ ಒಟ್ಟು ಸಂಖ್ಯೆ ಐದಕ್ಕೇರಿದೆ. ಗುರುವಾರ ಸಿರುಗುಪ್ಪದ ಬಾಲಕನಿಗೆ ಸೋಂಕು ತಗುಲಿತ್ತು.

ಇಲ್ಲಿನ ಎಸ್.ಆರ್.ನಗರದ ಒಂದೇ ಕುಟುಂಬದ ಮೂವರಿಗೆ ಮಾ.30ರಂದು ಸೋಂಕು ದೃಢಪಟ್ಟಿತ್ತು. ಈಗ ಅವರ ಸಂಬಂಧಿಕರೊಬ್ಬರಿಗೂ ಸೋಂಕು ತಗುಲಿದ್ದು, 45 ವರ್ಷದ ವ್ಯಕ್ತಿ ಸೋಂಕಿಗೆ ಒಳಗಾಗಿದ್ದು ಬಳ್ಳಾರಿಯ ವಿಮ್ಸ್‌ನಲ್ಲಿ ಐಸೋಲೇಷನ್‌ನಲ್ಲಿ ಇಡಲಾಗಿದೆ.

ಮೂವರಿಗೆ ಸೋಂಕು ದೃಢಪಟ್ಟ ಬಳಿಕ ಅವರ ಸಂಬಂಧಿಕರು ಸೇರಿದಂತೆ ನೆರೆಮನೆಯ ಒಟ್ಟು ಹತ್ತು ಜನರನ್ನು ಪ್ರತ್ಯೇಕವಾಗಿ ಇರಿಸಲಾಗಿತ್ತು. ಎಲ್ಲರ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು. ಈ ಪೈಕಿ ಒಬ್ಬರಿಗೆ ಸೋಂಕು ತಗುಲಿರುವುದು ಖಚಿತವಾದರೆ, ಇನ್ನುಳಿದ ಒಂಬತ್ತು ಜನರ ವರದಿ ನೆಗೆಟಿವ್ ಬಂದಿದೆ.

ADVERTISEMENT

ಸೋಂಕು ದೃಢಪಟ್ಟ ವಿಷಯವನ್ನು ಇನ್ನು ಮುಂದೆ ಜಿಲ್ಲಾ ಕೇಂದ್ರದ ಬದಲು ಬೆಂಗಳೂರಿನಲ್ಲಿ ಘೋಷಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ತಿಳಿಸಿದ್ದಾರೆ. ಸೋಂಕು ತಗುಲಿರುವ ವಿಷಯವನ್ನು ಹೆಸರು ಹೇಳಲಿಚ್ಛಿಸದ ವೈದ್ಯರು ಪ್ರಜಾವಾಣಿಗೆ ಖಚಿತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.