ADVERTISEMENT

ವಿಜಯನಗರ ಅಖಾಡಕ್ಕೆ ಗಣಿ ಮಾಲೀಕ ಘೋರ್ಪಡೆ ಅವರನ್ನು ಅಭ್ಯರ್ಥಿ ಮಾಡಿದ ಕೈ ಮರ್ಮವೇನು?

ಶಶಿಕಾಂತ್ ಎಸ್. ಶೆಂಬೆಳ್ಳಿ
Published 1 ಡಿಸೆಂಬರ್ 2019, 10:47 IST
Last Updated 1 ಡಿಸೆಂಬರ್ 2019, 10:47 IST
ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ ಗುಂಡೂರಾವ ಅವರು ಭಾನುವಾರ ವೆಂಕಟರಾವ ಘೋರ್ಪಡೆ ಅವರಿಗೆ ಪಕ್ಷದ ‘ಬಿ’ ಫಾರಂ ನೀಡಿದರು
ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ ಗುಂಡೂರಾವ ಅವರು ಭಾನುವಾರ ವೆಂಕಟರಾವ ಘೋರ್ಪಡೆ ಅವರಿಗೆ ಪಕ್ಷದ ‘ಬಿ’ ಫಾರಂ ನೀಡಿದರು   

ಹೊಸಪೇಟೆ: ಬಹಳ ಅಳೆದು ತೂಗಿ ವಿಜಯನಗರ ಕ್ಷೇತ್ರದ ಉಪಚುನಾವಣೆಯಲ್ಲಿ ವೆಂಕಟರಾವ ಘೋರ್ಪಡೆ ಅವರನ್ನು ಕಾಂಗ್ರೆಸ್‌ ಕಣಕ್ಕಿಳಿಸಲು ತೀರ್ಮಾನಿಸಿದೆ.

ಚುನಾವಣೆಗೆ ನಾಮಪತ್ರ ಸಲ್ಲಿಸಲು ಸೋಮವಾರ (ನ.18) ಕೊನೆಯ ದಿನವಾಗಿದ್ದು, ಅಭ್ಯರ್ಥಿ ಆಯ್ಕೆಗೆ ಕೊನೆಯ ಕ್ಷಣದ ವರೆಗೆ ತೀವ್ರ ಕಸರತ್ತು ನಡೆಸಿ, ಘೋರ್ಪಡೆ ಹೆಸರು ಅಂತಿಮಗೊಳಿಸಿದ ನಂತರ ಕೆ.ಪಿ.ಸಿ.ಸಿ. ಅಧ್ಯಕ್ಷ ದಿನೇಶ ಗುಂಡೂರಾವ ಭಾನುವಾರ ಬೆಂಗಳೂರಿನಲ್ಲಿ ‘ಬಿ’ ಫಾರಂ ನೀಡಿದರು.
ಕಲ್ಲುಕಂಬ ಪಂಪಾಪತಿ, ಆರ್‌. ಕೊಟ್ರೇಶ್‌, ಗುಜ್ಜಲ್‌ ನಾಗರಾಜ ಹಾಗೂ ಮೊಹಮ್ಮದ್‌ ಇಮಾಮ್‌ ನಿಯಾಜಿ ಅವರು ಟಿಕೆಟ್‌ ಆಕಾಂಕ್ಷಿಗಳಾಗಿದ್ದರು. ಆದರೆ, ಲೆಕ್ಕಾಚಾರ ಹಾಕಿ ಘೋರ್ಪಡೆ ಅವರಿಗೆ ಪಕ್ಷ ಟಿಕೆಟ್‌ ನೀಡಿದೆ.

ಈಗಾಗಲೇ ಬಿಜೆಪಿಯಿಂದ ಆನಂದ್‌ ಸಿಂಗ್‌ ಕಣಕ್ಕಿಳಿಯುವುದು ಖಚಿತವಾಗಿದೆ. ಎಚ್‌.ಆರ್‌.ಗವಿಯಪ್ಪ ಅವರನ್ನು ಪಕ್ಷಕ್ಕೆ ಸೆಳೆದುಕೊಂಡು ಚುನಾವಣಾ ಅಖಾಡಕ್ಕೆ ಇಳಿಸಲು ಕಾಂಗ್ರೆಸ್‌ ಚಿಂತಿಸಿತ್ತು. ಆದರೆ, ಗವಿಯಪ್ಪನವರು ಸ್ಪರ್ಧಿಸಲು ಹಿಂಜರಿದರು. ಇದು ಕಾಂಗ್ರೆಸ್‌ನ ಯೋಜನೆಗಳೆಲ್ಲ ತಲೆಕೆಳಗಾಗುವಂತೆ ಮಾಡಿತು. ಅಭ್ಯರ್ಥಿಯ ಹೆಸರು ಅಂತಿಮಗೊಳಿಸಲು ತಡವಾಯಿತು.

ADVERTISEMENT

ಆನಂದ್‌ ಸಿಂಗ್‌ ಅವರನ್ನು ಮಣಿಸಬೇಕಾದರೆ ಆರ್ಥಿಕವಾಗಿಯೂ ಸದೃಢರಾಗಿರುವ ವ್ಯಕ್ತಿಯಿದ್ದರೆ ಉತ್ತಮ ಎಂದರಿತು ಗಣಿ ಮಾಲೀಕರಾಗಿರುವ ಘೋರ್ಪಡೆ ಅವರನ್ನು ಪಕ್ಷ ಆಯ್ಕೆ ಮಾಡಿದೆ. ಸ್ಥಳೀಯವಾಗಿ ಕಾಂಗ್ರೆಸ್‌ನಲ್ಲಿ ಹಲವು ಜನ ಮುಖಂಡರಿದ್ದಾರೆ. ಆದರೆ, ಆನಂದ್‌ ಸಿಂಗ್‌ ಅವರನ್ನು ಎದುರಿಸುವ ಸಾಮರ್ಥ್ಯದ ಬಗ್ಗೆ ಅನುಮಾನ ಮೂಡಿದ್ದರಿಂದ ‘ಹೊರಗಿನವರು’ ಎಂಬ ಹಣೆಪಟ್ಟಿ ಇದ್ದರೂ ಸಹ ಚಿಂತೆಯಿಲ್ಲ ಎಂದು ನಿರ್ಧರಿಸಿ ಘೋರ್ಪಡೆ ಅವರನ್ನು ಕಣಕ್ಕಿಳಿಸಿದೆ.

ಒಂದುವೇಳೆ ಸ್ಥಳೀಯ ಮುಖಂಡರ ಪೈಕಿ ಯಾರಿಗಾದರೂ ಒಬ್ಬರಿಗೆ ಟಿಕೆಟ್‌ ನೀಡಿದರೆ ಪಕ್ಷದಲ್ಲಿ ಅಸಮಾಧಾನ ಭುಗಿಲೇಳುವ ಸಾಧ್ಯತೆ ಇತ್ತು. ಈಗ ಆ ಸಮಸ್ಯೆ ಕಾಂಗ್ರೆಸ್ಸಿಗಿಲ್ಲ. ನಿಯಾಜಿ ಸ್ವಲ್ಪ ಮಟ್ಟಿಗೆ ಮುನಿಸಿಕೊಂಡಿರುವುದು ಬಿಟ್ಟರೆ ಅಂತಹ ವಿರೋಧದ ದನಿ ಪಕ್ಷದಲ್ಲಿ ಕೇಳಿ ಬಂದಿಲ್ಲ.

‘ಸಂಡೂರು ರಾಜಮನೆತನಕ್ಕೆ ಸೇರಿದ ಎಂ.ವೈ. ಘೋರ್ಪಡೆ ಅವರ ಸೋದರ ವೆಂಕಟರಾವ ಘೋರ್ಪಡೆ ಅಮೆರಿಕದ ಕ್ಯಾಲಿಫೋರ್ನಿಯಾ ವಿಶ್ವವಿದ್ಯಾಲಯದಲ್ಲಿ ಉನ್ನತ ಶಿಕ್ಷಣ ಮುಗಿಸಿದ್ದಾರೆ. ಮೃದು ಭಾಷಿಯಾಗಿರುವ ಅವರು ಗಣಿ ಮಾಲೀಕರೂ ಹೌದು. ಯಾವುದೇ ಕಪ್ಪು ಚುಕ್ಕೆ ಇಲ್ಲದ ವ್ಯಕ್ತಿ ಅವರಾಗಿದ್ದು, ಅವರಿಗೆ ಟಿಕೆಟ್‌ ನೀಡಿರುವುದು ಸರಿಯಾದ ನಿರ್ಧಾರ’ ಎಂದು ಕಾಂಗ್ರೆಸ್‌ ಮುಖಂಡ ನಿಂಬಗಲ್‌ ರಾಮಕೃಷ್ಣ ತಿಳಿಸಿದ್ದಾರೆ.

‘ಹೊರಗಿನವರು’ ಎಂಬುದೊಂದು ಬಿಟ್ಟು ಟೀಕಿಸಲು ಬಿಜೆಪಿಗೆ ಯಾವುದೇ ವಿಷಯವೇ ಇಲ್ಲ. ಅಂದಹಾಗೆ ಘೋರ್ಪಡೆಯವರು ಹೊರಗಿನವರಲ್ಲ. ನೆರೆಯ ಸಂಡೂರಿನವರು. ಈ ಹಿಂದೆ ಜಿಲ್ಲಾ ಪಂಚಾಯಿತಿ ಅಧ್ಯಕ್ಷರಾಗಿ ಕೆಲಸ ನಿರ್ವಹಿಸಿದ್ದಾರೆ. ಹಾಗೆ ನೋಡಿದರೆ ಆನಂದ್‌ ಸಿಂಗ್‌ ಕೂಡ ಹೊರಗಿನವರೇ. ಅವರು ಮೂಲತಃ ಕಂಪ್ಲಿಯವರು. ಒಳ್ಳೆ ಚಾರಿತ್ರ್ಯ ಹೊಂದಿರುವ ವ್ಯಕ್ತಿಗೆ ಪಕ್ಷ ಟಿಕೆಟ್‌ ನೀಡಿದೆ. ಅವರನ್ನು ಆಯ್ಕೆ ಮಾಡುವ ಹೊಣೆಗಾರಿಕೆ ಮತದಾರರ ಮೇಲಿದೆ’ ಎಂದು ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.