ADVERTISEMENT

ಕರೂರು: ಕೊಟ್ಟೂರು ಬಸವೇಶ್ವರ ಜಾತ್ರೆ ಸಂಪನ್ನ

​ಪ್ರಜಾವಾಣಿ ವಾರ್ತೆ
Published 30 ಜನವರಿ 2026, 2:26 IST
Last Updated 30 ಜನವರಿ 2026, 2:26 IST
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು
ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವ ಅದ್ಧೂರಿಯಾಗಿ ಜರುಗಿತು   

ತೆಕ್ಕಲಕೋಟೆ: ಸಮೀಪದ ಕರೂರು ಗ್ರಾಮದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಗುರುವಾರ ಅದ್ಧೂರಿಯಾಗಿ ಸಂಪನ್ನಗೊಂಡಿತು.

ಗುರುವಾರ ಬೆಳಿಗ್ಗೆ ವೀರಗಾಸೆ, ರಾಂಡೋಲ್ ಸೇರಿದಂತೆ ಸಕಲ ವಾದ್ಯ ಮೇಳದೊಂದಿಗೆ ಕುಂಭ ಹೊತ್ತ ಮಹಿಳೆಯರಿಂದ ಎತ್ತಿನ ಬಂಡಿಯಲ್ಲಿ ಶಿವಕುಮಾರ ಸ್ವಾಮಿಗಳ ಭಾವಚಿತ್ರ ಮೆರವಣಿಗೆ ನಡೆಯಿತು. ನಂತರ ಗದುಗಿನ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯಜ್ಜ ಅವರಿಗೆ ತುಲಾಭಾರ ನಡೆಸಲಾಯಿತು. ಆ ಬಳಿಕ ಕೊಟ್ಟೂರು ಬಸವೇಶ್ವರ ಮೂರ್ತಿಗೆ ಗಂಗಾಭಿಷೇಕ, ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ನಾಮಾವಳಿ ಬಳಿಕ ಮಹಾಮಂಗಳಾರತಿ ನಡೆಯಿತು. ಜಂಗಮ ಗಣಾರಾಧನೆಯ ನಂತರ ಭಕ್ತರಿಗೆ ಪ್ರಸಾದ ವಿತರಣೆ ಮಾಡಲಾಯಿತು.

ಸಂಜೆ ಕೊಪ್ಪಳ ಗವಿಸಿದ್ದೇಶ್ವರ ಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಅವರು ಭಕ್ತರಿಗೆ ಸಂದೇಶವಾಣಿ ನೀಡಿದರು. ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದ ಚರಣಗಿರಿ ಸಂಸ್ಥಾನ ಮಠದ ಅಭಿನವ ಮಹಂತ ಸ್ವಾಮೀಜಿ, ಹಾಲ್ವಿ ಕರ್ಚಿಗನೂರು ಅವರಿಂದ ಪುರಾಣ ಮಹಾ ಮಂಗಳ ಮಾಡಲಾಯಿತು.

ADVERTISEMENT

ನಂತರ ವಿವಿಧ ಹೂಗಳು ಮತ್ತು ಹಸಿರು ತೋರಣಗಳಿಂದ ಅಲಂಕರಿಸಿದ ಭವ್ಯ ರಥಕ್ಕೆ ಶ್ರೀಗಳು, ಈಡುಗಾಯಿ ಒಡೆದು ರಥೋತ್ಸವಕ್ಕೆ ಚಾಲನೆ ನೀಡಿದರು.

ಬಸವೇಶ್ವರರ ಜಯಘೋಷ ಕೂಗುತ್ತ ಭಕ್ತರು ಹಗ್ಗ ಹಿಡಿದು ರಥವನ್ನು ಎಳೆಯುತ್ತಿದ್ದಂತೆ ನೆರೆದ ಭಕ್ತಸಾಗರ ಹೂಹಣ್ಣು-ಉತ್ತತ್ತಿಯನ್ನು ರಥಕ್ಕೆ ಎಸೆದು ಭಕ್ತಿ ಮೆರೆದರು. ಚಲಿಸಿದ ರಥ ಪಾದಗಟ್ಟೆಗೆ ಸಾಗಿ ಎದುರು ಬಸವಣ್ಣನಿಗೆ ಪೂಜೆ ಸಲ್ಲಿಸಿದ ನಂತರ ಮರಳಿ ರಥವನ್ನು ಯಥಾಸ್ಥಾನಕ್ಕೆ ತಂದು ಮುಕ್ತಾಯಗೊಳಿಸಲಾಯಿತು. ಜಾತ್ರೆಗೆ ಸುತ್ತಲಿನ ಹಲವು ಗ್ರಾಮಗಳ ಸಾವಿರಾರು ಭಕ್ತರು ಭಾಗವಹಿಸಿ ಹರಕೆ ತೀರಿಸಿದರು.

ತೆಕ್ಕಲಕೋಟೆ ಸಮೀಪದ ಕರೂರು ಗ್ರಾಮದ ಕೊಟ್ಟೂರು ಬಸವೇಶ್ವರ ದೇವಸ್ಥಾನದ ಜಾತ್ರಾ ಮಹೋತ್ಸವವು ಅದ್ಧೂರಿಯಾಗಿ ಜರುಗಿತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.