ಬಳ್ಳಾರಿ: ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ (20 ಅಂಶ ಸೇರಿದಂತೆ) ಈ ವರ್ಷದ ಮೊದಲನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯನ್ನು ಇದೇ 22ರಂದು ನಿಗದಿ ಮಾಡಲಾಗಿತ್ತು. ಆದರೆ, ಜಿಲ್ಲೆಯ ಜನಪ್ರತಿನಿಧಿಗಳಿಗೆ ಪೂರ್ವ ನಿಗದಿತ ಕಾರ್ಯಕ್ರಮಗಳು ಇರುವುದರಿಂದ ಸಭೆಗೆ ಅಲಭ್ಯರಾಗುತ್ತಿರುವುದರಿಂದ ಸಭೆಯನ್ನು ರದ್ದುಗೊಳಿಸಲಾಗಿದೆ.
ಈ ಮೂಲಕ ಜಿಲ್ಲೆಯ ಅಭಿವೃದ್ಧಿಯ ಬಗ್ಗೆ ಜಿಲ್ಲೆಯ ಜನಪ್ರತಿನಿಧಿಗಳಿಗೆ ಇರುವ ಬದ್ಧತೆ ಎಂಥದ್ದು ಎಂಬುದು ಮತ್ತೊಮ್ಮೆ ಬಯಲಾಗಿದೆ.
ನಿಯಮಿತವಾಗಿ ಕೆಡಿಪಿ ಸಭೆಗಳು ನಡೆಯುತ್ತಿಲ್ಲ. ಸಭೆಗಳನ್ನು ನಡೆಸಿ ಆಡಳಿತ ಯಂತ್ರವನ್ನು ಚುರುಕುಗೊಳಿಸುವ ಕೆಲಸ ನಡೆಯುತ್ತಿಲ್ಲ ಎಂಬ ಆರೋಪ ಜನರಿಂದ ಕೇಳಿ ಬಂದಿತ್ತು. ಹೀಗಾಗಿ ಜುಲೈ 22ರಂದು ಕೆಡಿಪಿ ಸಭೆ ನಿಗದಿ ಮಾಡಲಾಗಿತ್ತು. ಜೂನ್‌ನಲ್ಲಿಯೇ ನಡೆಯಬೇಕಿದ್ದ ಈ ಸಭೆ ಈಗಾಗಲೇ ಒಂದು ತಿಂಗಳು ವಿಳಂಬವಾಗಿತ್ತು. ಈಗ ಜನಪ್ರತಿನಿಧಿಗಳ ಅಲಭ್ಯತೆಯ ಕಾರಣಕ್ಕೆ ಮುಂದೂಡಲಾಗಿದೆ.
ಜಿಲ್ಲಾ ಉಸ್ತುವಾರಿ ಸಚಿವರು ಮೂರು ತಿಂಗಳಿಗೆ ಒಮ್ಮೆ ಸಭೆ ನಡೆಸಿ, ಇಲಾಖಾವಾರು ಆಗಿರುವ ಪ್ರಗತಿ ಪರಿಶೀಲನೆ ಮಾಡುತ್ತಾರೆ. ಅಭಿವೃದ್ಧಿಗೆ ಹಿನ್ನಡೆ, ಪ್ರಗತಿ, ಗುರಿ ಸಾಧನೆಗೆ ಇರುವ ತೊಡಕುಗಳು, ಸಮಸ್ಯೆಗಳನ್ನು ಪರಿಶೀಲಿಸಿ ಸೂಕ್ತ ನಿರ್ದೇಶನಗಳನ್ನು ನೀಡುತ್ತಾರೆ. ಅಭಿವೃದ್ಧಿಯಲ್ಲಿ ಹಿನ್ನಡೆ ಕಾಯ್ದುಕೊಂಡ, ಪ್ರಗತಿ ಸಾಧಿಸದ ಇಲಾಖೆ ಮುಖ್ಯಸ್ಥರಿಗೆ ಚುರುಕು ಮುಟ್ಟಿಸುವ ಕೆಲಸ ಮಾಡುತ್ತಾರೆ. ಸಮಸ್ಯೆಗಳಿದ್ದರೆ ಪರಿಹರಿಸುವುದು, ಸರ್ಕಾರದ ಮಟ್ಟದಲ್ಲಿ ಆಗಬೇಕಿದ್ದರೆ ಅದಕ್ಕೆ ತಕ್ಕಂತೆ ಸೂಚನೆಗಳನ್ನು ಕೊಟ್ಟು ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ.
ಅದಕ್ಕೆ ಪೂರಕವಾಗಿ ಸ್ಥಳೀಯ ಜನಪ್ರತಿನಿಧಿಗಳೇ ಸಭೆಯಲ್ಲಿದ್ದು, ತಮ್ಮ ಅಭಿಪ್ರಾಯಗಳನ್ನು, ಕ್ಷೇತ್ರದಲ್ಲಿನ ಸಮಸ್ಯೆಗಳನ್ನು ತಿಳಿಸುತ್ತಾರೆ. ಆದರೆ, ಜನಪ್ರತಿಧಿಗಳೇ ಇಲ್ಲದೇ ಸಭೆ ನಡೆಸುವುದು ಹೇಗೆ ಎಂದು ಸಚಿವರು ಕೆಡಿಪಿ ಸಭೆಯನ್ನು ರದ್ದುಗೊಳಿಸಿದ್ದಾರೆ ಎನ್ನುತ್ತವೆ ಮೂಲಗಳು.
ಈ ವರ್ಷದಲ್ಲಿ ಈ ವೇಳೆಗಾಗಲೇ ಕೆಡಿಪಿಯ ಒಂದು ಸಭೆ ನಡೆಯಬೇಕಿತ್ತು. (ಮೊದಲ ತ್ರೈಮಾಸಿಕ ಏಪ್ರಿಲ್–ಜೂನ್), ಜುಲೈ ತಿಂಗಳು ಎರಡನೇ ತ್ರೈಮಾಸಿಕ ಸಭೆಗೆ ಒಳಪಡುತ್ತದೆ. ಆದರೆ, ಮೊದಲ ಸಭೆಯ ಭವಿಷ್ಯವೇ ಹೀಗಾಗಿರುವಾಗ, ಇನ್ನು ಎರಡನೇ ಸಭೆಯ ಚರ್ಚೆಗಳೇ ಅಪ್ರಸ್ತುತ ಎಂಬಂತೆ ಆಗಿದೆ.
ಜಿಲ್ಲೆಯಲ್ಲಿ ಈ ವರ್ಷ ಬರದ ಛಾಯೆ ಕಾಣಿಸುತ್ತಿದೆ. ಮಳೆಯಾಶ್ರಿತ ಪ್ರದೇಶಗಳಲ್ಲಿ ಬೆಳೆ ಸೊರಗುತ್ತಿದೆ. ನಗರದಲ್ಲಿ ಸಮಸ್ಯೆಗಳು ತಾಂಡವವಾಡುತ್ತಿವೆ. ಜಿಲ್ಲೆಯ ಯಾವ ತಾಲೂಕಿನ ರಸ್ತೆಗಳೂ ಸರಿಯಾಗಿಲ್ಲ. ಗಣಿ ಬಾಧಿತ ಪ್ರದೇಶಗಳ ಸಮಸ್ಯೆಯೇ ಬೇರೆ ಸ್ವರೂಪದ್ದಾಗಿವೆ. ಈ ವರ್ಷ ಸಾಹಿತ್ಯ ಸಮ್ಮೇಳನ ಬೇರೆ ಜಿಲ್ಲೆಗೆ ಬಂದಿದೆ. ಇಂಥ ಹೊತ್ತಿನಲ್ಲಿ ಆಡಳಿತ ಯಂತ್ರಕ್ಕೆ ಚುರುಕು ನೀಡಬೇಕಾಗಿದ್ದ ಜನಪ್ರತಿನಿಧಿಗಳು ಹೀಗೆ ಪೂರ್ವ ನಿಗದಿತ ಕೆಲಸಗಳಿಗೆ ಗಂಟುಬಿದ್ದು, ಆರಿಸಿದ ಜನರನ್ನು ಮರೆತರೆ ಹೇಗೆ ಎಂಬ ಪ್ರಶ್ನೆ ಉದ್ಭವವಾಗಿದೆ.
ನನೂ ಸಭೆಗೆ ಲಭ್ಯವಾಗುವುದಿಲ್ಲ ಎಂದೇನೂ ತಿಳಿಸಿಲ್ಲ. ನಾನಂತೂ ಬಳ್ಳಾರಿಯಲ್ಲಿ ಇದ್ದೇನೆ. ಕೆಡಿಪಿ ಸಭೆ ನಡೆದಿದ್ದರೆ ನಾನು ಖಚಿತವಾಗಿಯೂ ಭಾಗವಹಿಸುತ್ತಿದ್ದೆ.– ವೈ. ಎಂ ಸತೀಶ್ ವಿಧಾನ ಪರಿಷತ್ ಸದಸ್ಯ
ಕೆಡಿಪಿ ಸಭೆ ನಿಗದಿ ಮಾಡಿರುವ ದಿನದಂದು ನಾನು ಬಳ್ಳಾರಿಯಲ್ಲೇ ಇರಲಿದ್ದೇನೆ. ಸಭೆಗೆ ಬರಲಾಗದು ಎಂದು ನಾನಂತೂ ಕಾರಣ ಕೊಟ್ಟಿಲ್ಲ. ಸಭೆ ಇದ್ದಿದ್ದರೆ ಭಾಗಿಯಾಗುತ್ತಿದ್ದೆ.ನಾರಾ ಭರತ್ ರೆಡ್ಡಿ ಶಾಸಕ ಬಳ್ಳಾರಿ ನಗರ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.