ಬಳ್ಳಾರಿ: ‘ಕೆಐಒಸಿಎಲ್ ವಿಚಾರದಲ್ಲಿ ರಾಜ್ಯ ಸರ್ಕಾರವು ಸ್ಥಳೀಯ ಜನಪ್ರತಿನಿಧಿಗಳನ್ನು ಎತ್ತಿಕಟ್ಟುತ್ತಿದೆ. ಎನ್‌ಎಂಡಿಸಿಯ ಕಾರ್ಯಚಟುವಟಿಕೆಯ ವಿರುದ್ಧವಾಗಿ ನಡೆದುಕೊಳ್ಳುತ್ತಿದೆ’ ಎಂದು ದೆಹಲಿಯಲ್ಲಿ ಇತ್ತೀಚೆಗೆ ಆರೋಪಿಸಿದ್ದ ಕೇಂದ್ರ ಉಕ್ಕು ಸಚಿವ ಎಚ್.ಡಿ ಕುಮಾರಸ್ವಾಮಿ ಹೇಳಿಕೆಗೆ ಬಳ್ಳಾರಿ–ವಿಜಯನಗರ ಸಂಸದ ಇ. ತುಕಾರಾಂ ಬುಧವಾರ ತೀಕ್ಷ್ಣ ತಿರುಗೇಟು ನೀಡಿದ್ದಾರೆ.
ಈ ಕುರಿತು ಎಚ್‌ಡಿಕೆಗೆ ಪತ್ರ ಬರೆದಿರುವ ತುಕಾರಾಂ, ಎಚ್‌ಡಿಕೆ ಹೇಳಿಕೆಯನ್ನು ಆಕ್ಷೇಪಿಸಿದ್ದಾರೆ. ‘4 ಭಾರಿ ಶಾಸಕನಾಗಿ, 2018ರ ಸರ್ಕಾರದಲ್ಲಿ ತಮ್ಮದೇ ಸಂಪುಟದಲ್ಲಿ ಸಚಿವನಾಗಿ, ಸಂಸದನಾಗಿ ಸಾಂವಿಧಾನಿಕ ಮೌಲ್ಯಗಳಿಗೆ ಅನುಗುಣವಾಗಿ ಕಾರ್ಯನಿರ್ವಹಿಸುತ್ತಿರುವುದಾಗಿಯೂ, ನಿಷ್ಕಳಂಕ ರಾಜಕಾರಣ ಮಾಡಿಕೊಂಡು ಬರುತ್ತಿರುವುದಾಗಿ’ ತಮ್ಮ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.
ಸಂಡೂರಿನಲ್ಲಿ ಎನ್‌ಎಂಡಿಸಿ ಕಂಪನಿಯು ಅವೈಜ್ಞಾನಿಕವಾಗಿ ಗಣಿಗಾರಿಕೆಯಲ್ಲಿ ತೊಡಗಿರುವುದಾಗಿಯೂ, ಕನ್ನಡಿಗರಿಗೆ ಉದ್ಯೋಗ ವಂಚಿಸಿರುವುದಾಗಿಯೂ, ಕಾರ್ಖಾನೆ ಸ್ಥಾಪಿಸುವುದಾಗಿ ಹೇಳಿ ಸಾವಿರಾರು ಎಕರೆ ಜಾಗ ಪಡೆದುಕೊಂಡರೂ ಈ ವರೆಗೆ ಕಾರ್ಖಾನೆ ಸ್ಥಾಪನೆ ಮಾಡದೇ ಇರುವುದನ್ನು ಅವರು ತಮ್ಮ ಪತ್ರದಲ್ಲಿ ನೆನಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.