ADVERTISEMENT

ಬಳ್ಳಾರಿ | ‘ಪುನಶ್ಚೇತನ’ ಯೋಜನೆ ವಿಳಂಬ: ಅತೃಪ್ತಿ

‘ಸುಪ್ರೀಂ’ ನಿರ್ದೇಶನ ಪಡೆಯುವ ಎಚ್ಚರಿಕೆ ನೀಡಿದ ಮೇಲುಸ್ತುವಾರಿ ಪ್ರಾಧಿಕಾರ

ಆರ್. ಹರಿಶಂಕರ್
Published 31 ಡಿಸೆಂಬರ್ 2025, 6:22 IST
Last Updated 31 ಡಿಸೆಂಬರ್ 2025, 6:22 IST
ಸಂಜಯ ಬಿಜ್ಜೂರು
ಸಂಜಯ ಬಿಜ್ಜೂರು   

ಬಳ್ಳಾರಿ: ‘ಗಣಿಗಾರಿಕೆ ಪರಿಣಾಮ ವಲಯದ ಸಮಗ್ರ ಪರಿಸರ ಯೋಜನೆಯಡಿ (ಸಿಇಪಿಎಂಐಜೆಡ್)’  ‘ಕರ್ನಾಟಕ ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನ ನಿಗಮವು (ಕೆಎಂಇಆರ್‌ಸಿ) ಒಟ್ಟು ₹12,049.51 ಕೋಟಿ ಮೌಲ್ಯದ 497 ಯೋಜನೆಗಳ ಪ್ರಸ್ತಾವಗಳಿಗೆ ಅನುಮೋದನೆ ನೀಡಿದ್ದರೂ, ಈ ವರೆಗೆ ಬಳಕೆಯಾಗಿದ್ದು ₹934.42 ಕೋಟಿ.

ಯೋಜನೆಗಳ ಜಾರಿ ವಿಳಂಬಕ್ಕೆ ಕೆಎಂಇಆರ್‌ಸಿಯ ಮೇಲುಸ್ತುವಾರಿ (ಮೇಲುಸ್ತುವಾರಿ ಪ್ರಾಧಿಕಾರ–ಒಎ) ಆಗಿರುವ ನಿವೃತ್ತ ನ್ಯಾಯಮೂರ್ತಿ ಸುದರ್ಶನ್‌ ರೆಡ್ಡಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ. 

ರಾಜ್ಯದ ಬಳ್ಳಾರಿ, ಚಿತ್ರದುರ್ಗ, ತುಮಕೂರು, ವಿಜಯನಗರ ಜಿಲ್ಲೆಗಳಲ್ಲಿ ನಡೆದಿದ್ದ ವ್ಯಾಪಕ ಅಕ್ರಮ ಗಣಿಗಾರಿಕೆಯಿಂದ ಪರಿಸರ ನಾಶ, ಜನ ಜೀವನದ ಮೇಲೆ ದುಷ್ಪರಿಣಾಮಗಳು ಆಗಿದ್ದವು. ಗಣಿ ಬಾಧಿತ ಪ್ರದೇಶಗಳ ಪುನಶ್ಚೇತನಕ್ಕಾಗಿ ಸುಪ್ರೀಂ ಕೋರ್ಟ್ ನಿರ್ದೇಶನದ ಮೇರೆಗೆ 2014ರಲ್ಲಿ ಕೆಎಂಇಆರ್‌ಸಿ ಯನ್ನು ಸ್ಥಾಪಿಸಲಾಗಿದ್ದು, ಇದರಲ್ಲಿ ₹24,929 ಕೋಟಿ ಹಣವಿದೆ.

ADVERTISEMENT

ಇಷ್ಟು ದೊಡ್ಡ ಪ್ರಮಾಣದಲ್ಲಿ ಹಣ ಲಭ್ಯವಿದ್ದರೂ, ಪುನಶ್ಚೇತನ ಕಾರ್ಯ ಆಗುತ್ತಿಲ್ಲ. ಈ ವಿಷಯ ಇತ್ತೀಚೆಗೆ ನಡೆದ ಕೆಎಂಇಆರ್‌ಸಿಯ 24ನೇ ಸಭೆಯಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಅನುಮೋದಿತ ₹12,049.51 ಕೋಟಿ ಮೌಲ್ಯದ 497 ಪ್ರಸ್ತಾವಗಳಲ್ಲಿ ₹7,749.26 ಕೋಟಿ ಮೊತ್ತದ 349 ಯೋಜನೆಗಳಿಗೆ ಮಾತ್ರ ಡಿಪಿಆರ್‌ (ವಿಸ್ತೃತ ಯೋಜನಾ ವರದಿ) ಆಗಿದೆ. ₹6,270.38 ಕೋಟಿ ಮೊತ್ತದ 281 ಡಿಪಿಆರ್‌ಗಳಿಗೆ ಆಡಳಿತಾತ್ಮಕ ಅನುಮೋದನೆ ಸಿಕ್ಕಿದೆ. ₹4,236.60 ಕೋಟಿಯ ಮೊತ್ತದ 148 ಡಿಪಿಆರ್‌ಗಳನ್ನು ವಿವಿಧ ಇಲಾಖೆಗಳು ಇನ್ನೂ ಸಲ್ಲಿಸಬೇಕಾಗಿದೆ. 

ಆಡಳಿತಾತ್ಮಕ ಅನುಮೋದನೆ ಸಿಕ್ಕಿರುವ 281 ಯೋಜನೆಗಳ ಪೈಕಿ 203 ಯೋಜನೆಗಳಿಗೆ ಮಾತ್ರ  ಟೆಂಡರ್‌ ಕರೆಯಲಾಗಿದೆ. ಒಟ್ಟು ₹2,320.60 ಕೋಟಿ ಮೌಲ್ಯದ 189 ಯೋಜನೆಗಳಿಗೆ ಮಾತ್ರ ಕಾರ್ಯಾದೇಶ ಸಿಕ್ಕಿದೆ. ಈ ಯೋಜನೆಗಳಿಗೆ ಕೇವಲ ₹934.42 ಕೋಟಿ ಬಳಕೆಯಾಗಿದೆ ಎಂಬುದು ಕೆಎಂಇಆರ್‌ಸಿಯ ಸಭೆಯ ನಡಾವಳಿಗಳಿಂದ ಬಹಿರಂಗವಾಗಿದೆ. 

‘ಯೋಜನೆಗಳ ಜಾರಿಯಲ್ಲಿ ಇಲಾಖೆಗಳ ಈ ನಿರ್ಲಕ್ಷ್ಯವನ್ನು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಲಾಗುವ ವರದಿಯಲ್ಲಿ ಉಲ್ಲೇಖಿಸಲಾಗುತ್ತದೆ. ಅನುಷ್ಠಾನಕ್ಕೆ ವೇಗ ನೀಡಲು ಇಲಾಖೆಗಳು ವಿಫಲವಾದರೆ, ಸುಪ್ರೀಂ ಕೋರ್ಟ್‌ನಿಂದ ನಿರ್ದೇಶನ ಪಡೆಯುವ ಅನಿವಾರ್ಯತೆ ಎದುರಾಗಲಿದೆ’ ಎಂದು ನ್ಯಾ. ಸುದರ್ಶನ್‌ ರೆಡ್ಡಿ ಎಚ್ಚರಿಕೆ ನೀಡಿದ್ದಾರೆ. ಈ ವಿಳಂಬವನ್ನು ಪರಿಹರಿಸಲು ಅವರು ಮಾರ್ಗೋಪಾಯಗಳನ್ನೂ ಸೂಚಿಸಿದ್ದಾರೆ. ‘ಸರ್ಕಾರದ ಎಲ್ಲ ಇಲಾಖೆಗಳ ಉನ್ನತ ಮಟ್ಟದ ಅಧಿಕಾರಿಗಳು ಕೆಎಂಇಆರ್‌ಸಿ ಸಭೆಯಲ್ಲಿ ಭಾಗವಹಿಸಬೇಕು. ವಿಶೇಷವಾಗಿ ಪ್ರಗತಿ ಪರಿಶೀಲನಾ ಸಭೆಗಳಲ್ಲಿ ಇಲಾಖಾ ಕಾರ್ಯದರ್ಶಿಗಳು ಇರಬೇಕು‘ ಎಂದು ತಾಕೀತು ಮಾಡಿದ್ದಾರೆ. 

ಯೋಜನೆಗಳ ವಿಳಂಬದಲ್ಲಿ ಇಲಾಖೆಗಳ ಪಾತ್ರ ಇದೆ. ಕೆಎಂಇಆರ್‌ಸಿಯ ಯೋಜನೆಗಳ ಅನುಷ್ಠಾನಕ್ಕೆ ಪ್ರತ್ಯೇಕ ಪ್ರಕ್ರಿಯೆ ಇದೆ. ನ್ಯಾಯಾಲಯದ ನಿರ್ದೇಶನಗಳಿಗೆ ಒಳಪಟ್ಟಿರಬೇಕಾಗುತ್ತದೆ. ಆದರೂ 2025–26ನೇ ಸಾಲಿನಲ್ಲಿ ಯೋಜನೆಗಳು ವೇಗವಾಗಿ ಜಾರಿಗೆ ಬರುತ್ತಿವೆ. 
ಸಂಜಯ ಬಿಜ್ಜೂರು ವ್ಯವಸ್ಥಾಪಕ ನಿರ್ದೇಶಕ ಕೆಎಂಇಆರ್‌ಸಿ 

ಉತ್ತರದ ‘ಕಿದ್ವಾಯಿ’ ವಿಳಂಬ 

ಬಳ್ಳಾರಿ ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಕೇಂದ್ರದಲ್ಲಿ ಕೆಎಂಇಆರ್‌ಸಿಯ ₹372.90 ಕೋಟಿ ಅನುದಾನದಲ್ಲಿ 200 ಹಾಸಿಗೆಗಳ ಕ್ಯಾನ್ಸರ್‌ ಆಸ್ಪತ್ರೆ ಸ್ಥಾಪಿಸಲು ನಿರ್ಧರಿಸಲಾಗಿದೆ. ಇದು ಉತ್ತರ ಕರ್ನಾಟಕ ಭಾಗದ ‘ಕಿದ್ವಾಯಿ’ ಆಗುವ ಮಹತ್ವಾಕಾಂಕ್ಷೆ ಹೊಂದಲಾಗಿದೆ. ಆದರೆ ಆಸ್ಪತ್ರೆಗೆ ಸಿಬ್ಬಂದಿ ಮಂಜೂರಾತಿ ಮತ್ತು ನಂತರದ ವರ್ಷದಲ್ಲಿ ವೇತನ ಪಾವತಿಯನ್ನು ಸರ್ಕಾರ ವಹಿಸಿಕೊಳ್ಳಬೇಕು. ಈ ಬಗ್ಗೆ ರಾಜ್ಯ ಹಣಕಾಸು ಇಲಾಖೆ ಈವರೆಗೆ ಯಾವುದೇ ಸ್ಪಷ್ಟನೆ ನೀಡಿಲ್ಲ. ಸ್ಪಷ್ಟನೆ ಸಿಗುವವರೆಗೆ ಕೆಎಂಇಆರ್‌ಸಿಯು ಯೋಜನೆಯನ್ನು ಬದಿಗಿಟ್ಟಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.