ADVERTISEMENT

ಕೊಟ್ಟೂರು ಜಾತ್ರೆ ಯಶಸ್ವಿಗೆ ಶ್ರಮಿಸೋಣ: ಶಾಸಕ ಕೆ.ನೇಮರಾಜ್ ನಾಯ್ಕ್

ಫೆ.12ರಂದು ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವ

​ಪ್ರಜಾವಾಣಿ ವಾರ್ತೆ
Published 10 ಜನವರಿ 2026, 2:05 IST
Last Updated 10 ಜನವರಿ 2026, 2:05 IST
<div class="paragraphs"><p>ಕೊಟ್ಟೂರಿನ ಕೊಟ್ಟೂರೇಶ್ವರ ರಥೋತ್ಸವದ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಶಾಸಕ ಕೆ.ನೇಮರಾಜ್ ನಾಯ್ಕ್ ಮಾತನಾಡಿದರು</p></div>

ಕೊಟ್ಟೂರಿನ ಕೊಟ್ಟೂರೇಶ್ವರ ರಥೋತ್ಸವದ ಪ್ರಯುಕ್ತ ಶುಕ್ರವಾರ ಏರ್ಪಡಿಸಿದ್ದ ಪೂರ್ವಭಾವಿ ಸಭೆಯನ್ನುದ್ದೇಶಿಸಿ ಶಾಸಕ ಕೆ.ನೇಮರಾಜ್ ನಾಯ್ಕ್ ಮಾತನಾಡಿದರು

   

ಕೊಟ್ಟೂರು: ರಥೋತ್ಸವದ ಸಂದರ್ಭದಲ್ಲಿ ಆಗಮಿಸುವ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸೌಕರ್ಯ ಕಲ್ಪಿಸಲು ಅಧಿಕಾರಿಗಳು ಮುಂದಾಗಬೇಕು ಎಂದು ಶಾಸಕ ಕೆ.ನೇಮರಾಜನಾಯ್ಕ ಸೂಚಿಸಿದರು.

ಬರುವ ಫೆ.12 ರಂದು ಜರುಗಲಿರುವ ಕೊಟ್ಟೂರೇಶ್ವರ ಸ್ವಾಮಿ ರಥೋತ್ಸವದ ಪ್ರಯುಕ್ತ ಶುಕ್ರವಾರ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಜಾತ್ರಾ ಸಂದರ್ಭದಲ್ಲಿ ಮೂಲ ಸೌಕರ್ಯಗಳ ಕೊರತೆ ಕಂಡುಬಂದಲ್ಲಿ ಸಂಬಂಧಿಸಿದ ಇಲಾಖಾಧಿಕಾರಿಗಳೆ ಹೊಣೆಯಾಗುತ್ತಾರೆ ಹಾಗೂ ಪಟ್ಟಣದಲ್ಲಿ ಬ್ಯಾನರ್ ಅಳವಡಿಕೆಗೆ ಅವಕಾಶ ನೀಡಬಾರದು ಎಂದು ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿಗೆ ತಾಕೀತು ಮಾಡಿದರು.

ADVERTISEMENT

ಜಿಲ್ಲಾಧಿಕಾರಿ ಕವಿತಾ ಎಸ್. ಮನ್ನಿಕೇರಿ ಮಾತನಾಡಿ, ದೇವಸ್ಥಾನದ ಆವರಣದಲ್ಲಿ ಸಿ.ಸಿ.ಕ್ಯಾಮರಗಳನ್ನು ಅಳವಡಿಸಿ ಸೂಕ್ತ ರಕ್ಷಣೆ ಕಲ್ಪಿಸಬೇಕು ಹಾಗೂ ನೆರಳು, ನೀರಿನ ವ್ಯವಸ್ಥೆ ಕಲ್ಪಿಸಬೇಕೆಂದು ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ ಇವರಿಗೆ ಸೂಚಿಸಿದರು.

ಪಟ್ಟಣದಲ್ಲಿ ಸ್ವಚ್ಛತೆ, ಬೀದಿ ದೀಪಗಳು ಹಾಗೂ ನೀರಿನ ಪೂರೈಕೆ, ಫಾಗಿಂಗ್ ಹಾಗೂ ಪಾದಯಾತ್ರಿಕರಿಗೆ ಬಯಲು ಸ್ಥಳದಲ್ಲಿ ಶಾಮಿಯಾನ ಹಾಕಿಸಿ ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸುವಂತೆ ಪಟ್ಟಣ ಪಂಚಾಯ್ತಿ ಮುಖ್ಯಾಧಿಕಾರಿ ಎ.ನಸರುಲ್ಲ ಇವರಿಗೆ ಸೂಚಿಸಿದರು.

ನಿರಂತರ ವಿದ್ಯುತ್ ಪೂರೈಕೆಗೆ ವ್ಯವಸ್ಥೆ ಮಾಡಿಕೊಳ್ಳುವಂತೆ ಜೆಸ್ಕಾಂ ಇಲಾಖೆ ಎಇಇ ನಾಗರಾಜ್ ಅವರಿಗೆ ಸೂಚಿಸಿದರು.

ಸುತ್ತಮುತ್ತಲಿನ ಪಟ್ಟಣಗಳಿಂದ ವಿಶೇಷ ಬಸ್ಸುಗಳ ವ್ಯವಸ್ಥೆ ಹಾಗೂ ಪಟ್ಟಣದ ಹೊರವಲಯಗಳಲ್ಲಿ ತಾತ್ಕಾಲಿಕ ಬಸ್ ನಿಲ್ದಾಣಗಳನ್ನು ತೆರೆಯುವಂತೆ ಡಿಪೋ ವ್ಯವಸ್ಥಾಪಕರಿಗೆ ಆದೇಶಿಸಿದರು.

ಪಾದಾಯಾತ್ರಿಕರಿಗೋಸ್ಕರ ಎಲ್ಲಾ ಮುಖ್ಯ ರಸ್ತೆಗಳಲ್ಲಿ ತಾತ್ಕಾಲಿಕ ಚಿಕಿತ್ಸಾ ಕೇಂದ್ರಗಳನ್ನು ತೆರೆಯುವುದು ಹಾಗೂ ಔಷಧಿಗಳ ದಾಸ್ತಾನು ಮಾಡಿಕೊಳ್ಳುವಂತೆ ತಾಲ್ಲೂಕು ವೈದ್ಯಾಧಿಕಾರಿಗಳಿಗೆ ಸೂಚಿಸಿದರು. ಅಗ್ನಿಶಾಮಕ ವಾಹನಗಳ ವ್ಯವಸ್ಥೆ ಮಾಡಿಕೊಳ್ಳುವಂತೆ ಇಲಾಖಾಧಿಕಾರಿಗೆ ಸೂಚಿಸಿದರು. ಎಲ್ಲಾ ಇಲಾಖೆಗಳಿಗೆ ವಹಿಸಿದ ಜವಬ್ದಾರಿಯನ್ನು ಅಧಿಕಾರಿಗಳು ಅಚ್ಚುಕಟ್ಟಾಗಿ ನಿರ್ವಹಿಸಿ ರಥೋತ್ಸವವನ್ನು ಯಶಸ್ವಿಗೊಳಿಸಬೇಕು ಎಂದು ಜಿಲ್ಲಾಧಿಕಾರಿಗಳು ಹೇಳಿದರು.

ಪೊಲೀಸ್ ಜಿಲ್ಲಾವರಿಷ್ಠಾಧಿಕಾರಿ ಎಸ್.ಜಾಹ್ನವಿ ಮಾತನಾಡಿ, ರಥೋತ್ಸವದ ಸಂದರ್ಭದಲ್ಲಿ ಬಂದೋಬಸ್ತಿಗಾಗಿ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ ಸೂಕ್ತ ಬಂದೋಬಸ್ತ ಕಲ್ಪಿಸಲಾಗುವುದು ಜೊತೆಗೆ ಸ್ಧಳೀಯರ ಸಹಕಾರ ಅತ್ಯಗತ್ಯ ಎಂದರು.

ಈ ಸಂದರ್ಭದಲ್ಲಿ ಮಹಲ್ ಮಠದ ಶಿವಪ್ರಕಾಶ ಸ್ವಾಮಿ ಕೊಟ್ಟೂರು ದೇವರು, ಮುಖಂಡರಾದ ಎಂ.ಎಂ.ಜೆ.ಹರ್ಷವರ್ಧನ್, ಪಿ.ಎಚ್.ದೊಡ್ಡರಾಮಣ್ಣ, ಸಹಾಯಕ ಆಯುಕ್ತ ವಿವೇಕಾನಂದ, ತಹಶೀಲ್ದಾರ್ ಜಿ.ಕೆ.ಅಮರೀಶ್, ತಾ.ಪಂ. ಇಒ ಬಿ.ಆನಂದ್ ಕುಮಾರ್, ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ, ಧಾರ್ಮಿಕ ಲಾಖೆ ಸಹಾಯಕ ಆಯುಕ್ತೆ ಎಚ್.ಸವಿತಾ, ಪ.ಪಂ. ಮುಖ್ಯಾಧಿಕಾರಿ ಎ.ನಸರುಲ್ಲಾ, ದೇವಸ್ಧಾನ ಕಾರ್ಯನಿರ್ವಾಹಕ ಅಧಿಕಾರಿ ಮಲ್ಲಪ್ಪ, ಧರ್ಮಕರ್ತ ಎಂ.ಕೆ.ಶೇಖರಯ್ಯ, ಅರವಿಂದ್ ಬಸಾಪುರ್, ಕಟ್ಟೆಮನಿ ದೈವಸ್ಥರು, ಆಯಗಾರ ಬಳಗ, ಇಲಾಖಾ ಅಧಿಕಾರಿಗಳು ಹಾಗೂ ಭಕ್ತರು ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.