ಎಲ್.ಕೃಷ್ಣನಾಯ್ಕ, ಶಾಸಕ
ಹೂವಿನಹಡಗಲಿ: ‘ರಾಜ್ಯದಲ್ಲಿ ಜ್ವಲಂತ ಸಮಸ್ಯೆಗಳು ಕಾಡುತ್ತಿದ್ದರೂ ಸರ್ಕಾರ ಜನರ ಬದುಕಿನೊಂದಿಗೆ ಚೆಲ್ಲಾಟವಾಡುತ್ತಿದೆ. ಸರ್ಕಾರದ ವೈಫಲ್ಯ ಮುಚ್ಚಿಕೊಳ್ಳಲು ಸಚಿವ ಪ್ರಿಯಾಂಕ್ ಖರ್ಗೆ ಆರ್‌ಎಸ್ಎಸ್ ನಿಷೇಧಿಸಲು ಸಿಎಂಗೆ ಪತ್ರ ಬರೆದಿದ್ದಾರೆ’ ಎಂದು ಶಾಸಕ ಕೃಷ್ಣನಾಯ್ಕ ಟೀಕಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆರ್‌ಎಸ್ಎಸ್ ನಿರ್ಬಂಧಿಸಲು ನೆಹರೂ, ಇಂದಿರಾಗಾಂಧಿ, ರಾಜೀವ್ ಗಾಂಧಿ ಅವರಿಂದ ಸಾಧ್ಯವಾಗಿಲ್ಲ. ಪ್ರಿಯಾಂಕ್ ಯಾವ ಲೆಕ್ಕ. ಸಿಲಿಕಾನ್ ಸಿಟಿ ಖ್ಯಾತಿಯ ಬೆಂಗಳೂರು ರಸ್ತೆಗಳಲ್ಲೇ ಗುಂಡಿ ಬಿದ್ದಿವೆ. ರಾಜ್ಯದ ಅಭಿವೃದ್ಧಿಗೆ ಗ್ರಹಣ ಹಿಡಿದಿದೆ. ಸರ್ಕಾರದ ಕಾರ್ಯವೈಖರಿ ಹೇಗಿದೆ ಎಂಬುದನ್ನು ಕಾಂಗ್ರೆಸ್ ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಹೇಳಿದ್ದಾರೆ. ಸರ್ಕಾರ ನಡೆಸುವವರು ಜನರ ದಿಕ್ಕು ತಪ್ಪಿಸುವ ವಿಷಯಗಳನ್ನು ಬಿಟ್ಟು ಅಭಿವೃದ್ಧಿಯ ಕಡೆ ಗಮನಹರಿಸಲಿ ಎಂದು ಒತ್ತಾಯಿಸಿದರು.
ಆರ್‌ಎಸ್ಎಸ್ ಶತಾಬ್ದಿ ಪ್ರಯುಕ್ತ ಇದೇ 18 ರಂದು ಪಟ್ಟಣದಲ್ಲಿ ಪಥ ಸಂಚಲನ ಹಮ್ಮಿಕೊಳ್ಳಲಾಗಿದೆ. ಸಾವಿರಾರು ಗಣವೇಷಧಾರಿಗಳು ಪಾಲ್ಗೊಳ್ಳಲಿದ್ದು, ಎಲ್ಲ ನಾಗರಿಕರಿಗೂ ಮುಕ್ತ ಆಹ್ವಾನ ನೀಡಿದ್ದೇವೆ ಎಂದು ತಿಳಿಸಿದರು.
ಬಿಜೆಪಿ ಮಂಡಲ ಅಧ್ಯಕ್ಷ ಮಲ್ಲಿಕಾರ್ಜುನ ಪೂಜಾರ್, ಮುಖಂಡರಾದ ಈಟಿ ಲಿಂಗರಾಜ, ಎಚ್.ಪೂಜಪ್ಪ, ಮಂಜುನಾಥ ಜೈನ್, ಶಂಕರ್ ನವಲಿ, ಆರ್.ಟಿ.ನಾಗರಾಜ ಇದ್ದರು.
ಪ್ರಿಯಾಂಕ್ ಖರ್ಗೆ ಕ್ಷಮೆ ಯಾಚಿಸಲಿ: ‘ಮಹಾತ್ಮ ಗಾಂಧೀಜಿ, ನೆಹರೂ, ಅಂಬೇಡ್ಕರ್ ಅವರೇ ಆರ್ ಎಸ್ಎಸ್ ಚಟುವಟಿಕೆಗಳನ್ನು ಮುಕ್ತವಾಗಿ ಶ್ಲಾಘಿಸಿದ್ದಾರೆ. ಸಚಿವ ಸ್ಥಾನ ಉಳಿಸಿಕೊಳ್ಳುವುದಕ್ಕಾಗಿ ಸಂಘವನ್ನು ನಿಷೇಧಿಸಲು ಪತ್ರ ಬರೆದಿರುವ ಪ್ರಿಯಾಂಕ ಖರ್ಗೆ ಬೇಷರತ್ ಕ್ಷಮೆಯಾಚಿಸಬೇಕು’ ಎಂದು ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಸ್.ಸಂಜೀವರೆಡ್ಡಿ ಆಗ್ರಹಿಸಿದರು.
‘ತಾಕತ್ತಿದ್ದರೆ ಅವರು ಆರ್‌ಎಸ್ಎಸ್ ಬ್ಯಾನ್ ಮಾಡಲಿ. ಆಗ ರಾಷ್ಟ್ರ ಭಕ್ತರು ದೇಶದಿಂದಲೇ ಕಾಂಗ್ರೆಸ್ ಪಕ್ಷವನ್ನು ಬ್ಯಾನ್ ಮಾಡುತ್ತಾರೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.